ADVERTISEMENT

ಬಂಡಾಜೆಗೆ ಚಾರಣ ಹೋಗಿ ನಿತ್ರಾಣಗೊಂಡಿದ್ದ ಚಿತ್ರದುರ್ಗದ 10 ವಿದ್ಯಾರ್ಥಿಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 3:52 IST
Last Updated 10 ಜೂನ್ 2025, 3:52 IST
   

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನದುರ್ಗ ಕಾಡಿನಲ್ಲಿ ಚಾರಣ ಹೋಗಿ ನಿತ್ರಾಣಗೊಂಡಿದ್ದ 10 ವಿದ್ಯಾರ್ಥಿಗಳನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಚಿತ್ರದುರ್ಗದ ವಿವಿಧ ಕಾಲೇಜಿನ ಐವರು ವಿದ್ಯಾರ್ಥಿನಿಯರು ಮತ್ತು ಐವರು ವಿದ್ಯಾರ್ಥಿಗಳ ತಂಡ ಟೆಂಪೊ ಟ್ರಾವೆಲರ್‌ ವಾಹನ ಬಾಡಿಗೆಗೆ ಪಡೆದು ಪ್ರವಾಸ ಬಂದಿದ್ದರು. 

ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ರಾಣಿಝರಿ ಕಡೆಯಿಂದ ಚಾರಣ ಆರಂಭಿಸಬೇಕಿತ್ತು. ಗೂಗಲ್‌ ಮ್ಯಾಪ್‌ನಲ್ಲಿ ಬಂಡಾಜೆ ಟ್ರಕ್ಕಿಂಗ್ ಎಂದು ನಮೂದಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯ ದಿಡಪೆ ಮಾರ್ಗ ತೋರಿಸಿದೆ. ಅಲ್ಲಿಂದ ಚಾರಣ ಆರಂಭಿಸಿದ್ದು, ಬಂಡಾಜೆ ಜಲಪಾತ ತನಕ ಹೋಗಿದ್ದಾರೆ.

ADVERTISEMENT

ವಾಪಸ್ ಬರಲು ಬಲ್ಲಾಳರಾಯನದುರ್ಗ ಮತ್ತು ರಾಣಿಝರಿ ಕಡೆಯ ಮಾರ್ಗ ಹಿಡಿದಿದ್ದಾರೆ. ಅಷ್ಟರಲ್ಲಿ ಕತ್ತಲಾಗಿದ್ದರಿಂದ ದಾರಿ ತಪ್ಪಿದ್ದಾರೆ. ನೆಟ್‌ವರ್ಕ್ ಇಲ್ಲದ ಕಾರಣ ಗೂಗಲ್ ಮ್ಯಾಪ್‌ ಕೂಡ ಕೆಲಸ ಮಾಡಿಲ್ಲ. 

ವಿಷಯ ತಿಳಿದ ಬಾಳೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ದಿಲೀಪ್‌ಕುಮಾರ್, ಸ್ನೇಕ್ ಆರೀಫ್, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಕಾಡಿಗೆ ಹೋಗಿ ಆರು ಗಂಟೆಗಳ ಕಾಲ ಹುಡಕಾಟ ನಡೆಸಿದರು. ಮಧ್ಯರಾತ್ರಿ 2 ಗಂಟೆ ವೇಳೆಗೆ ವಿದ್ಯಾರ್ಥಿಗಳು ಸಿಕ್ಕಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತಂದರು. 

ಚಾರಣ ಬಂದವರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು. ಇನ್ನೂ ಬೇರೆ ಬೇರೆ ಕಾಲೇಜುಗಳ ಹೆಸರು ಹೇಳಿದರು. ಎಲ್ಲರನ್ನೂ ವಾಹನ ಹತ್ತಿಸಿ  ಚಿತ್ರದುರ್ಗಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.