ADVERTISEMENT

ಚಿಕ್ಕಮಗಳೂರು | ನ್ಯಾಯಾಲಯ ಸಂಕೀರ್ಣದಲ್ಲಿ ದೇವಾಲಯ: ತೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:41 IST
Last Updated 20 ಜನವರಿ 2026, 2:41 IST
ದಂಟರಮಕ್ಕಿ ಶ್ರೀನಿವಾಸ್
ದಂಟರಮಕ್ಕಿ ಶ್ರೀನಿವಾಸ್   

ಚಿಕ್ಕಮಗಳೂರು: ಜಿಲ್ಲಾ ನ್ಯಾಯಾಲಯದ ಹೊಸ ಸಂಕೀರ್ಣದಲ್ಲಿ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.

ನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಆದರೆ, ನ್ಯಾಯಾಲಯದ ಕಟ್ಟಡದ ಎದುರು ನಿರ್ಮಿಸುತ್ತಿರುವ ಗಣಪತಿ ದೇವಾಲಯದ ಬಗ್ಗೆ ಸಾರ್ವಜನಿಕರ ಆಕ್ಷೇಪವಾಗಿದೆ. ಇದು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಗಮನಕ್ಕೆ ಬಂದಿದ್ದು, ನ್ಯಾಯಾಲಯದ ಮುಂದೆ ಏಕ ಧರ್ಮ ಹೇರಿಕೆಯಾಗುತ್ತಿದೆ. ಇದನ್ನು ದಲಿತ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸರ್ವಧರ್ಮ ಸಮಾನತೆ, ಸರ್ವ ಜಾತಿಗಳಿಗೂ ಸಂವಿಧಾನಾತ್ಮಕ ಸಮಾನತೆ ಪ್ರತಿಪಾದಿಸುವ ಘನ ನ್ಯಾಯಾಲಯದ ಮುಂದೆ ಒಂದು ಧರ್ಮದ, ಒಂದು ಜಾತಿಯ, ಒಂದು ಆಚರಣೆಯ ಧಾರ್ಮಿಕ ಭಾವನೆ ಹೇರಿಕೆ ಮಾಡುವುದು ಸರಿಯಲ್ಲ.  ಬೇರೆ ಧರ್ಮದವರ ಭಾವನೆಗಳಿಗೆ ಧಕ್ಕೆ ತರುವ ಅಂಶವಾಗಿದೆ. ನಮ್ಮ ದೇಶ ಬಹುಧರ್ಮ, ಬಹುಭಾಷೆ, ಬಹು ಸಂಸ್ಕೃತಿಯ ಅಡಿಪಾಯದ ಮೇಲೆ ನಿಂತಿದೆ’ ಎಂದರು.

ADVERTISEMENT

‘ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆ ಆಗದ ರೀತಿ ಸರ್ವ ಧರ್ಮ ಸಮಾನತೆ ಬಯಸಿದ ಬುದ್ಧ, ಬಸವ, ಕನಕದಾಸ, ನಾರಾಯಣಗುರು, ಪೆರಿಯಾರ್, ಗಾಂಧೀಜಿ, ಅಂಬೇಡ್ಕರ್‌ ಅವರಂತಹ ಮಹನೀಯರ ಪ್ರತಿಮೆಗಳನ್ನು ಪ್ರತಿಸ್ಥಾಪಿಸಲಿ’ ಎಂದು ಹೇಳಿದರು.

ದೇವಾಲಯದ ಕಟ್ಟಡದ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ನಿರ್ಮಾಣ ಮಾಡಿರುವ ಕಟ್ಟಡ ತೆರವುಗೊಳಿಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಒಂದು ವೇಳೆ ದೇವಾಲಯದ ಕಟ್ಟಡ ತೆರೆವುಗೊಳಿಸದಿದ್ದರೆ ಒಕ್ಕೂಟದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಭೀಮಯ್ಯ, ಎಸ್‌ಡಿಪಿಐ ರಾಜ್ಯ ಸಂಘಟನ ಕಾರ್ಯದರ್ಶಿ ಅಂಗಡಿ ಚಂದ್ರು, ಕೃಷ್ಣಮೂರ್ತಿ, ಅರುಣ್, ರಾಕೇಶ್, ಹೇಮಂತ್, ಗಣೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.