
ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬೇಡಿಕೆಗೆ ತಕ್ಕಷ್ಟು ಔಷಧಗಳು ಪೂರೈಕೆ ಆಗುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧ ಮತ್ತು ಮಾತ್ರೆಗಳು ಸಿಗದೆ ರೋಗಿಗಳು ಪರದಾಡುವಂತಾಗಿದೆ.
ಸಾಮಾನ್ಯ ಜ್ವರಕ್ಕೆ ನೀಡಲಾಗುವ ಮಾತ್ರೆಗಳು ಸಹ ಸಿಗುತ್ತಿಲ್ಲ. ಇದರಿಂದಾಗಿ ರೋಗಿಗಳ ಸಂಬಂಧಿಕರು ಹಣ ತೆತ್ತು ಔಷಧ ಖರೀದಿಸಬೇಕಿದೆ. ರಕ್ತದ ಒತ್ತಡಕ್ಕೆ(ಬಿ.ಪಿ) ಸಂಬಂಧಿಸಿದಂತೆ ಒಂದು ಮಾತ್ರೆಗಳು ಹಲವೆಡೆ ಕೊರತೆಯಾಗಿವೆ.
ಜಿಲ್ಲಾಸ್ಪತ್ರೆಯಲ್ಲೂ ಔಷಧ ಕೊರತೆ ಇದ್ದು, ಹೊರಗಿನ ಮೆಡಿಕಲ್ ಶಾಪ್‌ಗಳನ್ನು ಅವಲಂಬಿಸುವಂತಾಗಿದೆ ಎಂದು ರೋಗಿಗಳ ಸಂಬಂಧಿಕರು ದೂರುತ್ತಾರೆ. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಇತ್ತೀಚೆಗೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲೂ ಬಹುತೇಕ ರೋಗಿಗಳ ಸಂಬಂಧಿಕರು ಇದೇ ಅಳಲನ್ನು ತೋಡಿಕೊಂಡಿದ್ದರು.
ತುರ್ತು ಚಿಕಿತ್ಸೆಗಳಿಗೆ ಬೇಕಾದ ಔಷಧ ಮತ್ತು ಮಾತ್ರೆಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಕೊರತೆ ಇಲ್ಲ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಚಂದ್ರಶೇಖರ್ ಹೇಳುತ್ತಾರೆ. ಬಿ.ಪಿ, ಮಧುಮೇಹ, ಜ್ವರ, ಶೀತ, ತಲೆನೋವು, ನಾಯಿ ಕಡಿತ, ಹಾವು ಕಡಿತ ಸೇರಿ ಎಲ್ಲಾ ರೀತಿಯ ಔಷಧಿ ಲಭ್ಯವಿದೆ. ಶೇ 95ರಷ್ಟು ಔಷಧಿಗಳು ಲಭ್ಯವಿದೆ. ಶೇ 5ರಷ್ಟು ಔಷಧಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದರೆ ಚೀಟಿ ನೀಡಲಾಗುತ್ತಿದೆ. ಅವುಗಳು ಕೂಡ ಆಸ್ಪತ್ರೆಯ ಆವರಣದಲ್ಲಿರುವ ಜನರಿಕ್ ಔಷಧಿ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು.
ಇನ್ನು ತಾಲ್ಲೂಕು ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರುವುದು ಕಾಣಿಸುತ್ತಿದೆ. ಕೊಪ್ಪ, ಕಳಸ, ನರಸಿಂಹರಾಜಪುರ, ಶೃಂಗೇರಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಔಷಧ ಹಾಗೂ ಪರಿಕರಗಳ ಕೊರತೆ ಎದುರಾಗಿದೆ. ಬ್ಯಾಂಡೇಜ್ ಬಟ್ಟೆ ಕೂಡ ಇಲ್ಲವಾಗಿದೆ. ಕೈಗವಸು, ಡ್ರಿಪ್ ಸೆಟ್, ಐ.ವಿ ಕ್ಯಾನೆಲ್‌ಗಳ ಕೊರತೆಯನ್ನು ಇಲ್ಲಿನ ತಾಲ್ಲೂಕು ಆಸ್ಪತ್ರೆ ಎದುರಿಸುತ್ತಿದೆ.
ಪೂರಕ ಮಾಹಿತಿ: ಕೆ.ವಿ. ನಾಗರಾಜ್, ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಕೆ.ಎನ್. ರಾಘವೇಂದ್ರ, ಎನ್. ಸೋಮಶೇಖರ್
ನರಸಿಂಹರಾಜಪುರ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವು ಔಷಧಿಗಳು ಹಾಗೂ ಪರಿಕರಗಳ ಕೊರತೆಯಿದೆ. ಜೀವ ರಕ್ಷಕ ಔಷಧಿಗಳು ಲಭ್ಯವಿದೆ. ಆದರೆ ವಿವಿಧ ರೋಗಗಳಿಗೆ ನೀಡುವ 100ರಿಂದ 150 ಔಷಧಿಗಳ ಕೊರತೆ ಇದೆ. ಪ್ರಮುಖವಾಗಿ ರಕ್ತದ ಒತ್ತಡಕ್ಕೆ(ಬಿ.ಪಿ) ಸಂಬಂಧಿಸಿದಂತೆ ಒಂದು ವಿಧದ ಮಾತ್ರೆಯ ಕೊರತೆಯಿದೆ.
ಪ್ರತಿನಿತ್ಯ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ 1500 ರಿಂದ 2 ಸಾವಿರ ಮಾತ್ರೆಗಳು ಬೇಕಾಗುತ್ತದೆ. ಇವುಗಳ ಪೂರೈಕೆ ಕಡಿಮೆಯಾಗಿದೆ. ಮಧುಮೇಹಕ್ಕೆ ಸಂಬಂಧಿಸಿ ಮಾತ್ರೆಗಳ ಕೊರತೆಯಿಲ್ಲ. ಬ್ಯಾಂಡೇಜ್ ಬಟ್ಟೆ ಕೈಗವಸು ಡ್ರಿಪ್ ಸೆಟ್ ಐ.ವಿ ಕ್ಯಾನೆಲ್‌ಗಳ ಕೊರತೆಯಿದೆ. ಜಿಲ್ಲಾ ವೇರ್ ಹೌಸ್‌ನಲ್ಲಿಯೇ ಔಷಧಿಗಳ ಸಂಗ್ರಹ ಕಡಿಮೆಯಿರುವುದರಿಂದ ತಾಲ್ಲೂಕು ಕೇಂದ್ರದ ಆಸ್ಪತ್ರೆಗಳಿಗೆ ಔಷಧಿಗಳ ಪೂರೈಕೆ ಕಡಿಮೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಲಭ್ಯವಿಲ್ಲದೆ ಇರುವ ಔಷಧಿಗಳನ್ನು ಜನೌಷಧಿ ಕೇಂದ್ರಕ್ಕೆ ಬರೆದುಕೊಡಲಾಗುತ್ತಿದೆ. ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಬರೆದು ಕೊಡುತ್ತಿಲ್ಲ ಎಂದು ವೈದ್ಯರು ತಿಳಿಸಿದರು.
ಕೊರತೆಯಿರುವ ಔಷಧಿಗಳನ್ನು ಪ್ರತಿನಿತ್ಯ ₹10 ಸಾವಿರದ ತನಕ ಖರೀದಿಸಲು ಅವಕಾಶವಿದ್ದು ಅದನ್ನು ಖರೀದಿಸುವ ಮೂಲಕ ಔಷಧಿಗಳ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರದ ಕೊರತೆಯಿದೆ. ಸ್ಕ್ಯಾನಿಂಗ್ ಯಂತ್ರ ಖರೀದಿಸಲು ರೆಡಿಯಾಲಿಜಿಸ್ಟ್‌ಗಳ ಕೊರತೆಯೂ ಇದೆ. ಆಸ್ಪತ್ರೆಗೆ ನಾಲ್ಕು ವರ್ಷಗಳ ಹಿಂದೆಯೇ ರೋಗ ಪತ್ತೆ ಪರೀಕ್ಷೆಯ ಪ್ರಯೋಗಾಲಯದ ಅತ್ಯಾಧುನಿಕ ಯಂತ್ರ ಪೂರೈಕೆಯಾಗಿದ್ದರೂ ಪರೀಕ್ಷೆ ಮಾಡಲು ಬೇಕಾದ ಸಮರ್ಪಕ ಪರಿಕರಗಳು ಪೂರೈಕೆ ಆಗದಿರುವುದರಿಂದ ಪರೀಕ್ಷೆ ಮಾಡುವ ಯಂತ್ರದ ಬಳಕೆ ಸಾಧ್ಯವಾಗುತ್ತಿಲ್ಲ.
ಆಸ್ಪತ್ರೆಯಲ್ಲಿ ಎಕ್ಸ್‌ರೇ ಸೌಲಭ್ಯವಿದೆ. ಪ್ರತಿನಿತ್ಯ ಸುಮಾರು 350ರಿಂದ 400 ಹೊರರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಔಷಧಿಗಳ ಕೊರತೆ ಇದ್ದರೂ ಆಸ್ಪತ್ರೆಯ ಅನುದಾನದಲ್ಲಿ ಅವುಗಳನ್ನು ಖರೀದಿಸಿ ರೋಗಿಗಳಿಗೆ ತೊಂದರೆಯಾಗದ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕಳಸ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಕೆಲ ವರ್ಷಗಳಿಂದ ವೈದ್ಯರಿಲ್ಲ ಎಂಬ ಕೊರಗು ಇತ್ತು. ಆದರೆ ಇದೀಗ ಸ್ಥಳೀಯರೇ ಆದ ವೈದ್ಯಕೀಯ ಸ್ನಾತಕೋತ್ತರ ಪದವೀಧರ ಕಾರ್ತಿಕ್ ಶೆಟ್ಟಿ ಆ ಕೊರಗು ನೀಗಿದ್ದಾರೆ. ಅದರೆ ಆಸ್ಪತ್ರೆಯಲ್ಲಿ ಬಹುತೇಕ ಔಷಧಿಗಳ ಪೂರೈಕೆಯೇ ಇಲ್ಲದೆ ರೋಗಿಗಳ ಶುಶ್ರೂಷೆ ಅಪೂರ್ಣವಾಗುತ್ತಿದೆ. ಕಳಸ ತಾಲ್ಲೂಕಿನಲ್ಲಿ 35 ಸಾವಿರ ಜನಸಂಖ್ಯೆ ಇದ್ದು ಬಹುತೇಕರು ಬಡ ಕೃಷಿಕರು ಮತ್ತು ಕೂಲಿ ಕಾರ್ಮಿಕರು. ಆದರೆ ಈ ವರ್ಗಕ್ಕೆ ಉಚಿತವಾಗಿ ಸಿಗಬೇಕಿದ್ದ ವೈದ್ಯಕೀಯ ಸೌಲಭ್ಯ ಔಷಧಿ ಕೊರತೆಯಿಂದ ಮರೀಚಿಕೆ ಆಗಿದೆ.
ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಹುದ್ದೆಯೇ ಖಾಲಿ ಇದೆ. ಸ್ಟಾಫ್ ನರ್ಸ್ ಆ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿನ ಔಷಧಾಗಾರದಲ್ಲಿ ಜ್ವರ ಮತ್ತಿತರ ಸಮಸ್ಯೆ ನಿವಾರಿಸುವ ಆಂಟಿಬಯಾಟಿಕ್ಸ್ ಇಲ್ಲ. ವಾಂತಿ– ಬೇಧಿ ತಡೆಯುವ ಔಷಧಿಗಳೂ ಇಲ್ಲ. ಕೆಮ್ಮಿನ ಸಿರಪ್ ಇಲ್ಲ. ಮಧುಮೇಹದವರಿಗೆ ಬೇಕಾದ ಔಷಧಿ ಸಿಗುತ್ತಿಲ್ಲ. ಮಲೆನಾಡಿನಲ್ಲಿ ಫಂಗಸ್‍ನಿಂದ ಉಂಟಾಗುವ ಚರ್ಮ ರೋಗಗಳಿಗೆ ಬೇಕಾದ ಮುಲಾಮು ಕೂಡ ಲಭ್ಯವಿಲ್ಲ. ಮಹಿಳೆಯರ ರಕ್ತಸ್ರಾವ ತಡೆಯುವ ಔಷಧಿ ಹೃದಯ ಸಂಬಂಧಿ ಸಮಸ್ಯೆಗೆ ಪರಿಹಾರ ನೀಡುವ ಮಾತ್ರೆಗಳು ಇಲ್ಲ. ಅಸ್ತಮಾ ಗುಣಪಡಿಸುವ ಹಾಗೂ ನೋವು ನಿವಾರಕ ಔಷಧಿಯೂ ಇಲ್ಲ. ಹಲ್ಲಿನ ಚಿಕಿತ್ಸೆಗೆ ಬೇಕಾದ ಇಂಜೆಕ್ಷನ್ ಜೊತೆಗೆ ಡ್ರಿಪ್ ಮೂಲಕ ನೀಡಬಹುದಾದ ಪೋಷಕಾಂಶಗಳು ಕೂಡ ಇಲ್ಲವಾಗಿವೆ. ಆಸ್ಪತ್ರೆಗೆ ಬಂದ ಗಾಯಾಳುಗಳಿಗೆ ಶುಶ್ರೂಷೆ ಮಾಡಲು ಬೇಕಾದ ಬ್ಯಾಂಡೇಜ್ ಬಟ್ಟೆ ಮತ್ತು ಮುಲಾಮು ಕೂಡ ಇಲ್ಲದಿರುವ ಸ್ಥಿತಿ ಆಸ್ಪತ್ರೆಯಲ್ಲಿ ಇದೆ.
ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಔಷಧಿ ಅಂಗಡಿಗೆ ಚೀಟಿ ಕೊಡುವಂತಿಲ್ಲ ಎಂಬ ನಿಯಮ ಇದೆ. ಆದರೆ ಆಸ್ಪತ್ರೆಯಲ್ಲೂ ಔಷಧಿ ಇಲ್ಲದೆ ಇಲ್ಲಿನ ವೈದ್ಯ ಸಿಬ್ಬಂದಿ ಕಂಗಾಲಾಗುತ್ತಾರೆ. ವಿಪರ್ಯಾಸ ಎಂದರೆ ಜಿಲ್ಲಾ ಮಟ್ಟದ ವೇರ್ ಹೌಸಿನಲ್ಲಿ ಕೂಡ ಮೇಲಿನ ಔಷಧಿಗಳು ಲಭ್ಯವಿಲ್ಲ. ಇಲ್ಲಿನ ಹಳೆಯ ಎಕ್ಸ್‌ರೇ ಯಂತ್ರ ಕಳಪೆ ಗುಣಮಟ್ಟದ ಫಲಿತಾಂಶ ನೀಡುತ್ತಿದೆ. ಎಕ್ಸ್‌ರೇ ತಂತ್ರಜ್ಞ ಹುದ್ದೆ ಖಾಲಿಯೇ ಇದೆ. ಅಲ್ಟ್ರಾ ಸೌಂಡ್ ಯಂತ್ರವನ್ನು ಮೂಡಿಗೆರೆ ಆಸ್ಪತ್ರೆಗೆ ಕೊಂಡೊಯ್ದಿರುವುದು ತಪ್ಪು ಎಂದು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಲಕ್ಷ್ಮಣಾಚಾರ್ ದೂರುತ್ತಾರೆ. ಔಷಧಿ ಮತ್ತು ಅಗತ್ಯ ಸಲಕರಣೆಗಳ ಕೊರತೆಯಿಂದ ಉತ್ಸಾಹಿ ವೈದ್ಯರ ಪ್ರಯತ್ನ ವ್ಯರ್ಥವಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಕೊಪ್ಪ: ಪಟ್ಟಣದಲ್ಲಿರುವ ಎಂ.ಎಸ್. ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ಕೊರತೆ ಇದ್ದು ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಬಹುತೇಕ ಔಷಧಿಗಳನ್ನು ಆಸ್ಪತ್ರೆ ಹೊರ ಭಾಗದ ಖಾಸಗಿ ಮೆಡಿಕಲ್‌ಗಳಿಂದ ರೋಗಿಗಳು ಅಥವಾ ಅವರ ಕಡೆಯವರು ಹಣ ಕೊಟ್ಟು ತಂದ ಬಳಿಕ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಇದೆ. ಸರ್ಕಾರದ ಅನುದಾನದಲ್ಲಿ ಸಾಧ್ಯವಾದಷ್ಟು ಖರೀದಿಸಲಾಗುತ್ತಿದೆ. ಆದರೂ ಎಲ್ಲಾ ರೋಗಿಗಳಿಗೆ ಅಗತ್ಯವಿರುವಷ್ಟು ಔಷಧಿ ಒದಗಿಸಲು ಸಾಧ್ಯವಾಗುತ್ತಿಲ್ಲ.
ಇದರಿಂದ ರೋಗಿಗಳು ಖಾಸಗಿ ಆಸ್ಪತ್ರೆ ಕಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶಸ್ತ್ರಚಿಕಿತ್ಸೆ ಮಾಡಲು ಬೇಕಾದ ಗ್ಲೌಸ್ ಇನ್ನಿತರೆ ಪೂರಕ ವಸ್ತುಗಳ ಕೊರತೆ ಇದೆ. ಐ.ವಿ ಫ್ಲ್ಯೂಡ್ಸ್ ಕೊರತೆ ಇದೆ. ಸ್ಕ್ಯಾನಿಂಗ್ ಯಂತ್ರ ಲಭ್ಯವಿಲ್ಲ. ಇಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯೂ ಇರುವುದರಿಂದ ಸುತ್ತಮುತ್ತಲಿನ ತಾಲ್ಲೂಕಿನ ಜನ ಆಸ್ಪತ್ರೆಗೆ ಬರುತ್ತಾರೆ. ಇಲ್ಲಿಗೆ ರಕ್ತನಿಧಿ ಕೇಂದ್ರ ಅಗತ್ಯವಿದೆ. ಆದರೆ ಎಲ್ಲವೂ ಇಲ್ಲಗಳ ನಡುವೆಯೇ ಆಸ್ಪತ್ರೆ ಸಾಗುತ್ತಿದೆ.
ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಆಸ್ಪತ್ರೆಯು ಅಭಿವೃದ್ಧಿಯಲ್ಲಿ ದಾಪುಗಾಲಿಟ್ಟಿದ್ದರೂ ಗರ್ಭಿಣಿಯರಿಗೆ ಮಾತ್ರ ನಿತ್ಯವೂ ನರಕ ದರ್ಶನವಾಗುತ್ತಿದೆ. ಹೆರಿಗೆಗೆ ಜಿಲ್ಲಾಸ್ಪತ್ರೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂಜಿಎಂ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ ಅದನ್ನು ನಿರ್ವಹಿಸುವ ಪರಿಣಿತರಿಲ್ಲದೆ ಮೂಲೆ ಸೇರಿದೆ. ಎಂಟು ತಿಂಗಳಿನಿಂದ ಅರವಳಿಕೆ ವೈದ್ಯರಿಲ್ಲದೆ ಗರ್ಭಿಣಿಯರು ಜಿಲ್ಲಾಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹೆರಿಗೆ ಮಾಡಿಸಿಕೊಳ್ಳುವಂತಾಗಿದೆ.
ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಔಷಧಿ ಕೊರತೆ ಹೆಚ್ಚಾಗಿದ್ದು ಅಗತ್ಯ ಔಷಧಿಗಳನ್ನು ಅಭಿವೃದ್ಧಿ ಅನುದಾನದಿಂದ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಬಹುತೇಕ ಔಷಧಿಗಳನ್ನು ಖಾಸಗಿ ಮೆಡಿಕಲ್ ಶಾಪ್‌ಗೆ ಬರೆಯಬೇಕಾದ ಅನಿವಾರ್ಯತೆ ಇದೆ. ಪಟ್ಟಣದ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವ್ಯವಸ್ಥೆ ಉತ್ತಮವಾಗಿದ್ದು ನಾಲ್ಕು ಯಂತ್ರಗಳ ಮೂಲಕ ನೋಂದಾಯಿತ 28 ಮಧುಮೇಹಿಗಳಿಗೆ ವಾರದಲ್ಲಿ 275ಕ್ಕೂ ಹೆಚ್ಚು ಡಯಾಲಿಸಿಸ್ ಮಾಡಲಾಗುತ್ತಿದೆ. ಎಂಜಿಎಂ ಆಸ್ಪತ್ರೆಗೆ ತುರ್ತಾಗಿ ಅರವಳಿಕೆ ವೈದ್ಯರನ್ನು ನೇಮಿಸಬೇಕು. ಅಗತ್ಯ ಔಷಧಿಗಳನ್ನು ಪೂರೈಸಬೇಕು. ಸ್ಕ್ಯಾನಿಂಗ್ ಕೇಂದ್ರವನ್ನು ಕ್ರಿಯಾಶೀಲಗೊಳಿಸಿ ಬಡ ರೋಗಿಗಳಿಗೆ ಆಸ್ಪತ್ರೆಯ ಸವಲತ್ತು ಉಪಯುಕ್ತವಾಗುವಂತೆ ಮಾಡಬೇಕಿದೆ.
ಕಡೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ನಿತ್ಯ ಬಳಕೆಗೆ ಬೇಕಾಗುವ ಔಷಧಗಳು ಲಭ್ಯವಿದೆ. ತುರ್ತು ಸಂದರ್ಭದಲ್ಲಿ ನಾಯಿ ಕಡಿತ ಮತ್ತು ಹಾವು ಕಡಿತಕ್ಕೂ ಚಿಕಿತ್ಸೆ ಲಭ್ಯವಿದೆ ಎನ್ನುತ್ತವೆ ಆಸ್ಪತ್ರೆಯ ಮೂಲಗಳು. ಸ್ಕ್ಯಾನಿಂಗ್ ಯಂತ್ರವಿದೆ. ಆದರೆ ರೇಡಿಯಾಲಜಿಸ್ಟ್ ಇಲ್ಲದ ಕಾರಣ ಅದರ ಬಳಕೆ ಸಾಧ್ಯವಾಗುತ್ತಿಲ್ಲ.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ನಿಧಿಯಲ್ಲಿ ಇರುವ ₹50 ಲಕ್ಷ ಬಳಸಿ ಔಷಧಿ ಖರೀದಿಗೆ ಈ -ಟೆಂಡರ್ ಕರೆದು ಜಿಲ್ಲಾಧಿಕಾರಿ ಅನುಮೋದನೆಗೆ ಕಳಿಸಿದೆ. ತುರ್ತು ಸಂದರ್ಭಗಳಲ್ಲಿ ಜಿಈಎಂ ಮೂಲಕ ತಾಲ್ಲೂಕು ಆಸ್ಪತ್ರೆ ಔಷಧಗಳನ್ನು ಖರೀದಿಸಿ ನಂತರ ಬಿಲ್ ಪಾವತಿಸುವ ವ್ಯವಸ್ಥೆ ಇದೆ. ಆದರೆ ಬೀರೂರು ಸಾರ್ವಜನಿಕ ಆಸ್ಪತ್ರೆಯ ಸ್ಥಿತಿ ಈ ರೀತಿ ಇಲ್ಲ. ಏಪ್ರಿಲ್‌ನಿಂದಲೂ ಸಮರ್ಪಕ ಔಷಧ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಆಸ್ಪತ್ರೆ ತನ್ನ ನಿಧಿ ಬಳಸಿ ಔಷಧ ಪೂರೈಕೆ ಮಾಡಬೇಕಾದ ಸ್ಥಿತಿ ಇದ್ದು ನಿಧಿಯು ಕರಗುತ್ತಿದೆ. ಈ ಆಸ್ಪತ್ರೆಗೆ ರೇಡಿಯಾಲಜಿಸ್ಟ್ ಹುದ್ದೆ ಮಂಜೂರಾಗಿ ವೈದ್ಯರು ಬಂದಿದ್ದಾರೆ.
ಆದರೆ ಸ್ಕ್ಯಾನಿಂಗ್ ಯಂತ್ರ ಇಲ್ಲ. ಸ್ಕ್ಯಾನಿಂಗ್ ಯಂತ್ರ ಖರೀದಿಸಲು ಕಾಯ್ದಿರಿಸಿದ್ದ ನಿಧಿ ಕೂಡ ಸಮರ್ಪಕ ಔಷಧ ಪೂರೈಕೆ ಲಭ್ಯವಿಲ್ಲದ ಕಾರಣ ಬಳಕೆಯಾಗಿ ಕರಗುತ್ತಿದೆ. ಆಸ್ಪತ್ರೆಯವರು ಅದರಿಂದಾಗಿ ಇರುವ ನಿಧಿಯನ್ನು ಔಷಧಕ್ಕಾಗಿ ವೆಚ್ಚ ಮಾಡಿ ಸ್ಕ್ಯಾನಿಂಗ್ ಯಂತ್ರಕ್ಕಾಗಿ ಕಾರ್ಪೊರೇಟ್ ಕಂಪನಿಗಳ ಸಿಎಸ್ಆರ್ ನಿಧಿ ಕಾಯುತ್ತಿದ್ದಾರೆ. ಇಲಾಖೆಯ ನ್ಯೂನತೆ ಕುರಿತು ಸದ್ಯದಲ್ಲಿಯೇ ರಾಜ್ಯದಾದ್ಯಂತ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಷ್ಕರ ನಡೆಸಲು ಸಿದ್ಧತೆ ಕೂಡ ನಡೆಸಿದ್ದಾರೆ. ಸಮರ್ಪಕವಾಗಿ ಔಷಧ ಪೂರೈಕೆ ನಿರ್ವಹಿಸಬೇಕಿದ್ದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎನ್ನುತ್ತವೆ ಮೂಲಗಳು.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಬಿಎಆರ್‌ಕೆ ನಿಧಿಯ ಸೌಲಭ್ಯವನ್ನು ಹೊಂದಿಲ್ಲ. ಹಾಗಾಗಿ ಈ ಕೇಂದ್ರಗಳಲ್ಲಿ ಯಾವುದೇ ಕಾಯ್ದಿಟ್ಟ ನಿಧಿ ಇರುವುದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೂಡ ಔಷಧ ಪೂರೈಕೆ ಇಲ್ಲದೆ ನಲುಗಿದ್ದು ಅನಿವಾರ್ಯ ಸಂದರ್ಭಗಳಲ್ಲಿ ಔಷಧವನ್ನು ಸಾಲವಾಗಿ ತರಿಸಿ ನಂತರ ಹಣ ಪಾವತಿಸಿದ ನಿದರ್ಶನಗಳು ಇವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಆರೋಗ್ಯ ಇಲಾಖೆಗೆ ಚಿಕಿತ್ಸೆ ನೀಡಬೇಕಾದ ಸನ್ನಿವೇಶ ಎದುರಾಗಬಹುದು ಎನ್ನುವುದು ಆರೋಗ್ಯ ಕ್ಷೇತ್ರದವರ ಅಭಿಪ್ರಾಯ.
ಶೃಂಗೇರಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ಔಷಧಿಗಳಿಲ್ಲದೆ ಜನರು ಪರದಾಡುವ ಪರಿಸ್ಥಿತಿ ಇದೆ. ಪ್ರಮುಖವಾಗಿ ತುರ್ತಾಗಿ ಬೇಕಾದ ಗ್ಯಾಸ್ಟ್ರಿಕ್ ಜ್ವರ ಶೀತ ಕೆಮ್ಮು ನೋವಿನ ಮಾತ್ರೆ ಮುಲಾಮು ಶಿರಪ್‌ಗಳು ಲಭ್ಯವಿಲ್ಲದೆ ಜನರು ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಹೋಗಿ ಕೊಂಡುಕೊಳ್ಳುವ ಪರಿಸ್ಥಿತಿ ಇದೆ. ಇನ್ನು ಬೇರೆ ಆಂಟಿಬ್ಯಾಟಿಕ್ ಔಷಧಿಗಳಂತೂ ಲಭ್ಯವೇ ಇಲ್ಲವಾಗಿದೆ. ಇಸಿಜಿ ಸ್ಕ್ಯಾನಿಂಗ್ ಸಿಟಿ ಸ್ಕ್ಯಾನಿಂಗ್ ಇನ್ನಿತರ ರಕ್ತ ಪರೀಕ್ಷೆಯ ಯಂತ್ರಗಳು ಲಭ್ಯವಿಲ್ಲ. ದಿನ ನೂರಾರು ಜನ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುತ್ತಾರೆ. ಇಲ್ಲಿ ಯಾವುದೇ ರೀತಿಯ ಔಷಧಿ ಸಲಕರಣೆಗಳು ಇಲ್ಲದೇ ವಾಪಸ್ಸು ಹೋಗುತ್ತಾರೆ. ನಮಗೆ ಅವರನ್ನು ವಾಪಸ್ಸು ಕಳಿಸುವಾಗ ತುಂಬಾ ನೋವಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆಯ ನರ್ಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.