ADVERTISEMENT

ಶಾಸಕರ ವಿರುದ್ಧ ತೀವ್ರ ಅಸಮಾಧಾನ

ಅಜ್ಜಂಪುರ: ವೀರಶೈವ ಲಿಂಗಾಯತರ ಸಮಾನ ಮನಸ್ಕರ ಸಭೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 4:56 IST
Last Updated 21 ಮಾರ್ಚ್ 2023, 4:56 IST
ಅಜ್ಜಂಪುರದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಸೋಮವಾರ ನಡೆದ ವೀರಶೈವ ಲಿಂಗಾಯತ ಸಮಾನ ಮನಸ್ಕರರ ಸಭೆ ನಡೆಯಿತು. ಮುಖಂಡ ಬೆಟ್ಟದಹಳ್ಳಿ ರವಿ, ಕುಡ್ಲೂರು ಚಂದ್ರಮೌಳಿ, ಸಂತೋಷ್‌ ಇದ್ದರು.
ಅಜ್ಜಂಪುರದ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಸೋಮವಾರ ನಡೆದ ವೀರಶೈವ ಲಿಂಗಾಯತ ಸಮಾನ ಮನಸ್ಕರರ ಸಭೆ ನಡೆಯಿತು. ಮುಖಂಡ ಬೆಟ್ಟದಹಳ್ಳಿ ರವಿ, ಕುಡ್ಲೂರು ಚಂದ್ರಮೌಳಿ, ಸಂತೋಷ್‌ ಇದ್ದರು.   

ಅಜ್ಜಂಪುರ: ‘ವೀರಶೈವ ಲಿಂಗಾಯತ ಸಮಾಜ ಕೇವಲ ಬಿಜೆಪಿ‌ಗೆ ಸೀಮಿತಗೊಂಡಿಲ್ಲ, ಕಾಂಗ್ರೆಸ್ ಪರವೂ ಇದೆ. ಮುಂಬರುವ ಚುನಾವಣೆಯಲ್ಲಿ ಸಮಾಜ ವಿರೋಧಿಯಾಗಿರುವ ಕ್ಷೇತ್ರದ ಶಾಸಕರ ವಿರುದ್ಧ ಮತ ಚಲಾಯಿಸಲಿದೆ’ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡ ಬೆಟ್ಟದಹಳ್ಳಿ ರವಿ ಹೇಳಿದರು.

ಪಟ್ಟಣದ ಬೀರಲಿಂಗೇಶ್ವರ ಸಮು ದಾಯ ಭವನದಲ್ಲಿ ಸೋಮವಾರ ನಡೆದ ಅಜ್ಜಂಪುರ-ತರೀಕೆರೆ ತಾಲ್ಲೂಕು ವೀರಶೈವ ಲಿಂಗಾಯತರ ಸಮಾನ ಮನಸ್ಕರ ಸಭೆಯಲ್ಲಿ ಅವರು ಮಾತನಾಡಿದರು.

‘ಶಾಸಕರು ಸಮಾಜದ ಶಾಲೆಯನ್ನು ಸರಿಯಾಗಿ ನಿರ್ವಹಿಸದೆ ಮುಚ್ಚಿಸಿದರು. ಆ ಮೂಲಕ ಸಿರಿಗೆರೆ ತರಳುವಬಾಳು ಶ್ರೀಗಳಿಗೆ ಕೊಟ್ಟ ಮಾತು ತಪ್ಪಿದರು. ಶ್ರೀಗಳು ಶೇ75 ಹಣ ನೀಡುವುದಾಗಿ ಭರವಸೆ ನೀಡಿದರೂ ಶೇ 25 ರಷ್ಟು ಹಣ ಹೊಂದಿಸಿ ಸಮುದಾಯ ಭವನ ನಿರ್ಮಿಸಲು ವಿಫಲರಾದರು. ಶಾಸಕರಾಗಿ ಸಮಾಜಕ್ಕೆ ಏನೂ ಕೊಡುಗೆ ನೀಡಲಿಲ್ಲ. ಇಂತಹವರಿಂದ ಏನೂ ಉಪಯೋಗವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸಮಾಜ ಮುಖಂಡ ಕುಡ್ಲೂರು ಚಂದ್ರಮೌಳಿ, ‘ಶಾಸಕರಾದ ನಂತರ ಅಧಿಕಾರದ ಮದ ಹತ್ತಿಸಿಕೊಂಡರು. ಗೆಲುವಿಗೆ ನಿಂತ ಸಮಾಜವನ್ನೇ ಕಡೆಗಣಿಸಿದರು. ಇದನ್ನು ಪ್ರಶ್ನಿಸಿದವರ ವಿರುದ್ಧ ಹಗೆ ಸಾಧಿಸಿದರು. ವಿನಾ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರಿಸಿ ಕಿರುಕುಳ ನೀಡಿದರು. ಎಲ್ಲದಕ್ಕೂ ಚುನಾವಣೆಯಲ್ಲಿ ಉತ್ತರಿಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಂತೋಷ್‌, ‘ಕಾಂಗ್ರೆಸ್ ವೀರಶೈವ ಲಿಂಗಾಯತ ಸಮಾಜದವರಿಗೆ ತರೀಕೆರೆ ಕ್ಷೇತ್ರದ ಟಿಕೆಟ್ ನೀಡಬೇಕು. ಸಮಾಜದ ಧ್ರುವಕುಮಾರ್, ದೋರನಾಳು ಪರಮೇಶ್, ರವಿ ಶ್ಯಾನುಭಾಗ್ ಗುರುತಿಸಿಕೊಂಡಿದ್ದಾರೆ. ಅವರಲ್ಲೊಬ್ಬರಿಗೆ ಟಿಕೆಟ್ ನೀಡಿದರೆ, ಗೆಲ್ಲಿಸಿಕೊಂಡು ಬರಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ಲಿಂಗದಹಳ್ಳಿ ಬಿ.ಆರ್. ರವಿಕುಮಾರ್ ಮಾತನಾಡಿ, ‘ಚುನಾವಣೆ ವೇಳೆ ಸಮಾಜ, ಮಠ, ಶ್ರೀಗಳನ್ನು ಸ್ಮರಿಸಿದರು. ಎಲ್ಲರ ಮನೆ ಬಾಗಿಲಿಗೆ ಬಂದು ನೆರವು ಕೋರಿದರು. ಸಮಾಜದ ಸಹಕಾರದಿಂದ ಶಾಸಕರಾದರು. ಬಳಿಕ ಎಲ್ಲರನ್ನೂ ದೂರ ತಳ್ಳಿದರು’ ಎಂದು ಶಾಸಕರ ವಿರುದ್ಧ ಹರಿಹಾಯ್ದರು.

ಮುಖಂಡ ಹಿರೇಖಾನವಂಗಲ ಕುಮಾರ್, ‘ರಾಜಕೀಯವಾಗಿ ಶೂನ್ಯವಾಗಿದ್ದವರನ್ನು ಸಮಾಜವು ಶಾಸಕರಾಗಿ ಮಾಡಿತು. ಆದರೆ, ಅದೇ ಸಮಾಜಕ್ಕೆ ದ್ರೋಹ ಎಸಗಿದರು’ ಎಂದರು.

ಜಯಕುಮಾರ (ಕಿರಾಳಿ), ಅಣ್ಣಾಪುರ ಶಿವಕುಮಾರ್, ತಗ್ಗಿನಹಳ್ಳಿ ಉಮೇಶ್, ಚನ್ನಾಪುರ ನಾಗಣ್ಣ, ಅರವಿಂದ ಹಲಸೂರು, ಹುಣಸಘಟ್ಟ ಮಲ್ಲಿಕಾರ್ಜುನ, ಬಾಣೂರು ಹರೀಶ್, ಸೊಕ್ಕೆ ಬಸವರಾಜ, ಅಮೃತಾಪುರ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.