ADVERTISEMENT

ಚಿಕ್ಕಮಗಳೂರು: ರಾಜ್ಯಮಟ್ಟದ ಮ್ಯಾರಥಾನ್‌ ಸ್ಪರ್ಧೆ 25 ರಂದು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 13:51 IST
Last Updated 23 ಫೆಬ್ರುವರಿ 2024, 13:51 IST
ಕೆ.ಬಿ.ಅಶೋಕ
ಕೆ.ಬಿ.ಅಶೋಕ   

ಚಿಕ್ಕಮಗಳೂರು: ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಇದೇ 25 ರಂದು ಚಿಕ್ಕಮಗಳೂರು ಮ್ಯಾರಥಾನ್ ಸೀಸನ್‌–1 ಹೆಸರಿನಲ್ಲಿ ರಾಜ್ಯಮಟ್ಟದ ಮ್ಯಾರಥಾನ್‌ ಸ್ಪರ್ಧೆ ಆಯೋಜಿಸಲಾಗಿದೆ. ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಬೆಳಿಗ್ಗೆ 6 ಗಂಟೆಗೆ ಚಾಲನೆ ಸಿಗಲಿದೆ ಎಂದು ಸಂಘಟಕ ಕೆ.ಬಿ. ಅಶೋಕ್ ತಿಳಿಸಿದರು.

14 ರಿಂದ 50 ವರ್ಷ ತುಂಬಿದ ವಿವಿಧ ವಯೋಮಾನದ ಪುರುಷ ಮತ್ತು ಮಹಿಳೆಯರಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿವಿಧ ಜಿಲ್ಲೆಗಳಿಂದ ಸುಮಾರು 250 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ಭವ್ಯ ಪರಿಸರ ತಾಣಗಳನ್ನು ಪರಿಚಯಿಸುವುದು ಮ್ಯಾರಥಾನ್ ಉದ್ದೇಶವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಮ್ಯಾರಥಾನ್ ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. 14 ವರ್ಷದ ಬಾಲಕ, ಬಾಲಕಿಯರಿಗೆ 3 ಕಿ.ಮೀ, 18 ರಿಂದ 35 ರ ವಯೋಮಾನದ ಪುರುಷ ಮತ್ತು ಮಹಿಳೆಯರಿಗೆ 10 ಕಿ.ಮೀ, 35 ರಿಂದ 50 ವರ್ಷದವರಿಗೆ 10 ಕಿ.ಮೀ, ಹಾಗೂ 50 ವರ್ಷ ತುಂಬಿದವರಿಗೆ 6 ಕಿ.ಮೀ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ. ವಿಶೇಷವಾಗಿ ಪುರುಷ ಮತ್ತು ಮಹಿಳೆಯರಿಗೆ ಫನ್‌ ರನ್‌, ಫನ್‌ ವಾಕ್‌ (2ಕಿ.ಮೀ) ಹಾಗೂ ಮಕ್ಕಳ ವಿಭಾಗಕ್ಕೆ ಓನ್‌ ರನ್‌ ಓನ್ ಫ್ಯಾಮಿಲಿ ಸ್ಪರ್ಧೆ ಆಯೋಜಿಸಿದೆ ಎಂದರು.

ADVERTISEMENT

14 ವರ್ಷದ ಬಾಲಕ, ಬಾಲಕಿಯರ ಸ್ಪರ್ಧೆ ವಿಜೇತರಿಗೆ ಪ್ರಥಮ ₹5 ಸಾವಿರ, ದ್ವಿತೀಯ ₹3 ಸಾವಿರ ಹಾಗೂ ತೃತೀಯ ಬಹುಮಾನ ₹2 ಸಾವಿರ ಹಾಗೂ 18 ರಿಂದ 35 ವರ್ಷದ ವಿಜೇತರಿಗೆ ಪ್ರಥಮ ₹7 ಸಾವಿರ, ದ್ವಿತೀಯ ₹5 ಸಾವಿರ, ತೃತೀಯ ₹3 ಸಾವಿರ ಹೀಗೆ ವಿವಿಧ ಹಂತಗಳಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು ಎಂದರು.

ವಿಸ್ತಾರ ಪ್ಲಸ್‌ ಲೈಫ್‌ ಸ್ಟೈಲ್ ಸಹಯೋಗದಲ್ಲಿ ಮ್ಯಾರಥಾನ್ ಆಯೋಜಿಸಿದ್ದು, ನಗರದ ಹೊರವಲಯದ ವಿವಿಧ ಮಾರ್ಗದಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ. ಅಧಿಕ ಸಂಖ್ಯೆಯಲ್ಲಿ ನೊಂದಣಿ ಮೂಲಕ ಭಾಗವಹಿಸುವಂತೆ ತಿಳಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‌ನ ಫ್ರಾನ್ಸಿಸ್‌, ಯಶೋಧ ಚಂಗಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.