ADVERTISEMENT

ತಪೋಬೆಟ್ಟದಲ್ಲಿ ಧಾರ್ಮಿಕ ಭಾವೈಕ್ಯ ಕೇಂದ್ರ

ಹಿಂದೂಗಳು ಸಿದ್ದಲಿಂಗೇಶ್ವರರ ಆರಾಧಿಸಿದರೆ, ಮುಸ್ಲಿಮರು ಬಾಬಾ ಬುಡನ್‌ಗೆ ಪ್ರಾರ್ಥನೆ

ಜೆ.ಒ.ಉಮೇಶ್ ಕುಮಾರ್
Published 10 ಜುಲೈ 2022, 6:44 IST
Last Updated 10 ಜುಲೈ 2022, 6:44 IST
ಬುಕ್ಕಾಂಬುಧಿಯ ಸಿದ್ದಲಿಂಗೇಶ್ವರ ತಪೋಬೆಟ್ಟ (ಎಡಚಿತ್ರ). ತಪಸ್ಸಿನಲ್ಲಿ ಕುಳಿತಿರುವ ಸ್ಥಿತಿಯಲ್ಲಿ ಲಿಂಗೈಕ್ಯ ಸಿದ್ದಲಿಂಗೇಶ್ವರ ಪ್ರತಿಮೆ
ಬುಕ್ಕಾಂಬುಧಿಯ ಸಿದ್ದಲಿಂಗೇಶ್ವರ ತಪೋಬೆಟ್ಟ (ಎಡಚಿತ್ರ). ತಪಸ್ಸಿನಲ್ಲಿ ಕುಳಿತಿರುವ ಸ್ಥಿತಿಯಲ್ಲಿ ಲಿಂಗೈಕ್ಯ ಸಿದ್ದಲಿಂಗೇಶ್ವರ ಪ್ರತಿಮೆ   

ಅಜ್ಜಂಪುರ: ತಾಲ್ಲೂಕಿನ ಬುಕ್ಕಾಂಬುಧಿ ಗ್ರಾಮದ ತಪೋ ಬೆಟ್ಟದ ಗುಹೆಯೊಂದರಲ್ಲಿ ಲಿಂಗೈಕ್ಯ ‘ಸಿದ್ದಲಿಂಗ ಶಿವಾಚಾರ್ಯರು’ ತಪಸ್ಸು ಮಾಡಿದ್ದಾರೆಂಬ ಪ್ರತೀತಿ ಇದೆ. ಇದೇ ಬೆಟ್ಟದ ಮತ್ತೊಂದು ಗುಹೆಯಲ್ಲಿ ‘ಬಾಬಾ ಬುಡನ್’ ಅವರು ಪ್ರಾರ್ಥನೆಯಲ್ಲಿ ತೊಡಗಿದ್ದರು ಎಂಬ ನಂಬಿಕೆಯಿದೆ. ಇದರಿಂದಾಗಿಶ್ರೀಕ್ಷೇತ್ರ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯದ ತಾಣವಾಗಿ ಮಾರ್ಪಟ್ಟಿದೆ.

ತಪೋಬೆಟ್ಟದಲ್ಲಿ ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯರ ಮೂರ್ತಿ ಶಿಲ್ಪವಿರುವ ದೇವಾಲಯ, ಮರುಳಸಿದ್ದೇಶ್ವರರ ಗದ್ದುಗೆ ಇದೆ. ನಿತ್ಯವೂ ಪೂಜೆ ನಡೆಯುತ್ತಿದೆ. ಪ್ರತೀ ಅಮಾವಾಸೆ ಮತ್ತು ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ಜರುಗುತ್ತದೆ. ಶ್ರಾವಣದಲ್ಲಿ ಏಳು ದಿನ ಪೂಜಾ ಕೈಂಕರ್ಯಗಳು ಸಾಗುತ್ತವೆ.

‘ಶ್ರಾವಣದಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿಯ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು ಭೇಟಿ ನೀಡುತ್ತಾರೆ. ವಿಶೇಷ ಪೂಜೆಯಲ್ಲಿ ತೊಡಗುತ್ತಾರೆ. ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಪ್ರಸಾದ ವಿನಿಯೋಗ ನಡೆಸುತ್ತೇವೆ’ ಎಂದು ಭಕ್ತ ವಿಕಾಸ್ ವಿವರಿಸುತ್ತಾರೆ.

ADVERTISEMENT

‘ಸಿದ್ದಲಿಂಗ ಶಿವಾಚಾರ್ಯರು ಶ್ರೇಷ್ಠರು. ಅವರು ಪಂಚ ಪೀಠಗಳು ಒಂದಾಗಬೇಕೆಂದು ಬಯಸಿದ್ದರು. ಈ ಆಶಯಕ್ಕಾಗಿಯೇ ತಪಸ್ಸು ಮಾಡಿದರು. ಜತೆಗೆ ಬುಕ್ಕಾಂಬುಧಿ (ಬುಕ್ಕರಾಯರ ಮಡದಿ ನೀಡಿದ್ದ ಶಾಪ) ಮೇಲಿನ ಶಾಪ ವಿಮೋಚನೆಗೂ ತಪೋನಿರತರಾಗಿದ್ದರು. ಅವರ ಪೂಜಾ ಫಲದಿಂದಾಗಿ ಬುಕ್ಕಾಂಬುಧಿ ಸುತ್ತಲಿನ ಹೊಲ-ತೋಟಗಳಲ್ಲಿ ಹಸಿರಿದೆ. ಜನರಲ್ಲಿ ನೆಮ್ಮದಿಯಿದೆ’ ಎನ್ನುತ್ತಾರೆ ಭಕ್ತ ಗುರುಮೂರ್ತಿ.

ಇದೇ ಬೆಟ್ಟದ ಮತ್ತೊಂದು ಗುಹೆಯೊಂದರಲ್ಲಿ ‘ಬಾಬಾ ಬುಡನ್’ ಅವರು ಪ್ರಾರ್ಥನೆಯಲ್ಲಿ ತೊಡಗಿದ್ದರು ಎಂಬ ನಂಬಿಕೆ ಮುಸ್ಲಿಮರಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರತೀ ಶುಕ್ರವಾರ, ಬಕ್ರೀದ್, ಈದ್ ಮಿಲಾದ್‌ನಂತಹ ವಿಶೇಷ ಸಂದರ್ಭದಲ್ಲಿ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

‘ಮೌಲಾನಾ ಬಾಬಾಬುಡನ್ ಅವರು ಪ್ರಾರ್ಥನೆ ಸಲ್ಲಿಸಿದ ಸ್ಥಳ ವಿಶೇಷವಾಗಿದೆ. ಕಷ್ಟ, ನೋವಿನಲ್ಲಿದ್ದವರ ಸಂಕಷ್ಟ ಪರಿಹರಿಸುವ ಶಕ್ತಿಯಿದೆ. ಎಲ್ಲರ ಒಳಿತಿಗಾಗಿ ವಿವಿಧ ಗ್ರಾಮಗಳ ಸಮಾಜದವರು ಒಟ್ಟಾಗಿ ವರ್ಷಕ್ಕೊಮ್ಮೆ ಉರುಸ್ನಡೆಸುತ್ತೇವೆ’ ಎಂದು ಬಿಲ್ಲಹಳ್ಳಿಯ ಮುಖಂಡ ಅಹಾದ್ ಉಲ್ಲಾ ಹೇಳುತ್ತಾರೆ.

ಹಿಂದೂಗಳು ಸಿದ್ದಲಿಂಗೇಶ್ವರರ ಆರಾಧಿಸಿದರೆ, ಮುಸ್ಲಿಮರು ಬಾಬಾ ಬುಡನ್ ಅವರನ್ನು ಪೂಜಿಸುತ್ತಾರೆ. ಈ ಹಿನ್ನೆಲೆ ಸುಂದರ ಪ್ರಕೃತಿ ರಮಣೀಯ ತಪೋಬೆಟ್ಟ ಹಿಂದೂ-ಮುಸ್ಲಿಮರ ಪವಿತ್ರ ಕ್ಷೇತ್ರವಾಗಿ ಮಾರ್ಪಟ್ಟಿದೆ. ಎರಡೂ ಧರ್ಮದವರ ನಡುವೆ ಸಹೋದರತೆ-ಸೌಹಾರ್ದ ಮೇಳೈಸಿದೆ. ಇಲ್ಲಿನ ಧಾರ್ಮಿಕ ಸಹಿಷ್ಣತೆಯು ವಿಶೇಷವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.