ADVERTISEMENT

ಸತ್ಕರ್ಮ, ಸದ್ವಿಚಾರದಿಂದ ಮೋಕ್ಷ: ವಿಧುಶೇಖರ ಭಾರತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:32 IST
Last Updated 25 ಡಿಸೆಂಬರ್ 2025, 6:32 IST
ಕಡೂರು ಶಂಕರ ಮಠಕ್ಕೆ ಮಂಗಳವಾರ ಬಂದ ಶೃಂಗೇರಿ ಶಾರದಾಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಭಕ್ತರು ಸ್ವಾಗತಿಸಿದರು   
ಕಡೂರು ಶಂಕರ ಮಠಕ್ಕೆ ಮಂಗಳವಾರ ಬಂದ ಶೃಂಗೇರಿ ಶಾರದಾಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಭಕ್ತರು ಸ್ವಾಗತಿಸಿದರು      

ಕಡೂರು: ಸದ್ವಿಚಾರ, ಸತ್ಕರ್ಮಗಳ ಅನುಷ್ಠಾನದಿಂದ ಜೀವನ ಸಾರ್ಥಕ್ಯ ಮತ್ತು ಮೋಕ್ಷ ಸಾಧಿಸಬಹುದು ಎಂದು ಶೃಂಗೇರಿ ಶಂಕರಾಚಾರ್ಯ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ವಿಜಯಯಾತ್ರೆ ಅಂಗವಾಗಿ ಬುಧವಾರ ಪಟ್ಟಣದ ಶಂಕರಮಠದಲ್ಲಿ ಆಶೀರ್ವಚನ ನೀಡಿದರು.

ಒಳಿತಿನ ವಿಚಾರಗಳನ್ನು ಅನುಸರಿಸಿ ಅನುಷ್ಠಾನಕ್ಕೆ ತರುವುದು ಸುಲಭದ ವಿಚಾರವಲ್ಲ. ವಿವೇಚನಾಶೀಲರಾದ ನಾವು ಬಹಳಷ್ಟು ಬಾರಿ ಇದು ತಪ್ಪು ಎಂದು ತಿಳಿದೂ ಉತ್ಸುಕತೆಯಿಂದ ಅಂತಹ ಕೆಲಸ ಮಾಡಲು ಮುಂದಾಗುತ್ತೇವೆ. ಅಂತಹವರು ನಿಜಾರ್ಥದಲ್ಲಿ ಅಂಧರು ಎಂದು ಆಚಾರ್ಯ ಶಂಕರರು ಹೇಳಿದ್ದಾರೆ. ಒಳ್ಳೆಯ ವಿಷಯ ಆಲಿಸದದವರು ಕಿವುಡರು, ಬೇರೆಯವರಿಗೆ ಸುಖವಾಗುವಂತೆ ಮಾತು ಆಡದ, ಸರಿಯಾದ ಸಮಯದಲ್ಲಿ ಮಾತನಾಡದವರು ಮೂಕರು ಎನ್ನುವುದು ಆಚಾರ್ಯರ ಮಾತಿನ ಸಾರವಾಗಿದೆ ಎಂದರು.

ADVERTISEMENT

ಸಂಸ್ಕಾರದಿಂದ ಶಿಲೆಯೇ ದೇವರಾಗಬಹುದಾದರೆ, ಮಾನವರೂ ದೇವರಾಗಲು ಸಾಧ್ಯವಿದೆ. ಅದಕ್ಕಾಗಿ ಪರರನ್ನು ದ್ವೇಷಿಸದ, ಇನ್ನೊಬ್ಬರಿಂದ ಲಾಭದ ನಿರೀಕ್ಷೆ ಬೇಡದ, ಮೇಲು-ಕೀಳು ಭಾವ ತೋರದ ಮತ್ತು ಅನಗತ್ಯ ವಿಷಯಗಳಲ್ಲಿ ಮಧ್ಯ ಪ್ರವೇಶಿಸದ ಗುಣ ಬೇಕು. ನಾವು ಮಾಡುವ ಕರ್ಮಗಳ ಫಲಗಳು ಖಂಡಿತ ಲಭಿಸುತ್ತವೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೈ.ಎಸ್‌.ವಿ.ದತ್ತ, 2026 ಕಡೂರು ಶಂಕರಮಠದ ರಜತೋತ್ಸವ ವರ್ಷವಾಗಿದ್ದು, ಈ ವರ್ಷದಲ್ಲಿ ಕಡೂರು ಶಂಕರಮಠವನ್ನು ಹೊಸ ಜಾಗದಲ್ಲಿ ನಿರ್ಮಾಣ ಮಾಡುವ ಕನಸಿನ ಸಾಕಾರಕ್ಕೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಚಿಂತಕ ಚಟ್ನಳ್ಳಿ ಮಹೇಶ್‌ ಮಾತನಾಡಿ, ಅರಿವಿನ ಸಾಕ್ಷಾತ್ಕಾರವೇ ಗುರುಕಾರುಣ್ಯವಾಗಿದ್ದು ಅದು ಮುಕ್ತಿಯ ದಾರಿಯೂ ಆಗಿದೆ ಎಂದರು.

ಮಂಗಳವಾರ ರಾತ್ರಿ ಮೈಸೂರಿನಿಂದ ಶಂಕರ ಮಠಕ್ಕೆ ಬಂದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ, ಧೂಳಿಪಾದಪೂಜೆ ನೆರವೇರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಕಡೂರಿನ ಕಲಾವಿದ ಪ್ರಮೋದ್‌ ಪೆನ್ಸಿಲ್‌ ಮೂಲಕ ರಚಿಸಿದ ಚಂದ್ರಶೇಖರ ಭಾರತೀ ಶ್ರೀಗಳ ಭಾವಚಿತ್ರವನ್ನು ವಿಧುಶೇಖರ ಭಾರತೀ ಶ್ರೀಗಳಿಗೆ ನೀಡಿದರು.

ಈ ಸಂದರ್ಭದಲ್ಲಿ ಕಡೂರು ಶಂಕರಮಠದ ಗೌರವ ನಿರ್ವಾಹಕ ಕೆ.ಜಿ.ಮಂಜುನಾಥ, ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್‌, ಶ್ರೀಮಠದ ಪುರೋಹಿತ ಶಿವಕುಮಾರ ಶರ್ಮಾ ತಂಗಿರಾಲ, ಗಣೇಶ ಭಟ್‌, ನಾಯಕ್‌ ಸಚ್ಚಿದಾನಂದ, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌, ಬೀರೂರು ಶ್ರೀರಾಮಸೇವಾ ಸಂಘದ ಉಪಾಧ್ಯಕ್ಷ ವೆಂಕಟೇಶ ಜಿ.ಒಡೆಯರ್‌, ಶಿವಶಂಕರ್‌, ವಿವಿಧ ಮಹಿಳಾ ಮಂಡಳಿಗಳ ಸದಸ್ಯೆಯರು, ಭಕ್ತ ಮಂಡಳಿಗಳ ಸದಸ್ಯರು, ಭಕ್ತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.