ತರೀಕೆರೆ: ಪಾಳೆಗಾರ ಸರ್ಜಾ ಹನುಮಪ್ಪ ನಾಯಕರ ಪುತ್ಥಳಿಯನ್ನು ಶೀಘ್ರದಲ್ಲೇ ಪಟ್ಟಣದ ಸರ್ಜಾ ಹನುಮಪ್ಪ ನಾಯಕ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಸ್ಥಾಪಿಸಲಾಗುವುದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ತಾಲ್ಲೂಕು ಆಡಳಿತ, ಪುರಸಭೆ, ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ವಾಲ್ಮೀಕಿ ಸಮಾಜದ ಆಶ್ರಯದಲ್ಲಿ ನಡೆದ ವಾಲ್ಮೀಕಿ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮಹನೀಯರ ಜಯಂತಿಗಳನ್ನು ಆಯಾ ಜಾತಿಗೆ ಸೀಮಿತಗೊಳಿಸದೆ ಎಲ್ಲಾ ಸಮಾಜದವರೂ ಸೇರಿ ಆಚರಿಸಬೇಕು’ ಎಂದರು.
ವಾಲ್ಮೀಕಿ ಸಮಾಜದವರು ನೀಡಿರುವ ಕಣ್ಣಪ್ಪನ ಗುತ್ತಿ ಮತ್ತಿತರರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ಉಪ ವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ಮಾತನಾಡಿ, ‘ವಾಲ್ಮೀಕಿ ಅವರಂಥ ಮಹಾನ್ ವ್ಯಕ್ತಿಗಳನ್ನು ದೇವರ ಸ್ವರೂಪದಲ್ಲಿ ಪೂಜಿಸದೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.
‘ವಿದ್ವತ್ತು, ಪ್ರತಿಭೆಗಳು ಜಾತಿ ಆಧಾರದಿಂದ ಬರುವುದಿಲ್ಲ. ಪ್ರೌಢಿಮೆಯಿಂದ ಬರುತ್ತದೆ. ವಾಲ್ಮೀಕಿಯವರನ್ನು ಭುವನದ ಭಾಗ್ಯ ಎಂದು ರಾಷ್ಟ್ರಕವಿ ಹೇಳಿದ್ದಾರೆ. ಸಂಸ್ಕೃತದಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಂಥವನ್ನು ರಚಿಸಿ ಆದಿಕವಿ ಎನಿಸಿಕೊಂಡಿದ್ದಾರೆ’ ಎಂದರು.
ಪುರಸಭೆ ಅಧ್ಯಕ್ಷ ವಸಂತಕುಮಾರ್, ಮಾಜಿ ಅಧ್ಯಕ್ಷ ಪ್ರಕಾಶ್ ವರ್ಮಾ, ವಾಲ್ಮೀಕಿ ಸಮಾಜದ ತರೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದಪ್ಪ, ಅಜ್ಜಂಪುರ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ, ಉಪನ್ಯಾಸಕ ದತ್ತಾತ್ರೇಯ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಲಿಂಗರಾಜ್ ಸ್ವಾಗತಿಸಿದರು. ರೈತಗೀತೆಯನ್ನು ಶಿಕ್ಷಕಿ ಜ್ಯೋತಿ ಮತ್ತು ತಂಡದವರು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.