ತರೀಕೆರೆ: ‘ಪಟ್ಟಣದಲ್ಲಿ 2ನೇ ನಮ್ಮ ಕ್ಲಿನಿಕ್ ಆರಂಭವಾಗಿದೆ. ಇದರಿಂದ ಈ ಭಾಗದ ಜನರಿಗೆ ಸುಲಭವಾಗಿ ಆರೋಗ್ಯ ಸೌಲಭ್ಯಗಳು ಸಿಗುತ್ತಿವೆ’ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ವತಿಯಿಂದ ಪಟ್ಟಣದ ಎಂ.ಜಿ. ಹಾಲ್‌ನಲ್ಲಿ ನೂತನವಾಗಿ ಆರಂಭಿಸಿರುವ ನಮ್ಮ ಕ್ಲಿನಿಕ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಕ್ಲಿನಿಕ್‌ನಲ್ಲಿ ಒಬ್ಬರು ತಜ್ಞ ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪಟ್ಟಣದಲ್ಲಿ ಈಗಾಗಲೇ ₹28 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತಾಯಿ ಮಗು ಆಸ್ಪತ್ರೆಯ ಕಾಮಗಾರಿ ಶೇ 90 ರಷ್ಟು ಮುಗಿದಿದೆ. ಅತ್ಯಾಧುನಿಕ ಸೌಕರ್ಯಗಳು ದೊರಕಲಿವೆ’ ಎಂದರು.
ಜಿಲ್ಲಾ ಕಚೇರಿಯ ಯೋಜನಾ ನಿರ್ವಹಣಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, ‘ಜನರು ಸಣ್ಣ ಪುಟ್ಟ ಕಾಯಿಲೆಗಳ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ಹೋಗಿ ಸಾಕಷ್ಟು ಸಮಯ ಕಾಯುವ ಪರಿಸ್ಥಿತಿಯಿತ್ತು. ಅದನ್ನು ತಪ್ಪಿಸಲು ಆರೋಗ್ಯ ಇಲಾಖೆ ಈ ಕ್ರಮ ವಹಿಸಿದೆ’ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ, ‘ನಮ್ಮ ಕ್ಲಿನಿಕ್‌ನಲ್ಲಿ ಸಿಗುವ ಸೌಲಭ್ಯಗಳನ್ನು ಎಲ್ಲರೂ ಬಳಸಿಕೊಳ್ಳಬೇಕು’ ಎಂದರು.
ತಹಶೀಲ್ದಾರ್ ವಿಶ್ವಜಿತ್ ಮೆಹತಾ, ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ರಿಹಾನ ಪರ್ವಿನ್, ಶಮೀನಾಬಾನು, ಕುಮಾರ್, ಮುಖಂಡರಾದ ಫಸಲ್ ಅಹಮದ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.