ADVERTISEMENT

ಪರಿಸ್ಥಿತಿ ಬಿಗಡಾಯಿಸಿದರೆ ಕಠಿಣ ಕ್ರಮ

ಮಾಸ್ಕ್‌ ಧರಿಸದವರಿಗೆ ₹ 100 ದಂಡ ವಿಧಿಸಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 3:35 IST
Last Updated 4 ಏಪ್ರಿಲ್ 2021, 3:35 IST
ಚಿಕ್ಕಮಗಳೂರಿನ ಕೋವಿಡ್‌ ವಾರ್‌ ರೂಂನಲ್ಲಿ ಶನಿವಾರ ಜಿಲ್ಲಾಧಿಕಾರಿ ರಮೇಶ್‌ ಅವರು ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಮಾಹಿತಿ ಪಡೆದುಕೊಂಡರು.
ಚಿಕ್ಕಮಗಳೂರಿನ ಕೋವಿಡ್‌ ವಾರ್‌ ರೂಂನಲ್ಲಿ ಶನಿವಾರ ಜಿಲ್ಲಾಧಿಕಾರಿ ರಮೇಶ್‌ ಅವರು ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಮಾಹಿತಿ ಪಡೆದುಕೊಂಡರು.   

ಚಿಕ್ಕಮಗಳೂರು: ‘ಕೋವಿಡ್‌–19 ಪರಿಸ್ಥಿತಿ ಬಿಗಡಾಯಿಸಿದರೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ. ಮಾರ್ಗಸೂಚಿ ಪಾಲನೆಗೆ ಸಾರ್ವಜನಿಕ ರಿಗೆ ತಿಳಿವಳಿಕೆ ನೀಡಲು, ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಸಂಚಾರ ದಳದವರಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಟ್ಟಡದ್ಲಲಿನ ಜಿಲ್ಲಾ ‘ಕೋವಿಡ್ ವಾರ್ ರೂಂ’ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು, ಅಂತರ ಪಾಲನೆ ಮಾಡಬೇಕು, ಕೋವಿಡ್‌ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಪ್ರಚಾರ ಮಾಡುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದ್ದೇನೆ. ಜನಸಂಖ್ಯೆ ಹೆಚ್ಚು ಇರುವ ತಾಲ್ಲೂಕುಗಳಿಗೆ ಎರಡು, ಜಾಸ್ತಿ ಇರುವ ಕಡೆಗಳಿಗೆ ಮೂರು ತಂಡಗಳನ್ನು ರಚಿಸಿದ್ದೇವೆ’ ಎಂದು ಹೇಳಿದರು.

‘ನಗರಸಭೆಯಿಂದ ತಂಡಗಳನ್ನು ರಚಿಸುವಂತೆ ಸೂಚನೆ ನೀಡಿದ್ದೇನೆ. ಪೊಲೀಸರು, ತಹಶೀಲ್ದಾರ್‌ಗಳು ನಗರದಲ್ಲಿ ಸುತ್ತು ಹಾಕಬೇಕು. ಮಾಸ್ಕ್‌ ಧರಿಸದವರಿಗೆ ₹ 100 ದಂಡ ವಿಧಿಸಲಾಗುವುದು’ ಎಂದರು.

ADVERTISEMENT

‘26 ವಿದ್ಯಾರ್ಥಿನಿಯರಿಗೆ ಕೋವಿಡ್‌ ದೃಢಪಟ್ಟಿರುವ ನಗರದ ಶಾಲೆಯನ್ನು ಸ್ಥಗಿತಗೊಳಿಸಲಾಗಿದೆ. ವಿವಿಧ ಶಾಲೆಗಳ ಪರಿಸ್ಥಿತಿ ಅವಲೋಕಿಸಿ ಕ್ರಮ ವಹಿಸುತ್ತೇವೆ’ ಎಂದು ಅವರು ಉತ್ತರಿಸಿದರು.

‘ಕೋವಿಡ್‌ ತಗುಲಿ ಆಸ್ಪತ್ರೆಗೆ ದಾಖಲಾಗಿರುವವರ ಬಗ್ಗೆ ನಿಗಾವಹಿಸಿದ್ದೇವೆ. ಕೋವಿಡ್‌ ದೃಢಪಟ್ಟಿರುವವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕ್ರಮವಹಿಸಲಾಗಿದೆ. ಸೋಂಕಿತರ ಪತ್ತೆ, ನಿಗಾ ಮತ್ತು ಚಿಕಿತ್ಸೆ (3ಟಿ) ನಿಟ್ಟಿನಲ್ಲಿ ಆದ್ಯ ಗಮನ ಹರಿಸಲಾಗಿದೆ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಮಾಹಿತಿ ಪರಿಶೀಲಿಸಿದ್ದೇನೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿವೆ. ನಿಯಂತ್ರಣ ನಿಟ್ಟಿನಲ್ಲಿ ಆದ್ಯ ಗಮನ ಹರಿಸಲಾಗುವುದು. ಜಿಲ್ಲೆಯಲ್ಲಿನ ಜನ ಸಾಂದ್ರತೆಗೆ ತಕ್ಕಂತೆ ಮಾರ್ಷಲ್ ತಂಡಗಳನ್ನು ರಚನೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ರಮೇಶ ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್, ಡಾ.ಹರೀಶ್
ಬಾಬು, ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.