ADVERTISEMENT

ಶೃಂಗೇರಿ: ಸರಳ ನವರಾತ್ರಿ ಉತ್ಸವ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 3:07 IST
Last Updated 5 ಅಕ್ಟೋಬರ್ 2021, 3:07 IST
ಶೃಂಗೇರಿ ಶಾರದಾ ಪೀಠ
ಶೃಂಗೇರಿ ಶಾರದಾ ಪೀಠ   

ಶೃಂಗೇರಿ: ಶೃಂಗೇರಿಯಲ್ಲಿ ಅ.6ರಿಂದ 16ರ ವರೆಗೆ ಶಾರದಾ ಶರನ್ನವರಾತ್ರಿ ಮಹೋತ್ಸವ ನೆರವೇರಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಉತ್ಸವ ಈ ಬಾರಿಯೂ ಸರಳವಾಗಿ ನಡೆಯುತ್ತಿದೆ. ಪ್ರತಿದಿನ ಶಾರದೆಗೆ ನಡೆಯುವ ಅಲಂಕಾರಗಳು ಹಾಗೂ ದರ್ಬಾರು ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಶಾರದಾ ಮಠದ ದೃಶ್ಯ ಮಾಧ್ಯಮದ ಮೂಲಕ ಭಕ್ತರು ತಮ್ಮ ಮನೆಯಲ್ಲಿ ಕುಳಿತು ವೀಕ್ಷಿಸಬಹುದು. ಸೇವೆ ಮಾಡಲಿಚ್ಛಿಸುವರು ‘ಶೃಂಗೇರಿ ನೆಟ್’ ಆನ್‍ಲೈನ್ ಮೂಲಕ ತಮ್ಮ ಹೆಸರನ್ನು ಮುಂಗಡವಾಗಿ ನೋಂದಾಯಿಸಿ ಕೊಳ್ಳಬಹುದು. ಅವರಿಗೆ ಅಂಚೆ ಮುಖಾಂತರ ಪ್ರಸಾದ ತಲುಪಿಸಲಿದ್ದೇವೆ ಎಂದು ಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನವರಾತ್ರಿ ಪ್ರಯುಕ್ತ ಯಾವುದೇ ಬೀದಿ ಉತ್ಸವ, ಅಡ್ಡ ಪಲ್ಲಕ್ಕಿ ಉತ್ಸವ ಇರುವುದಿಲ್ಲ. ಶಾರದಾ ಮಠದ ಸಂಪ್ರದಾಯದಂತೆ ರತ್ನಕಿರೀಟ, ಆಭರಣಗಳನ್ನು ಮಠದ ಉಭಯ ಗುರುಗಳು ಧರಿಸಿ, ಶಾರದೆಯ ಅಭಿಮುಖವಾಗಿ ಇರಿಸಿರುವ ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗಿ ಭಕ್ತರನ್ನು ಆಶೀರ್ವಾದ ಮಾಡುವ ಮುಖಾಂತರ ದರ್ಬಾರು ನಡೆಯಲಿದೆ’ ಎಂದರು.

ADVERTISEMENT

ಶೃಂಗೇರಿ ಶಾರದಾ ಪೀಠದಲ್ಲಿ ಅ.6ರ ಭಾದ್ರಪದ ಕೃಷ್ಣ ಅಮಾವಾಸ್ಯೆಯ ಪ್ರಯುಕ್ತ ಶಾರದಾಂಬಾ ಮಹಾಭಿಷೇಕ ನೆರವೇಲಿದೆ. ಅ.7ರಂದು ಶಾರದಾ ಪ್ರತಿಷ್ಠೆ ನಡೆಯಲಿದೆ.

15ರಂದು ವಿಜಯ ದಶಮಿ, ಗಜಲಕ್ಷ್ಮೀ ಅಲಂಕಾರ, ಸಂಜೆ ವಿಜಯೋತ್ಸವ ಜರುಗಲಿದೆ. 16ರಂದು ಗಜಲಕ್ಷ್ಮೀ ಅಲಂಕಾರದಲ್ಲಿ ಶಾರದೆ ಕಂಗೊಳಿಸಲಿದ್ದಾಳೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.