ADVERTISEMENT

ಸರ್ಕಾರ ಆರ್ಥಿಕ ದಿವಾಳಿ: ಶಾಸಕ ಟಿ.ಡಿ.ರಾಜೇಗೌಡ

ಶಾಸಕ ಟಿ.ಡಿ.ರಾಜೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 7:59 IST
Last Updated 3 ಅಕ್ಟೋಬರ್ 2020, 7:59 IST
ಟಿ.ಡಿ.ರಾಜೇಗೌಡ
ಟಿ.ಡಿ.ರಾಜೇಗೌಡ   

ಕೊಪ್ಪ: ‘ಅಭಿವೃದ್ಧಿ ಕೆಲಸಕ್ಕೆ ಹಣ ನೀಡಲು ಸರ್ಕಾರದ ಬಳಿ ಹಣವಿಲ್ಲದೇ ಆರ್ಥಿಕ ದಿವಾಳಿಯಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಸರ್ಕಾರ ರಸ್ತೆ ಅಭಿವೃದ್ಧಿಗೆ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಶಾಸನ ಸಭೆಯಲ್ಲಿ ಇದನ್ನು ವಿರೋಧ ಪಕ್ಷದ ನಾಯಕರು ಪ್ರಸ್ತಾಪ ಮಾಡಿದ್ದರೂ ಅದಕ್ಕೆ ಉತ್ತರ ನೀಡದೇ ಶಾಸನ ಸಭೆಯನ್ನು ಮುಗಿಸಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲ’ ಎಂದು ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಇದೇ 5ರಂದು ಕಿಗ್ಗಾ ಹೋಬಳಿ, ಅದೇ ದಿನ 3 ಗಂಟೆಗೆ ಮೇಗುಂದ ಹೋಬಳಿ, 6ರಂದು ಬಿ.ಕಣಬೂರು ಹೋಬಳಿ, 7ರಂದು ಖಾಂಡ್ಯ ಹೋಬಳಿ ವ್ಯಾಪ್ತಿಗೆ ಸಂಬಂಧಿಸಿದ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಲಾಗುತ್ತದೆ. 12ರಂದು ಕೊಪ್ಪ, 14ರಂದು ಎನ್.ಆರ್.ಪುರ, 19ರಂದು ಶೃಂಗೇರಿ ತಾಲ್ಲೂಕು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ’ ಎಂದರು.

ADVERTISEMENT

‘ಈ ಹಿಂದೆ ವಜಾ ಮಾಡಿದ ಫಾರಂ 50, 53 ರ ಅಡಿಯಲ್ಲಿನ ಅನೇಕ ಅರ್ಜಿಗಳನ್ನು ಮರು ಪರಿಶೀಲನೆ ಮಾಡುವಂತೆ ಎ.ಸಿ ಅವರಲ್ಲಿ ಮನವಿ ಮಾಡಿದ್ದೇನೆ. 94ಸಿ, 94 ಸಿಸಿ ಅರ್ಜಿಗಳನ್ನು ಇನ್ನೆರಡು ತಿಂಗಳಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಸೊಪ್ಪಿನಬೆಟ್ಟ ಜಾಗಕ್ಕೆ ಹಕ್ಕುಪತ್ರ ನೀಡಲು ಅವಕಾಶ ಕಲ್ಪಿಸುವುದರ ಬಗ್ಗೆ ಕಂದಾಯ ಸಚಿವ ಅಶೋಕ್ ಅವರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಮಾಜಿ ಶಾಸಕ ಜೀವರಾಜ್ ಅವರಿಗೆ ಕೋವಿಡ್ ಸೋಂಕು ಇದ್ದು, ಅವರು ಶೀಘ್ರವೇ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

ಎಐಸಿಸಿ ಕಾರ್ಯದರ್ಶಿ ಸಂದೀಪ್ ಮಾತನಾಡಿ, ‘ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ವಿಫಲವಾಗಿದೆ. ಯೋಗಿ ಆದಿತ್ಯನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ, ಎನ್‌ಎಸ್‌ಯುಐ ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀಜಿತ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಅನ್ನಪೂರ್ಣ ನರೇಶ್, ನಿಸಾರ್, ಸತೀಶ್ ನಾಯ್ಕ್, ಈವನ್, ಜಿತೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.