
ಪ್ರಜಾವಾಣಿ ವಾರ್ತೆ
ಮೂಡಿಗೆರೆ: ಇಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಆಡಳಿತ ಮಂಡಳಿಯ 8 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಗೆಲುವು ಸಾಧಿಸಿತು.
ಪಟ್ಟಣದ ರೈತಭವನದಲ್ಲಿ ನಡೆದ ಚುನಾವಣೆಯು ಕುತೂಹಲ ಮೂಡಿಸಿತ್ತು.
ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಎನ್‌ಡಿಎ ಮೈತ್ರಿಕೂಟ ರಚಿಸಿ ಕಣಕ್ಕಿಳಿದಿದ್ದರೆ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಕಾಂಗ್ರೆಸ್ ಜತೆ ಸೇರಿ ಟಿಎಪಿಸಿಎಂಎಸ್ ಅಭಿವೃದ್ಧಿ ವೇದಿಕೆ ಎಂಬ ಒಕ್ಕೂಟದೊಂದಿಗೆ ಕಣಕ್ಕಿಳಿದಿದ್ದರು.
ಎಂಟು ಸ್ಥಾನಗಳಲ್ಲಿ ಬಿಜೆಪಿಯ ಎನ್‌ಡಿಎ ಒಕ್ಕೂಟದ ಏಳು ಮಂದಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನೊಂದಿಗೆ ಕಣಕ್ಕಿಳಿದಿದ್ದ ಜೆಡಿಎಸ್ ಜಿಲ್ಲಾ ಘಟದಕ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಗೆಲುವು ಸಾಧಿಸಿದರು. 1,043 ಮತದಾರರಿರುವ ಟಿಎಪಿಸಿಎಂಎಸ್‌ನಲ್ಲಿ 1015 ಮಂದಿ ಹಕ್ಕು ಚಲಾಯಿಸಿದ್ದು, ಶೇ 97.31 ಮತದಾನವಾಗಿ ಭಾನುವಾರ ತಡರಾತ್ರಿ ಮತಎಣಿಕೆ ಮುಕ್ತಾಯವಾಯಿತು.
ಸಾಮಾನ್ಯ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ಪಿ.ಜಿ.ಅನುಕುಮಾರ್ ಪಟ್ಟದೂರು 658 ಮತ, ಸಾಮಾನ್ಯ ಕ್ಷೇತ್ರದಿಂದ ಟಿಎಪಿಸಿಎಂಎಸ್ ಅಭಿವೃದ್ಧಿ ವೇದಿಕೆ ಅಭ್ಯರ್ಥಿ ರಂಜನ್ ಅಜಿತ್ ಕುಮಾರ್ 572 ಮತ, ಬಿಸಿಎಂ ಬಿ.ಕ್ಷೇತ್ರದಿಂದ ಎಂ.ಕೆ.ಚಂದ್ರೇಶ್ ಮಗ್ಗಲಮಕ್ಕಿ 592 ಮತ, ಮಹಿಳಾ ಮೀಸಲು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ಬಿ.ಎಲ್.ವಿದ್ಯಾರಾಜು ಕನ್ನಾಪುರ 576 ಮತ ಹಾಗೂ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಕ್ಷೇತ್ರದಿಂದ ಪುಟ್ಟಮ್ಮ ಕುನ್ನಹಳ್ಳಿ 457 ಮತ, ಬಿಸಿಎಂ ಎ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ಟಿ.ಎ.ಶೇಖರ್ ಬಂಗೇರ ಜಕ್ಕಳಿ 477 ಮತ, ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ಕೆ.ಬಿ.ಗಣೇಶ್ ಕೆಸವೊಳಲು 504 ಮತ, ಎಸ್‌ಟಿ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿ ರಮೇಶ್ ಕುನ್ನಹಳ್ಳಿ 418 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.