
ಮೂಡಿಗೆರೆಯಲ್ಲಿ ಬುಧವಾರ ಶಾಸಕಿ ನಯನಾ ಮೋಟಮ್ಮ ಅವರನ್ನು ಭೇಟಿ ಮಾಡಿದ ತರುವೆ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರು ಮನವಿ ಸಲ್ಲಿಸಿದರು
ಮೂಡಿಗೆರೆ: ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಗ್ರಾಮಸ್ಥರು, ಮನೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಶಾಸಕಿ ನಯನಾ ಮೋಟಮ್ಮಗೆ ಬುಧವಾರ ಮನವಿ ಸಲ್ಲಿಸಿದರು.
ಶಾಸಕಿ ನಯನಾ ಮೋಟಮ್ಮ ಅವರನ್ನು ಭೇಟಿ ಮಾಡಿದ ನಿವೇಶನ ರಹಿತರು, ಹಲವು ವರ್ಷಗಳಿಂದ ಜಾಗ ಹಂಚಿಕೆ ಆಗದಿರುವುದರಿಂದ ಎದುರಾಗುತ್ತಿರುವ ಸಂಕಷ್ಟಗಳನ್ನು ವಿವರಿಸಿದರು. ಮನೆ ಕಟ್ಟಿಕೊಳ್ಳಲು ಸ್ವಂತ ಜಾಗವಿಲ್ಲದೆ ತೊಂದರೆ ಅನುಭವಿಸುತ್ತಿರುವುದಾಗಿ ತಿಳಿಸಿ, ಕಂದಾಯ ಇಲಾಖೆಯ ಲಭ್ಯ ಜಾಗಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗ್ರಾಮಸ್ಥರ ಮನವಿ ಆಲಿಸಿದ ಶಾಸಕಿ, ‘ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಅವರೊಂದಿಗೆ ಕೂಡಲೇ ಚರ್ಚಿಸಿ, ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು. ಕಂದಾಯ ಜಾಗ ಲಭ್ಯತೆ ಕುರಿತು ಪರಿಶೀಲನೆ ನಡೆಸಿ, ಜಾಗ ಇದ್ದಲ್ಲಿ ಆದ್ಯತೆಯ ಮೇರೆಗೆ ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೇಶನ ರಹಿತರಾದ ಪೂರ್ಣಿಮಾ, ಸರೀನಾ, ಲತಾ, ರಿಜ್ವಾನ, ಲಕ್ಷ್ಮಿ, ಗಾನವಿ, ಸರೋಜ, ಪ್ರಶಾಂತಿ, ದೀಪ, ಪಾರ್ವತಿ, ರವಿ, ಸುರೇಶ್, ಕೇಶವ, ಅಬ್ಬಾಸ್, ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.