ADVERTISEMENT

ಶೃಂಗೇರಿ | ತುಂಗಾ ನದಿ ಪಾತ್ರದ ಗಾಂಧಿ ಮೈದಾನ: 26 ಅಂಗಡಿಗಳ ತೆರವು

ವಿರೋಧ, ಪ್ರತಿಭಟನೆ ನಡುವೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 4:50 IST
Last Updated 17 ಅಕ್ಟೋಬರ್ 2025, 4:50 IST
ಪೊಲೀಸ್ ಭದ್ರತೆಯೊಂದಿಗೆ ಅಂಗಡಿಗಳನ್ನು ತೆರವುಗೊಳಿಸಿದ ಅಧಿಕಾರಿಗಳು
ಪೊಲೀಸ್ ಭದ್ರತೆಯೊಂದಿಗೆ ಅಂಗಡಿಗಳನ್ನು ತೆರವುಗೊಳಿಸಿದ ಅಧಿಕಾರಿಗಳು   

ಶೃಂಗೇರಿ: ತುಂಗಾ ನದಿ ಪಾತ್ರದ ಗಾಂಧಿ ಮೈದಾನದಲ್ಲಿನ 26 ಅಂಗಡಿ ಮತ್ತು ಹೋಟೆಲ್ ಮಳಿಗೆಗಳನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳು ತೆರವುಗೊಳಿಸಿದರು.

ಶೃಂಗೇರಿ ಪಟ್ಟಣ ಪಂಚಾಯಿತಿ ಮತ್ತು ಅಂಗಡಿ ಮಾಲೀಕರ ನಡುವೆ ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿ ಸುದರ್ಶನ್ ಮತ್ತು ತಹಶೀಲ್ದಾರ್ ಅನುಪ್ ಸಂಜೋಗ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಗುರುವಾರ ನಡೆಯಿತು.

ನಾಲ್ಕು ದಶಕಗಳಿಂದ ಗಾಂಧಿ ಮೈದಾನದಲ್ಲಿ ನೆಲ ಬಾಡಿಗೆ ನೀಡಿ ಅಂಗಡಿ ಮತ್ತು ಹೋಟೆಲ್ ನಡೆಸುತ್ತಿದ್ದರು. 2006ರಲ್ಲಿ ಪಟ್ಟಣ ಪಂಚಾಯಿತಿ ಈ ಜಾಗವನ್ನು ವಶಕ್ಕೆ ಪಡೆಯಲು ಮುಂದಾಯಿತು. ಆಗ ಹೊಟೇಲ್ ಮತ್ತು ಅಂಗಡಿ ಮಾಲೀಕರು ನ್ಯಾಯಾಲಯದ ಮೊರೆ ಹೊಗಿದ್ದರು. ಪಟ್ಟಣ ಪಂಚಾಯಿತಿಗೆ ನೆಲ ಬಾಡಿಗೆ ನೀಡಲಾಗುತ್ತಿರುವುದರಿಂದ ತೆರವುಗೊಳಿಸಬಾರದು ಎಂದು ಮನವಿ ಮಾಡಿದ್ದರು.

ADVERTISEMENT

ಆದರೆ, ಶೃಂಗೇರಿ ನ್ಯಾಯಾಲಯ ಮತ್ತು ಜಿಲಾ ನ್ಯಾಯಾಲಯದಲ್ಲಿ ಅರ್ಜಿಗಳು ವಜಾಗೊಂಡವು. ಬಳಿಕ ಅಂಗಡಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. 2023ರ ಆ.14ರಂದು ಆದೇಶ ಹೊರಡಿಸಿದ್ದ ಹೈಕೋರ್ಟ್, ‘ಅಂಗಡಿಗಳನ್ನು ತೆರವುಗೊಳಿಸಲು ತಿಳಿಸಿತ್ತು. ಅಂದಿನ ಉಪ ವಿಭಾಗಾಧಿಕಾರಿ, ಜಿಲ್ಲಾ ಯೋಜನಾಧಿಕಾರಿಳ ತಂಡ ಬಿಗಿ ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಲು ಮುಂದಾಗಿದ್ದರು. ಆದರೆ, ಹೈಕೋರ್ಟ್‌ನಿಂದ ಮತ್ತೊಂದು ತಡೆಯಾಜ್ಞೆ ಬಂದಿದ್ದರಿಂದ ವಾಪಸ್ ಮರಳಿದ್ದರು. 2023ರ ನ.24ರಂದು ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿ, ಡಿ.18ರವರೆಗೆ 9 ಅಂಗಡಿ ತೆರವುಗೊಳಿಸಿ 26 ಅಂಗಡಿಗಳನ್ನು ತೆರವುಗೊಳಿಸದಂತೆ ಆದೇಶಿಸಿತ್ತು. ಆದರೆ, 2024ರ ಡಿ.5ರಂದು ಅಂತಿಮ ತೆರವು ಆದೇಶಕ್ಕೆ ಮತ್ತೆ ತಡೆಯಾಜ್ಞೆ ನೀಡಲಾಯಿತು. 2025ರ ಜು.28ರಂದು ಮತ್ತೊಂದು ಆದೇಶ ನೀಡಿ ಮುಂದಿನ 10 ವಾರ ತೆರವುಗೊಳಿಸುವಂತಿಲ್ಲ ಆದೇಶ ನೀಡಿತು.

ಈ ನಡುವೆ ಪಟ್ಟಣ ಪಂಚಾಯಿತಿ ಮತ್ತು ಜಿಲ್ಲಾಧಿಕಾರಿ ವಿರುದ್ಧ ಕರ್ನಾಟಕ ಭೂಕಬಳಿಕೆ ನ್ಯಾಯಾಲಯದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಯಿತು. ಮಳಿಗೆಗಳನ್ನು ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ನೀಡಿ ಎಂದು ಆದೇಶಿಸಿತು. ಈ ಬೆಳವಣಿಗೆಗಳ ನಡುವೆ ಅ.6ರಂದು ಹೈಕೋಟ್ ತಡೆಯಾಜ್ಞೆ ವಜಾಗೊಳಿಸಿತು.

ಬಳಿಕ ಸರ್ವೆ ನಡೆಸಿದ ಕಂದಾಯ ಇಲಾಖೆ, ನೋಟಿಸ್ ನೀಡಿ ಸ್ವಯಂ ತೆರವುಗೊಳಿಸಲು 10 ದಿನಗಳ ಕಾಲಾವಕಾಶ ನೀಡಿತ್ತು. ಆದರೂ ಒಪ್ಪದ ಕಾರಣ 26 ಮಳಿಗೆಗಳನ್ನು ತೆರವುಗೊಳಿಸಲಾಗಿದೆ ಎಂದು ತಹಶೀಲ್ದಾರ್ ಅನುಪ್ ಸಂಜೋಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಶ್ ಬಿಜೆಪಿ ಮುಖಂಡರು ಮತ್ತು ಅಂಗಡಿ ಮಾಲೀಕರು ಧರಣಿ ನಡೆಸಿದರು
ಬಿಜೆಪಿ ನೇತೃತ್ವದ ಸರ್ಕಾರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಾಗಲೇ ಈ ಪ್ರಕರಣ ದಾಖಲಾಗಿತ್ತು. ಈಗ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯದ ಆದೇಶಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನ್ಯಾಯಾಲಯ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು.
ಟಿ.ಡಿ.ರಾಜೇಗೌಡ ಶಾಸಕ
ಅಂಗಡಿ ಮಾಲೀಕರ ಕಣ್ಣೀರು
‘ಜೀವನೋಪಯಕ್ಕಾಗಿ ಸಣ್ಣ ಅಂಗಡಿ ನಡೆಸುತ್ತಿದ್ದೆವು. ಪಟ್ಟಣ ಪಂಚಾಯಿತಿಗೆ ದಿನಕ್ಕೆ ₹50 ಪಾವತಿಸುತ್ತಿದ್ದೇನೆ. ಈಗ ತೆರವುಗೊಳಿಸಿದ್ದು ಮುಂದೆ ಏನು ಮಾಡಬೇಕು ಎಂಬ ದಿಕ್ಕು ತೋಚುತ್ತಿಲ್ಲ. ದ್ವೇಷ ರಾಜಕಾರಣದಿಂದ ನಮಗೆ ಈ ಸ್ಥಿತಿ ಬಂದಿದೆ’ ಎಂದು ಕಲ್ಕಟ್ಟೆ ಮಹೇಶ್ ಕಣ್ಣೀರಿಟ್ಟರು. ‘ಯೋಗ್ಯತೆ ಇಲ್ಲದವರಿಗೆ ಅಧಿಕಾರದ ಯೋಗ ಬಂದರೆ ಬಡವರನ್ನು ಈ ರೀತಿ ಕಣ್ಣಿರು ಹಾಕಿಸುತ್ತಾರೆ. ಚಿಕ್ಕ–ಪುಟ್ಟ ವ್ಯಾಪಾರ ಮಾಡಿಕೊಂಡು ಬಂದ ಜನರನ್ನು ಗೋಳಾಡಿಸಿದರೆ ಅವರನ್ನು ದೇವರು ಸುಮ್ಮನೆ ಬೀಡುವುದಿಲ್ಲ. 26 ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಶಾಸಕರು ಸಂತೃಪ್ತರಾಗಿರಬಹುದು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದರು.

ರಾಜೇಗೌಡರ ಸಾಧನೆ: 

‘ಅಂಗಡಿಗಳನ್ನು ತೆರವು ಮಾಡಿಸಿರುವುದು ಶಾಸಕ ಟಿ.ಡಿ.ರಾಜೇಗೌಡ ಅವರ ದೊಡ್ಡ ಸಾಧನೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ತಲಗಾರು ಉಮೇಶ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ‘ಕ್ಷೇತ್ರದಲ್ಲಿ ರಸ್ತೆ ಹೊಂಡ– ಗುಂಡಿಗಳು ಬಿದ್ದಿದ್ದು ಅವುಗಳನ್ನು ಮುಚ್ಚಿಸದೆ ಈ ರೀತಿ ತೆರವು ಕಾರ್ಯ ಮಾಡಿರುವುದು ದ್ವೇಷದ ರಾಜಕಾರಣ’ ಎಂದು ದೂರಿದರು.

ಮುಖಂಡರ ಬಂಧನ; ಪ್ರಕರಣ ದಾಖಲು
ಬೆಳಿಗ್ಗೆ 10 ಗಂಟೆಯಿಂದ ಅಂಗಡಿಯವರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಮುಂದಾದರು. ವಿಶ್ವ ಹಿಂದೂ ಪರಿಷತ್ ಮುಖಂಡರಾದ ಸುರೇಶ್ ಮತ್ತು ಆರ್.ಡಿ ಮಹೇಂದ್ರ ಅವರು ತೆರವಿಗೆ ವಿರೋಧ ವ್ಯಕ್ತಪಡಿಸಿದಾಗ ಅಂಗಡಿ ಮಾಲೀಕರು ಧರಣಿ ಮಾಡಲು ಮುಂದಾದರು. ಸುರೇಶ್ ಮತ್ತು ಆರ್.ಡಿ ಮಹೇಂದ್ರ ಸೇರಿದಂತೆ 11 ಜನರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದರು.