ADVERTISEMENT

ಚಿಕ್ಕಮಗಳೂರು: ಸಂಭ್ರಮದ ‘ಸುಗ್ಗಿ ಕುಣಿತ‘ ಜಾನಪದ ಕಲಾಪ್ರದರ್ಶನ

ಕಸಾಪ, ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 13:21 IST
Last Updated 9 ಸೆಪ್ಟೆಂಬರ್ 2018, 13:21 IST
ಸ್ಪರ್ಧೆಯಲ್ಲಿ ಸುಗ್ಗಿ ಕುಣಿತದ ಪರಿ
ಸ್ಪರ್ಧೆಯಲ್ಲಿ ಸುಗ್ಗಿ ಕುಣಿತದ ಪರಿ   

ಚಿಕ್ಕಮಗಳೂರು: ಕನ್ನಡ ಸಾಹಿತ್ಯಪರಿಷತ್ತಿನ(ಕಸಾಪ) ಜಿಲ್ಲಾಘಟಕ, ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ತಾಲ್ಲೂಕಿನ ಮಳಲೂರಿನಲ್ಲಿ ಆಯೋಜಿಸಿದ್ದ ‘ಸುಗ್ಗಿ ಕುಣಿತ’ ಸ್ಪರ್ಧೆ ಹಾಗೂ ಜಾನಪದ ಕಲಾಪ್ರದರ್ಶನ ಭಾನುವಾರ ಸಂಭ್ರಮದಿಂದ ಜರುಗಿತು.

ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಜಾನಪದವಾದ್ಯವನ್ನು ಸಾಂಕೇತಿಕವಾಗಿ ನುಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಸುಗ್ಗಿ ಕುಣಿತ ಆರಂಭವಾಗುತ್ತಿದ್ದಂತೆ ವೇದಿಕೆ ಬಳಿ ಜನಜಾತ್ರೆ ನೆರೆಯಿತು. ಗ್ರಾಮೀಣ ವಾದ್ಯಗಳ ನಿನಾದಕ್ಕೆ, ಪುರುಷರು, ಮಹಿಳೆಯರು, ಮಕ್ಕಳು, ವೃದ್ದರು ಕುಣಿದು ಕುಪ್ಪಳಿಸಿದರು.

ADVERTISEMENT

ವಿಧಾನ ಪರಿಷತ್ತಿನ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಗ್ರಾಮೀಣ ಜನರ ಬದುಕಿನಲ್ಲಿ ಜಾನಪದ ಸಂಸ್ಕೃತಿ ಹಾಸುಹೊಕ್ಕಾಗಿದೆ. ಜಾನಪದ ಕಲೆಗಳು ನಶಿಸಲು ಬಿಡಬಾರದು. ಜಾನಪದ ಕಲಾವಿದರಿಗೆ ಪ್ರೋತ್ಸಾಹಿಸಬೇಕು. ದೇಸಿ ಸಂಸ್ಕೃತಿ ಉಳಿಸಬೇಕು ಎಂದರು.

ಜಾನಪದ ಪರಿಷತ್ತಿನ ರಾಜ್ಯಘಟಕದ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಜಾನಪದ ಕಲೆ ಸಂಸ್ಕೃತಿ ಪ್ರತೀಕವಾಗಿದೆ. ಅದನ್ನು ಯುವಪೀಳಿಗೆ ಮುಂದುವರಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಘಟಕದ ಅಧ್ಯಕ್ಷ ಕುಂದೂರು ಅಶೋಕ್ ‘ಪ್ರಜಾವಾಣಿ’ ಜೊತೆ ಮಾತನಾಡಿ, ಪ್ರಚಾರ ಕಡಿಮೆ ಇದ್ದರೂ ಸಹ, ಸುತ್ತಲ ಹಳ್ಳಿಗಳ ಜನರು ಸುಗ್ಗಿ ಕುಣಿತಕ್ಕೆ ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.

ಜಿಲ್ಲೆಯ ಕಲ್ಲಳ್ಳಿ ಮತ್ತು ಮಳಲೂರಿನ ಮಹಿಳಾ ತಂಡಗಳು ಒಳಗೊಂಡಂತೆ, ಕೊಟ್ಟಿಗೆಹಾರ, ಆಲ್ದೂರು, ದೊಡ್ಡಮಾಗರವಳ್ಳಿ, ಇಂದಾವರ, ಕುಂದೂರು, ಹಾದಿಹಳ್ಳಿಯಿಂದ ಒಟ್ಟು 16 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಸಂತೋಷ್, ಸದಸ್ಯ ಪ್ರಸನ್ನ ಕುಮಾರ್, ರೈತ ಸಂಘದ ಮುಖಂಡ ಕೆ.ಕೆ.ಕೃಷ್ಣೇಗೌಡ, ಎಂ.ಬಿ.ರುದ್ರೇಗೌಡ, ಆಶಾ ಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಇದ್ದರು.

ಮಳಲೂರು ಏತನೀರಾವರಿ ಯೋಜನೆಯ ಕಾಮಗಾರಿ ಪೂರ್ಣಕ್ಕೆ ಒತ್ತಾಯ
ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಮಳಲೂರು ಏತನೀರಾವರಿ ಯೋಜನೆಯ ಕಾಮಗಾರಿ ಪೂರ್ಣಕ್ಕೆ ಒತ್ತಾಯಿಸಿ ಮಳಲೂರು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕಾಮಗಾರಿ ಆರಂಭವಾದಾಗ ರಾಜ್ಯ ಸರ್ಕಾರ ₹6 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ನಂತರದ ದಿನಗಳಲ್ಲಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಈಗ ಕಾಮಗಾರಿ ಪೂರ್ಣಕ್ಕೆ ಕ್ರಮವಹಿಸುತ್ತೇನೆ. ರಾಜ್ಯ ಸರ್ಕಾರ, ಜಿಲ್ಲಾಧಿಕಾರಿ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ ಎಂದು ಶಾಸಕ ಕುಮಾರಸ್ವಾಮಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.