ADVERTISEMENT

ರಾಗಿ ಬೆಳೆಗಾರರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ: ಆರೋಪ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:26 IST
Last Updated 12 ಫೆಬ್ರುವರಿ 2026, 7:26 IST
ಜಿಗಣೆಹಳ್ಳಿ ನೀಲಕಂಠಪ್ಪ
ಜಿಗಣೆಹಳ್ಳಿ ನೀಲಕಂಠಪ್ಪ   

ಕಡೂರು: ‘ಜನವರಿ ತಿಂಗಳ ಮೊದಲ ವಾರದಲ್ಲಿಯೇ ಬೆಂಬಲ ಬೆಲೆಗೆ ರೈತರಿಂದ ರಾಗಿ ಖರೀದಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಬೆಳೆಗಾರರ ಹಿತ ಕಾಪಾಡುವಲ್ಲಿ ವಿಫಲವಾಗಿದೆ’ ಎಂದು ಬಿಜೆಪಿ ಮುಖಂಡ ಜಿಗಣೆಹಳ್ಳಿ ನೀಲಕಂಠಪ್ಪ ಆರೋಪಿಸಿದರು.

ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 8 ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಿ, ಅದರಲ್ಲಿ ಕಡೂರು ತಾಲ್ಲೂಕಿನಲ್ಲಿ 5 ಕೇಂದ್ರ ತೆರೆದು, ಈಗಾಗಲೇ 13,245 ರೈತರು 3.47 ಲಕ್ಷ ಕ್ವಿಂಟಾಲ್‌ ರಾಗಿಯನ್ನು ಬೆಂಬಲ ಬೆಲೆಗೆ ನೀಡಲು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿಬಾರಿ ಜನವರಿ ಅಥವಾ ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಖರೀದಿ ಆರಂಭವಾಗುತ್ತಿತ್ತು. ಆದರೆ, ಸರ್ಕಾರವು ಗೋಣಿ ಚೀಲದ ಪೂರೈಕೆ ಆಗುತ್ತಿಲ್ಲ ಎನ್ನುವ ಸಬೂಬು ಹೇಳಿಕೊಂಡು ಇಲ್ಲಿಯವರೆಗೂ ಸಮಸ್ಯೆ ಬಗೆಹರಿಸಲು ಯತ್ನಿಸದೆ ಇರುವುದರಿಂದ, ರೈತರು ತಾವು ಬೆಳೆದ ರಾಗಿಯನ್ನು ಶೇಖರಿಸಿ ಇಟ್ಟುಕೊಳ್ಳಲಾಗದೆ ಕಷ್ಟ ಅನುಭವಿಸುತ್ತಿದ್ದಾರೆ’ ಎಂದರು.

ಬಡ ರೈತರು ಹಣದ ಕೊರತೆಯಿಂದ ಖಾಸಗಿ ವರ್ತಕರಿಗೆ ಕಡಿಮೆ ಬೆಲೆಗೆ ರಾಗಿಯನ್ನು ನೀಡುವಂತಹ ಪರಿಸ್ಥಿತಿ ಬಂದಿದೆ. ಇದರಿಂದ ರೈತರು ಕಂಗಾಲಾಗಿದ್ದು, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೇಲೆ ಭಾರ ಹಾಕಿ ಸರ್ಕಾರವು ಚೀಲ ಖರೀದಿಗೂ ಹಣವಿಲ್ಲದೆ ದಿನ ದೂಡುತ್ತಿದೆ. ಚೀಲಕ್ಕೆ ಕೊಡಲೂ ದುಡ್ಡು ಇಲ್ಲದ ಸರ್ಕಾರ ರೈತರಿಗೆ ರಾಗಿಯ ದುಡ್ಡು ಹೇಗೆ ಕೊಡುತ್ತದೆ ಎಂದು ಪ್ರಶ್ನಿಸಿದರು.

ADVERTISEMENT

ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮವು ರಾಗಿ ಖರೀದಿಗೆ ಏಜೆನ್ಸಿ ಪಡೆದಿದ್ದು (ಕೆಎಫ್‌ಸಿಎಸ್‌ಸಿ) ಮತ್ತು ಎಫ್‌ಪಿಒಗಳು ಖರೀದಿಯ ಉಸ್ತುವಾರಿ ವಹಿಸಿಕೊಂಡಿವೆ. ಕಡೂರು ತಾಲ್ಲೂಕಿಗೆ 6 ಲಕ್ಷ ಖಾಲಿ ಚೀಲಗಳು ಬರಬೇಕಿದ್ದು, ಅವು ಬಂದ ನಂತರ ಖರೀದಿ ಆರಂಭಿಸಲು ಈ ಏಜೆನ್ಸಿಗಳು ಕಾಯುತ್ತಿವೆ. ಮೂಲಗಳ ಪ್ರಕಾರ ಪಶ್ಚಿಮ ಬಂಗಾಳದ ಕಂಪನಿ ಚೀಲಗಳ ಪೂರೈಕೆ ಟೆಂಡರ್‌ ಪಡೆದಿದ್ದು, ಆ ಕಂಪನಿ ಸಮಯಕ್ಕೆ ಸರಿಯಾಗಿ ಚೀಲ ಸರಬರಾಜು ಮಾಡಿಲ್ಲ ಎಂಬ ಮಾಹಿತಿ ದೊರಕಿದೆ. ಸರ್ಕಾರ ಕಂಪನಿಗಳಿಗೆ ಹಣ ನೀಡಿದೆಯೋ ಇಲ್ಲವೋ ತಿಳಿಯುತ್ತಿಲ್ಲದ ಕಾರಣ ಸರ್ಕಾರದಲ್ಲಿ ಹಣದ ಕೊರತೆ ಎದ್ದು ಕಾಣುತ್ತಿದೆ ಎಂದು ಅವರು ದೂರಿ, ಸರ್ಕಾರವು ಶೀಘ್ರ ರೈತರ ಆತಂಕವನ್ನು ದೂರ ಮಾಡಲಿ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.