ADVERTISEMENT

ಸರ್ಕಾರಿ ಆಸ್ಪತ್ರೆ 100 ಹಾಸಿಗೆಗೆ ಏರಿಸಿ

ಶೃಂಗೇರಿಯಲ್ಲಿ ಸಾರ್ವಜನಿಕರಿಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 5:41 IST
Last Updated 28 ಸೆಪ್ಟೆಂಬರ್ 2022, 5:41 IST
ಶೃಂಗೇರಿ ಶಾರದಾ ಮಠಕ್ಕೆ ಮಂಗಳವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿಗಳ ಆರ್ಶೀವಾದ ಪಡೆದರು.
ಶೃಂಗೇರಿ ಶಾರದಾ ಮಠಕ್ಕೆ ಮಂಗಳವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ ಮಠದ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿಗಳ ಆರ್ಶೀವಾದ ಪಡೆದರು.   

ಶೃಂಗೇರಿ: ‘ಶೃಂಗೇರಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುತ್ತೇವೆ. ಈ ಕುರಿತು ಅರಣ್ಯ ಮತ್ತು ಕಂದಾಯ ಸಚಿವರೊಂದಿಗೆ ಚರ್ಚಿಸಿ, ಹೆಚ್ಚಿನ ಅಸ್ಥೆ ವಹಿಸಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಶೃಂಗೇರಿ ಶಾರದಾ ಮಠಕ್ಕೆ ಮಂಗಳವಾರ ಭೇಟಿ ನೀಡಿದ ಅವರಿಗೆ, ಶೃಂಗೇರಿ ನೂರು ಹಾಸಿಗೆ ಆಸ್ಪತ್ರೆ ಹೋರಾಟ ಸಮಿತಿಯ ಆದರ್ಶ್ ಮತ್ತು ತಂಡದವರು ಮನವಿ ನೀಡಿದರು. ಮನವಿಗೆ ಸ್ಪಂದಿಸಿದ ಅವರು ಭರವಸೆ ನೀಡಿದರು.

ಶೃಂಗೇರಿ ನೂರು ಹಾಸಿಗೆ ಆಸ್ಪತ್ರೆ ಹೋರಾಟ ಸಮಿತಿಯ ಆದರ್ಶ್ ಮತ್ತು ತಂಡದವರು, ‘ಸರ್ಕಾರಿ ಆಸ್ಪತ್ರೆಯ ಮೇಲ್ದರ್ಜೆಗಾಗಿ ಗುರುತಿಸಿದ 4 ಕಡೆಯ ಜಾಗವು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಕಂದಾಯ ಅಧಿಕಾರಿಗಳು ಹೇಳುತ್ತಾರೆ. ಎರಡು ವರ್ಷಗಳ ಹಿಂದೆ ಶೃಂಗೇರಿಗೆ ಬಂದಾಗ ಮೇಲ್ದರ್ಜೆಗೆ ಏರಿಸುತ್ತೇನೆ ಆಶ್ವಾಸನೆ ನೀಡಿದ್ದಿರಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದ್ದರು. ಆದರೆ, ಬೇಡಿಕೆ ಈಡೇರಿಲ್ಲ. ಅದರ ಕುರಿತು ವಿಶೇಷ ಗಮನ ನೀಡಿ. ಮಾನವೀಯ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗೆ ಏರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಆಸ್ಪತ್ರೆಯಲ್ಲಿ ಮೂಳೆ, ಇ.ಎನ್.ಟಿ ಹಾಗೂ ಅರಿವಳಿಕೆ ತಜ್ಞರ ಹುದ್ದೆ ಖಾಲಿಯಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಅವಶ್ಯವಿರುವ ವೈದ್ಯಕೀಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ತಾವು ಪ್ರಯತ್ನಿಸಬೇಕು’ ಎಂದರು.

ಮಠದ ಆಡಳಿತಾಧಿಕಾರಿ ಡಾ.ವಿ.ಆರ್. ಗೌರೀಶಂಕರ್, ಡಿ.ಎಚ್.ಒ ಉಮೇಶ್, ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಡಾ.ಮೋಹನ್ ಕುಮಾರ್, ವೈದ್ಯಕೀಯ ಕಾಲೇಜಿನ ಡಾ. ಹರೀಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ದಯಾನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.