ADVERTISEMENT

ಚಿಕ್ಕಮಗಳೂರು | ವ್ಯಸನ ಮುಕ್ತಿ ಕೇಂದ್ರದಲ್ಲಿ ಹಲ್ಲೆ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 14:11 IST
Last Updated 9 ಏಪ್ರಿಲ್ 2025, 14:11 IST
ದಂಟರಮಕ್ಕಿ ಶ್ರೀನಿವಾಸ್
ದಂಟರಮಕ್ಕಿ ಶ್ರೀನಿವಾಸ್   

ಚಿಕ್ಕಮಗಳೂರು: ‘ನಗರದ ವ್ಯಸನ ಮುಕ್ತಿ ಮತ್ತು ಪುನರ್ವಸತಿ ಕೇಂದ್ರದಲ್ಲಿ ವ್ಯಸನಮುಕ್ತಿಗಾಗಿ ಪ್ರವೇಶ ಪಡೆದಿದ್ದ ವ್ಯಕ್ತಿಯ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಡಿಎಸ್‌ಎಸ್‌ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂಡಿಗೆರೆ ತಾಲ್ಲೂಕಿನ ಹಳಿಕೆ ಗ್ರಾಮದ ನಿವಾಸಿ ಸತೀಶ್ ಎಂಬುವರು ಮಾ. 30ರಂದು ವ್ಯಸನ ಮುಕ್ತಿ ಕೇಂದ್ರಕ್ಕೆ ಪ್ರವೇಶ ಪಡೆದಿದ್ದರು. ಅವರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಂತೆ ಮೇಲ್ವಿಚಾರಕರಿಗೆ ಕೇಳಿದ್ದರು. ನೋವು ಹೆಚ್ಚಾಗಿ ಕೂಗಾಡಿದಾಗ ಅಲ್ಲಿದ್ದ ಸಿಬ್ಬಂದಿ ಸತೀಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರ ಕಿವಿಗೆ ಪೆಟ್ಟಾಗಿ ರಕ್ತ ಸುರಿದು ಕುಸಿದು ಬಿದ್ದಿದ್ದಾರೆ. ಅಲ್ಲಿದ್ದ ಸಿಬ್ಬಂದಿ ನಗರದ ಮಲ್ಲೇಗೌಡ ಆಸ್ಪತ್ರೆಗೆ ದಾಖಲಿಸಿದ್ದು 9 ದಿನ ಚಿಕಿತ್ಸೆ ಪಡೆದಿದ್ದಾರೆ’ ಎಂದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಗರ ಪೊಲೀಸ್ ಠಾಣೆಯ ಎ.ಎಸ್.ಐ ಭುವನೇಶ ಅವರು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ, ಈವರೆಗೆ ಪ್ರಕರಣ ದಾಖಲಿಸಿಲ್ಲ. ಸತೀಶ್‌ ಅವರ ಕಿವಿ ತಮಟೆ ಪೆಟ್ಟು ಬಿದ್ದಿದ್ದರಿಂದ ಕಿವಿ ತಮಟೆ ಒಡೆದು ಹೋಗಿದೆ ಎಂದ ವೈದ್ಯರು ತಿಳಿಸಿದ್ದಾರೆ ಎಂದರು.

ADVERTISEMENT

ಹಲ್ಲೆ ನಡೆಸಿದವರ ವಿರುದ್ಧ ಮತ್ತು ಪ್ರಕರಣ ದಾಖಲಿಸದೆ, ದೂರು ಅರ್ಜಿ ಮುಕ್ತಾಯಗೊಳಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಛಲವಾದಿ ಮಹಾಸಭಾ ಅಧ್ಯಕ್ಷ ರಘು, ನೊಂದ ವ್ಯಕ್ತಿ ಸತೀಶ್, ಮಂಜುನಾಥ, ಮಹೇಶ್. ಜಗದೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.