ADVERTISEMENT

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ಆರಂಭ

ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 2:38 IST
Last Updated 20 ಡಿಸೆಂಬರ್ 2020, 2:38 IST
ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ರಘು ಅವಧಾನಿ ದತ್ತಮಾಲೆ ಹಾಕಿದರು.
ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ರಘು ಅವಧಾನಿ ದತ್ತಮಾಲೆ ಹಾಕಿದರು.   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಇದೇ 19ರಿಂದ 29ರವರೆಗೆ ಹಮ್ಮಿಕೊಂಡಿರುವ ದತ್ತಮಾಲಾ ಅಭಿಯಾನ ಶನಿವಾರ ವಿಧ್ಯುಕ್ತವಾಗಿ ಆರಂಭವಾಯಿತು.

ನಗರದ ರತ್ನಗಿರಿ ರಸ್ತೆಯ ಕಾಮ ಧೇನು ಗಣಪತಿ ದೇಗುಲದಲ್ಲಿ ದತ್ತಮಾಲೆ ಧಾರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 9 ಗಂಟೆಗೆ ದತ್ತ ಭಕ್ತರು ಕೇಸರಿ ಪಂಚೆ, ಶಲ್ಯ ಧರಿಸಿ, ದೇಗುಲದಲ್ಲಿ ಜಮಾಯಿಸಿದ್ದರು. 10.30ಕ್ಕೆ 50ಕ್ಕೂ ಹೆಚ್ಚು ಭಕ್ತರು ದತ್ತಮಾಲೆ ಧರಿಸಿದರು. ದತ್ತಾತ್ರೇಯ ನಾಮ ಸ್ಮರಣೆ, ಭಜನೆ ಮಾಡಿದರು. 11.30ರ ವೇಳೆಗೆ ಮಾಲಾಧಾರಣೆ ಕೈಂಕರ್ಯ ಮುಗಿಯಿತು. ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಯಿತು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ‘ರಾಜ್ಯ ಮತ್ತು ಜಿಲ್ಲೆಯ ವಿವಿಧೆಡೆ ಭಕ್ತರು ದತ್ತಮಾಲೆ ಧರಿಸಿದ್ದಾರೆ. ಕೋವಿಡ್‌–19 ಮುಂಜಾಗ್ರತೆಯಾಗಿ ಹೆಚ್ಚು ಜನರ ಸೇರಲು ನಿರ್ಬಂಧ ಇದೆ. ಅದರಿಂದ ಈ ಬಾರಿ ಸಂಖ್ಯಾತ್ಮಕವಾಗಿ ಹೆಚ್ಚು ಭಕ್ತರನ್ನು ಸೇರಿಸದಿರಲು ಹಾಗೂ ಸಾಂಪ್ರಾದಾಯಿಕ ಆಚರಣೆಗೆ ಒತ್ತು ನೀಡಲು ನಿರ್ಣಯಿಸಲಾಗಿದೆ. ದತ್ತ ಜಯಂತಿಯಂದು ಸಂಘಟನೆಗಳ ಪ್ರಮು ಖರು ಬಂದು ದತ್ತ ಪಾದುಕೆ ದರ್ಶನ ಪಡೆಯುತ್ತಾರೆ’ ಎಂದು ಹೇಳಿದರು.

ADVERTISEMENT

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್‌ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಇದೇ 19ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ದತ್ತ ಭಕ್ತರು ದತ್ತ ಮಾಲಾಧಾರಣೆ ಮಾಡಿದ್ದಾರೆ. 11 ದಿನ ವೃತಾಚರಣೆ ನಡೆಸಿ, ದತ್ತ ಪಾದುಕೆ ದರ್ಶನ ಪಡೆಯುವರು. ಈ ಬಾರಿ ಶೋಭಾಯಾತ್ರೆ ಮತ್ತು ಧಾರ್ಮಿಕ
ಸಭೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಅದಕ್ಕೆ ಪರ್ಯಾಯವಾಗಿ ಸಂಕೀರ್ತನಾ ಯಾತ್ರೆ ನಡೆಸಲಾಗುವುದು’ ಎಂದರು.

‘ಇದೇ 27ರಂದು ಅನಸೂಯದೇವಿ ಪೂಜೆ ಅಂಗವಾಗಿ ನಗರದಲ್ಲಿ ಮಹಿಳೆಯರ ಸಂಕೀರ್ತನಾ ಯಾತ್ರೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಬೋಳರಾಮೇಶ್ವರ ದೇಗುಲ ಆವರಣದಿಂದ ಯಾತ್ರೆ ಆರಂಭವಾಗಿ, ಐ.ಜಿ.ರಸ್ತೆಯ ಕಾಮಧೇನು ಗಣಪತಿ ದೇಗುಲದ ಬಳಿ ಮುಕ್ತಾಯವಾಗಲಿದೆ. 28ರಂದು ದತ್ತ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಕಾಮಧೇನು ಗಣಪತಿ ದೇಗುಲದ ಆವರಣದಿಂದ ಬಸವನಹಳ್ಳಿ ಮುಖ್ಯ ರಸ್ತೆ, ಎಂ.ಜಿ.ರಸ್ತೆ ಮಾರ್ಗವಾಗಿ ಬೋಳರಾಮೇಶ್ವರ ದೇಗುಲ ಆವರಣದಲ್ಲಿ ಮೆರವಣಿಗೆ ಅಂತ್ಯವಾಗಲಿದೆ. 29ರಂದು ದತ್ತ ಜಯಂತಿ ನಿಮಿತ್ತ ದತ್ತ ಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯುತ್ತೇವೆ’ ಎಂದು ಹೇಳಿದರು.

ಬಜರಂಗದಳದ ರಾಜ್ಯ ದಕ್ಷಿಣ ಪ್ರಾಂತ ಸಹಸಂಯೋಜಕ ರಘು ಸಕಲೇಶಪುರ, ಸದಸ್ಯ ಯೋಗೀಶ್‌ರಾಜ್‌ ಅರಸ್‌, ಬಿಜೆಪಿ ಜಿಲ್ಲಾ ಘಟಕದ ವಕ್ತಾರ ವರಸಿದ್ಧಿ ವೇಣುಗೋಪಾಲ್, ನಗರ ಘಟಕದ ಅಧ್ಯಕ್ಷ ಮಧುಕುಮಾರ್‌ರಾಜ್‌ ಅರಸ್‌, ಕಾಮಧೇನು ಗಣಪತಿ ದೇಗುಲ ಧರ್ಮದರ್ಶಿ ನಂಜುಂಡಸ್ವಾಮಿ ಇದ್ದರು.

‘ನ್ಯಾಯಾಲಯಕ್ಕೆ ಮನವರಿಕೆ’

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದವನ್ನು ನ್ಯಾಯಾಲಯ ಬಗೆಹರಿಸಿದೆ. ದತ್ತಪೀಠ ವಿಚಾರದಲ್ಲಿ ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದು ಮತ್ತೆ ನ್ಯಾಯಾಲಯದ ಅಂಗಳಕ್ಕೆ ಹೋಗುತ್ತದೆ. ತಾಲ್ಲೂಕಿನ ಬಾಬಾಬುಡನ್‌ಗಿರಿಯಲ್ಲಿನ ಗ್ರಾಮದ ಹೆಸರೇ ದತ್ತಪೀಠ. ಈ ಗ್ರಾಮದ ಸರ್ವೆ ನಂಬರ್ 198ರಲ್ಲಿ ದತ್ತಾತ್ರೇಯ ಪಾದುಕೆ ಇರುವ ಗುಹೆ ಇದೆ. ಮುಜರಾಯಿ ಇಲಾಖೆಯಿಂದ ದತ್ತಾತ್ರೇಯ ದೇವರ ಹೆಸರಿನಲ್ಲಿಯೇ ತಸ್ತಿಕ್ ಹಣ ಬಿಡುಗಡೆಯಾಗುತ್ತದೆ. ದಾಖಲೆಗಳ ಆಧಾರದಲ್ಲಿ, ವಾಸ್ತವವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸರ್ಕಾರ ಹಾಗೂ
ಸಂಘಟನೆ ಶ್ರಮಿಸಲಿವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ದತ್ತಮಾಲೆ ಅಭಿಯಾನ

ನರಸಿಂಹರಾಜಪುರ: ಇಲ್ಲಿನ ಬಸ್ ನಿಲ್ದಾಣದ ಸಮೀಪವಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ವತಿಯಿಂದ ಶನಿವಾರ ದತ್ತಮಾಲೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್, ಗಡಿಗೇಶ್ವರದ ಅಭಿಷೇಕ್ ಗೌಡ, ‌ನಗರ ಸಂಯೋಜಕ ಉತ್ತಮ್, ನಗರ ಸಹ ಸಂಯೋಜಕ ದರ್ಶನ್ ಆಚಾರ್ಯ, ಕಾರ್ಯಕರ್ತರಾದ ಮಧುಶೆಟ್ಟಿ, ಆಕಾಶ್ ಶೆಟ್ಟಿ, ಸುಮಂತ್, ಅನಿಲ್, ಅಕ್ಷಯ್, ಧನುಷ್, ಅಭಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.