ಶೃಂಗೇರಿ: ‘ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದ್ದು, ಸರ್ಕಾರದ ಬಜೆಟ್ ₹4.50 ಲಕ್ಷ ಕೋಟಿ ಇದೆ. ಯಾವುದೇ ಪಕ್ಷದ ಸರ್ಕಾರವಿದ್ದರೂ ಶೇ 1ರಷ್ಟು ಉದ್ಯೋಗ ಮಾತ್ರ ಸೃಷ್ಟಿ ಮಾಡಲು ಸಾಧ್ಯ. ಉಳಿದ ಶೇ 99ರಷ್ಟು ಉದ್ಯೋಗ ಖಾಸಗಿ ಕ್ಷೇತ್ರದಲ್ಲೇ ಸೃಷ್ಟಿಯಾಗುತ್ತದೆ’ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಶೃಂಗೇರಿಯ ಜೆಸಿಬಿಎಂ ಕಾಲೇಜಿನ ಸಭಾಂಗಣದಲ್ಲಿ ತುಮುಖಾನೆಯ ಅಮ್ಮ ಫೌಂಡೇಶನ್ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಸ್ತುತ ಯಾವುದೇ ಶಾಸಕರು, ಸಂಸದರು ಮತ್ತು ಸಚಿವರು ಉದ್ಯೋಗಕ್ಕಾಗಿ ಶಿಫಾರಸ್ಸು ಪತ್ರ ನೀಡಿದ್ದರೂ ಉಪಯೋಗಕ್ಕೆ ಬರುವುದಿಲ್ಲ. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಬೇಕು. ಕಸ್ತೂರಿ ರಂಗನ್ ಅವರು ಕೇಂದ್ರ ಸರ್ಕಾರಕ್ಕೆ ಬರೆದ ವರದಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಉಲ್ಲೇಖಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಶೇ 11ರಷ್ಟು ವಿದ್ಯಾವಂತರಿದ್ದು, ಪ್ರಸ್ತುತ ವಿದ್ಯಾವಂತರ ಸಂಖ್ಯೆ ಶೇ 94ರಷ್ಟು ಹೆಚ್ಚಿದೆ. ಶಿಕ್ಷಣ ಹಾಗೂ ಆರೋಗ್ಯ ನೀತಿಯನ್ನು ಸರ್ಕಾರ ನಡೆಸಬೇಕು. ಪ್ರಸ್ತುತ ಸಾಕ್ಷರತೆ ಹೆಚ್ಚಿದಂತೆ ಅಪರಾಧ ಕೃತ್ಯಗಳು ಹೆಚ್ಚುತ್ತಿದೆ. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಪ್ರಮುಖವಾದರೆ ಮಾತ್ರ ಭಾರತ ಪ್ರಗತಿ ಹೊಂದಲು ಸಾಧ್ಯ. ಜನಪ್ರತಿನಿಧಿಗಳು ತಪ್ಪು ಮಾಡಿದರೂ ಅದನ್ನು ಸ್ವಯಂ ಪ್ರೇರಿತರಾಗಿ ಒಪ್ಪಿಕೊಳ್ಳುವ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಬರಬೇಕು. ಅದಕ್ಕಾಗಿ ಕಾಯ್ದೆ ನಿರ್ಮಾಣ ಮಾಡಬಾರದು’ ಎಂದರು.
ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಶೆಟ್ಟಿರವರು ಮಾತನಾಡಿ, ‘ವಿದ್ಯಾರ್ಥಿಗಳು ಪ್ರತಿ ಸಾಧನೆಯ ಮೆಟ್ಟಿಲುಗಳನ್ನು ಹಂತ ಹಂತವಾಗಿ ಏರಿದರೆ ಮಾತ್ರ ಗುರಿ ಮುಟ್ಟಲು ಸಾಧ್ಯ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಗಳೂರು ಮುಂತಾದ ನಗರಗಳಿಂದ ಒಟ್ಟು 30ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳಕ್ಕೆ ಬಂದಿದ್ದು, ಯುವಪೀಳಿಗೆ ಸಿಕ್ಕ ಅವಕಾಶ ಬಳಸಿಕೊಳ್ಳಬೇಕಿದೆ. ಉದ್ಯೋಗವನ್ನು ನಾವು ಪ್ರೀತಿಸಬೇಕು. ಸುಮಾರು 2,750ಕ್ಕೂ ಉದ್ಯೋಗ ಅವಕಾಶವಿದ್ದು ವೇತನ ಎಷ್ಟೇ ಬಂದರೂ ಮೊದಲು ಕೆಲಸಕ್ಕೆ ಸೇರಿಕೊಳ್ಳಬೇಕು. ಕಂಪನಿಗಳ ಜ್ಞಾನಗಳನ್ನು ಪಡೆದುಕೊಂಡ ಬಳಿಕ ಅವರು ಉನ್ನತವಾದ ಉದ್ಯೋಗ ಗಿಟ್ಟಿಸಲು ಹೆಚ್ಚು ಅವಕಾಶವಿದೆ' ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಭರತ್ ಗಿಣಿಕಲ್‍ರವರು ಮಾತನಾಡಿದರು. ಮೇಳದಲ್ಲಿ 30ಕ್ಕೂ ಹೆಚ್ಚು ಖಾಸಗಿ ಕಂಪೆನಿಗಳು ಭಾಗವಹಿಸಿದ್ದವು. 734 ಜನ ಉದ್ಯೋಗಕ್ಕಾಗಿ ಪರೀಕ್ಷೆ ಎದುರಿಸಿದರು. 386 ಮಂದಿ ವಿವಿಧ ಹುದ್ದೆಗೆ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ, ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಕೆ.ಎನ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ದಿವಾಕರ್ ಭಟ್, ಮಾಜಿ ಅಧ್ಯಕ್ಷ ಜಿ.ಜಿ.ಮಂಜುನಾಥ್, ಉದ್ಯಮಿ ತಲವಾನೆ ಪ್ರಕಾಶ್, ಕಾಲೇಜಿನ ಪ್ರಾಚಾರ್ಯರಾದ ಎಂ.ಸ್ವಾಮಿ, ಉದ್ಯೋಗದಾತ ಫೌಂಡೇಶನ್ ಅಧ್ಯಕ್ಷ ರುಕ್ಮಾಂಗದ, ಜೆಡಿಎಸ್ ಮುಖಂಡರಾದ ದಿನೇಶ್ ಹೆಗ್ಡೆ, ದೇವೆಂದ್ರ, ಚಂದ್ರಶೇಖರ್ ಸೂರ್ಡಿ, ವೆಂಕಪ್ಪ ಆಚಾರ್,ಸುಧಾ ಪೈ, ಪುಪ್ಪಲತಾ, ಪ್ರಭಾಕರ್ ಶೆಟ್ಟಿ, ಚಂದ್ರಶೇಖರ್, ವಿನಯ್ ಕಣಿವೆ, ಪ್ರಭಾಕರ್ ಭಾಗವಹಿಸಿದ್ದರು.
ಅಭ್ಯರ್ಥಿಗಳು ವೇತನ ಕಡಿಮೆ ಇದೆ ಎಂದು ನೌಕರಿಯನ್ನು ಆಯ್ಕೆ ಮಾಡಿಕೊಳ್ಳದಿರುವುದು ಸರಿಯಲ್ಲ. ಆಯ್ಕೆಯಾಗದವರು ಉದ್ಯೋಗ ಸಿಗಲಿಲ್ಲವೆಂದು ಧ್ರುತಿಗೇಡಬಾರದು.ಸುಧಾಕರ್ ಶೆಟ್ಟಿ ಅಧ್ಯಕ್ಷ ಅಮ್ಮ ಫೌಂಡೇಶನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.