ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಕಾಲೇಜಿನ ಕಿಟಕಿ ಗಾಜು ಒಡೆದ ವಿದ್ಯಾರ್ಥಿ!

ವಿದ್ಯಾರ್ಥಿ ವಿರುದ್ಧ ಪ್ರಾಂಶುಪಾಲರ ದೂರು: ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 14:09 IST
Last Updated 20 ಜನವರಿ 2021, 14:09 IST
ಮೂಡಿಗೆರೆ ಪಟ್ಟಣದ ಡಿ.ಎಸ್. ಬಿಳಿಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಿಟಕಿಯ ಗಾಜನ್ನು ಹೊಡೆಯುತ್ತಿರುವ ವಿದ್ಯಾರ್ಥಿ.
ಮೂಡಿಗೆರೆ ಪಟ್ಟಣದ ಡಿ.ಎಸ್. ಬಿಳಿಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಿಟಕಿಯ ಗಾಜನ್ನು ಹೊಡೆಯುತ್ತಿರುವ ವಿದ್ಯಾರ್ಥಿ.   

ಮೂಡಿಗೆರೆ: ಪಟ್ಟಣದ ಡಿ.ಎಸ್. ಬಿಳೀಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಸಲುವಾಗಿ ಕಾಲೇಜಿನ ಕಿಟಕಿಯನ್ನೇ ಒಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲೇಜಿನಲ್ಲಿ ದ್ವಿತೀಯ ಬಿ.ಎ. ಓದುತ್ತಿರುವ ವಿದ್ಯಾರ್ಥಿಯೊಬ್ಬ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಕಾಲೇಜಿನ ಕಿಟಕಿ ಗಾಜನ್ನು ಸಿನಿಮೀಯ ರೀತಿಯಲ್ಲಿ, ಕೈಯ ಮುಷ್ಠಿಯಿಂದ ಗುದ್ದಿ ಒಡೆದಿದ್ದಾನೆ. ಈ ದೃಶ್ಯವನ್ನು ಮತ್ತೊಬ್ಬ ವಿದ್ಯಾರ್ಥಿ ಚಿತ್ರೀಕರಣ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

‘ಕಿಟಕಿ ಗಾಜು ಒಡೆದಿರುವ ವಿದ್ಯಾರ್ಥಿಯು, ಕಾಲೇಜಿಗೆ ಅಮಾವಾಸ್ಯೆ, ಹುಣ್ಣಿಮೆಗೆ ಬರುವ ವಿದ್ಯಾರ್ಥಿಯಾಗಿದ್ದು, ಆತನು ಕಿಟಕಿಯನ್ನು ಒಡೆದಿರುವ ದೃಶ್ಯವನ್ನು ವಿಡಿಯೊದಲ್ಲಿ ಗಮನಿಸಿದೆ. ಬಳಿಕ ಸಿಬ್ಬಂದಿ ಜತೆ ಚರ್ಚಿಸಿ ವಿದ್ಯಾರ್ಥಿಯ ಪೋಷಕರಿಗೆ ಮಾಹಿತಿಯನ್ನು ತಿಳಿಸಿ, ವಿದ್ಯಾರ್ಥಿಯನ್ನು ಕಾಲೇಜಿನಿಂದ ವಾರಗಳ ಕಾಲ ಅಮಾನತು ಮಾಡಲಾಗಿದೆ. ಈ ಕುರಿತು ಪೊಲೀಸರಿಗೂ ದೂರು ನೀಡಿ ಎಫ್ಐಆರ್ ದಾಖಲಿಸಲಾಗಿದೆ’ ಎಂದು ಕಾಲೇಜಿನ ಪ್ರಾಂಶುಪಾಲ ಬಸವರಾಜಪ್ಪ ತಿಳಿಸಿದರು.

ADVERTISEMENT

ಕಿಟಕಿ ಗಾಜು ಒಡೆಯುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗಾಜನ್ನು ಒಡೆದ ಬಳಿಕ ವಿದ್ಯಾರ್ಥಿಯ ಮೂರೂ ಬೆರಳಿಗೆ ಗಾಯವಾಗಿ ರಕ್ತ ಜಿನುಗುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.