ADVERTISEMENT

ಕೊಪ್ಪ | ಯುವಪೀಳಿಗೆಯ ಭವಿಷ್ಯ ಶಿಕ್ಷಕರ ಕೈಯಲ್ಲಿದೆ: ಶಾಸಕ ರಾಜೇಗೌಡ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 3:00 IST
Last Updated 6 ಸೆಪ್ಟೆಂಬರ್ 2025, 3:00 IST
ಕೊಪ್ಪ ಪುರಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಚ್.ಆರ್.ರೇಖಾ ಉದ್ಘಾಟಿಸಿದರು
ಕೊಪ್ಪ ಪುರಭವನದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಚ್.ಆರ್.ರೇಖಾ ಉದ್ಘಾಟಿಸಿದರು   

ಕೊಪ್ಪ: ‘ಯುವಪೀಳಿಗೆಯ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ದೀಪ ಇದ್ದಂತೆ, ಹಿಂದಿನಂತೆ ಇಂದು ಮಕ್ಕಳಿಗೆ ಶಿಕ್ಷಣ ನೀಡುವುದು ಕಷ್ಟವಿಲ್ಲ, ನೈತಿಕತೆಯ ಶಿಕ್ಷಣ ನೀಡಬೇಕಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಪುರಭವನದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿ, ‘ಸರ್ಕಾರದ ಐದು ಗ್ಯಾರಂಟಿಗಳಿಂದ ಸಂಕಷ್ಟ ದೂರವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ತೆರೆಯಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ 500ಕ್ಕೂ ಹೆಚ್ಚು ಕೆಪಿಎಸ್ ಶಾಲೆಗಳನ್ನು ತೆರೆಯುವುದರ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ’ ಎಂದರು.

ಉಪನ್ಯಾಸ ನೀಡಿದ ಕಳಸಾಪುರ ಪದವಿ ಕಾಲೇಜಿನ ಪ್ರಾಚಾರ್ಯ ಎಚ್.ಎಂ.ನಾಗರಾಜ್ ರಾವ್ ಕಲ್ಕಟ್ಟೆ, ‘ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳುವ ಜತೆಗೆ ಉತ್ತಮ ಸಮಾಜ ನಿರ್ಮಾಣವಾಗುವ ನಿಟ್ಟಿನಲ್ಲಿ ಶಿಕ್ಷಕರು ನೈತಿಕ ಶಿಕ್ಷಣ ನೀಡಬೇಕು. ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜಕ್ಕೆ ಕೊಡುಗೆ ನೀಡುವುದು ಶಿಕ್ಷಕರ ಜವಾಬ್ದಾರಿ. ಶಿಕ್ಷಕರು ಮಕ್ಕಳ ಜತೆಯಲ್ಲಿ ಮಕ್ಕಳಾಗಿ ಬೆರೆತು ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾ ಶಕ್ತಿಗಳನ್ನು ಬಳಸಿ ಶಿಕ್ಷಣ ನೀಡಿದ್ದಲ್ಲಿ ಮಕ್ಕಳು ಗುಣಾತ್ಮಕವಾಗಿ ರೂಪುಗೊಳ್ಳುತ್ತಾರೆ’ ಎಂದರು.

ADVERTISEMENT

‘ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡಬಾರದು. ಇತ್ತೀಚಿನ ದಿನದಲ್ಲಿ ಶಿಕ್ಷಣ ಕ್ಷೇತ್ರ ಮಾಫಿಯಾ ಆಗಿದೆ. ಲಾಭದ ದೃಷ್ಟಿಯಿಂದ ಮಾತ್ರ ಕೆಲಸ ನಿರ್ವಹಣೆ ಮಾಡುತ್ತಿದೆ. ಶಿಕ್ಷಕರು ಸಹ ಸಂಬಳಕ್ಕಾಗಿ ಮಾತ್ರ ದುಡಿಯುತ್ತಿದ್ದಾರೆ ಎಂಬಂತಾಗಿದೆ ಇದರಿಂದ ಅಪಾಯ ಹೆಚ್ಚು’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಚ್.ಆರ್.ರೇಖಾ ಮಾತನಾಡಿ, ‘ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುವುದರ ಜತೆಗೆ ಶಿಕ್ಷಣದ ಬಗ್ಗೆ ಅತ್ಯಂತ ನಿಷ್ಠೆ ಮತ್ತು ಪ್ರೀತಿ ಹೊಂದಿದ್ದರು. ದೇಶದಲ್ಲಿ ಶ್ರೇಷ್ಠ ಶಿಕ್ಷಕರಾಗಿ ಗುರುತಿಸಿಕೊಂಡಿದ್ದರು’ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ಸದಸ್ಯೆ ಮೈತ್ರಿ, ಕೆಡಿಪಿ ಸದಸ್ಯರಾದ ಆಶೋಕ್ ನಾರ್ವೆ, ಚಿಂತನ್ ಬೆಳಗೊಳ, ರಾಜಾಶಂಕರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ, ಇಲಾಖೆಯ ಶೇಖರಪ್ಪ, ಆದರ್ಶ, ನರಸಿಂಹ, ಗಜೇಂದ್ರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.