
ಆಲ್ದೂರು: ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಾಂದಿ ಗ್ರಾಮದ ಹಿಪ್ಲ ಹೋಂ ಸ್ಟೇಯಲ್ಲಿ ತಂಗಿದ್ದ ಯುವತಿ ಸ್ನಾನ ಗೃಹದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.
ಬೇಲೂರು ತಾಲ್ಲೂಕಿನ ದೇವಲಾಪುರದ ದೇವರಾಜು ಗೌಡ ಅವರ ಪುತ್ರಿ ರಂಜಿತಾ (27) ಮೃತಪಟ್ಟವರು. ಇವರ ಸಹೋದರ ಶರತ್ ಮೂಡಿಗೆರೆ ಪಟ್ಟಣದ ಗೆಂಡೆಹಳ್ಳಿ ಮಾರ್ಗದಲ್ಲಿ ಬೇಕರಿ ನಡೆಸುತ್ತಿದ್ದು, ಯುವತಿಯ ಕುಟುಂಬ ಮೂಡಿಗೆರೆ ಪಟ್ಟಣದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ರಂಜಿತಾ ದಾವಣಗೆರೆ ಮೂಲದ ರೇಖಾ ಅವರೊಂದಿಗೆ ಶುಕ್ರವಾರ ಹಿಪ್ಲ ಹೋಂಸ್ಟೇನಲ್ಲಿ ತಂಗಿದ್ದರು. ಶನಿವಾರ ಮುಂಜಾನೆ 9 ಸಮಯಕ್ಕೆ ಸ್ನಾನದ ಗೃಹದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ.
ರೇಖಾ ಎಂಎಸ್ಸಿ ಪದವೀಧರೆಯಾಗಿದ್ದು, ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಭಾನುವಾರ ಸ್ನೇಹಿತೆಯ ವಿವಾಹ ನಿಶ್ಚಿತಾರ್ಥ ಮೂಡಿಗೆರೆ ತಾಲ್ಲೂಕಿನ ದೇವರಮನೆಯಲ್ಲಿ ನಿಗದಿಯಾಗಿತ್ತು. ಕಾರ್ಯಕ್ರಮಕ್ಕೆ ತೆರಳಲು ರಂಜಿತಾ ಮತ್ತು ರೇಖಾ ಬೆಂಗಳೂರಿನಿಂದ ಬಂದು ಶುಕ್ರವಾರ ಮೂಡಿಗೆರೆಯಲ್ಲಿಯೇ ಇದ್ದು ಸಂಜೆ ಸಮೀಪದ ಹಾಂದಿ ಗ್ರಾಮದ ಹೋಂ ಸ್ಟೇನಲ್ಲಿ ತಂಗಿದ್ದರು.
ಶುಕ್ರವಾರ ತಡರಾತ್ರಿವರೆಗೆ ರಂಜಿತಾ ಕಂಪ್ಯೂಟರ್‌ನಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ ನಿರ್ವಹಿಸಿದ್ದರು. ಶನಿವಾರ ಬೆಳಿಗ್ಗೆ ಸ್ನಾನಕ್ಕೆಂದು ತೆರಳಿದ್ದ ರಂಜಿತಾ ತುಂಬಾ ಸಮಯವಾದರೂ ಸ್ನಾನ ಗೃಹದಿಂದ ಹೊರಬರದಿದ್ದಾಗ ಸ್ನಾನಗೃಹ ಬಳಿ ಹೋಗಿ ನೋಡಿದ್ದಾರೆ. ನಲ್ಲಿಯಿಂದ ನೀರು ಬಕೆಟ್ ತುಂಬಿ ಹೋಗುತ್ತಿರುವ ಶಬ್ದ ಕೇಳುತ್ತಿದ್ದು, ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಕಿಟಕಿ ಮೂಲಕ ನೋಡಿದಾಗ ರಂಜಿತಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಮೂಡಿಗೆರೆ ಹೊಯ್ಸಳ ವಾಹನ ಮೂಲಕ ಆಸ್ಪತ್ರೆಗೆ ಕರೆತಂದಾಗ ಆ ವೇಳೆಗಾಗಲೇ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಆಲ್ದೂರು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರವಿ ಜಿ.ಎ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.