ನರಸಿಂಹರಾಜಪುರ ಪಟ್ಟಣದ ಹಳೆ ಪೇಟೆಯಲ್ಲಿ ನಿರ್ಮಿಸಿರುವ ಮೀನು ಮಾರುಕಟ್ಟೆ ಕಟ್ಟಡ
ನರಸಿಂಹರಾಜಪುರ: ಪಟ್ಟಣದ ಹಳೆ ಸಂತೆ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಮೀನುಮಾರುಕಟ್ಟೆ ಉದ್ಘಾಟನೆಗೊಂಡ ಒಂದೇ ವರ್ಷದಲ್ಲಿ ಸೋರುತ್ತಿದ್ದು, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಪಟ್ಟಣದ ಹಳೆ ಸಂತೆ ಮಾರುಕಟ್ಟೆ ಜಾಗದಲ್ಲಿ ನಬಾರ್ಡ್‌ನ ಆರ್‌ಐಡಿಎಫ್, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ (ಎನ್ಎಫ್‌ಡಿಬಿ) ಹೈದರಾ ಬಾದ್ ಮತ್ತು ಮೀನುಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ನಿರ್ಮಾಣವಾದ ಮೀನು ಮಾರುಕಟ್ಟೆ 2023ರ ಮಾರ್ಚ್‌ನಲ್ಲಿ ಉದ್ಘಾಟನೆಗೊಂಡಿತ್ತು.
ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನು ವ್ಯಾಪಾರಸ್ಥರಿಗೆ, ರಖಂ ಮೀನು ವ್ಯಾಪಾರಸ್ಥರಿಗೆ ಹಾಗೂ ಒಣಮೀನು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಕೊಠಡಿ ನಿರ್ಮಿಸಲಾಗಿದೆ. ಪ್ರತಿ ಮೀನು ಮಾರಾಟಗಾರರಿಗೂ ಎತ್ತರಿಸಿದ ಪ್ಲಾಟ್‌ಫಾರ್ಮ್, ಶೌಚಾಲಯ ನಿರ್ಮಿಸಲಾಗಿದೆ.
ಕಟ್ಟಡ ಮಳೆಗಾಲದಲ್ಲಿ ಸಂಪೂರ್ಣ ಸೋರುತ್ತಿದೆ. ಮಳೆ ಬಂದಾಗ ಮೀನು ಮಾರಾಟಗಾರರು ಮತ್ತು ಗ್ರಾಹಕರು ಛತ್ರಿ ಹಿಡಿದು ನಿಲ್ಲುವ ಸ್ಥಿತಿಯಿದೆ. ಗೋಡೆಗಳ ಬದಿಯಲ್ಲಿ ಮಳೆ ನೀರು ಜಿನುಗಿ ಗೋಡೆಗಳು ಒದ್ದೆಯಾಗಿವೆ. ಮಳೆ ನೀರು ಸೋರಿಯಾಗುತ್ತಿರುವುದರಿಂದ ಕೊಠಡಿಯ ಒಳಗೆ ಅಳವಡಿಸಿರುವ ವಿದ್ಯುತ್ ದೀಪಗಳಲ್ಲೂ ನೀರು ತುಂಬಿದೆ. ಮೀನು ತ್ಯಾಜ್ಯ ಹೋರ ಹೋಗಲು ನಿರ್ಮಿಸಿರುವ ಚರಂಡಿ ಕಟ್ಟಿಕೊಂಡು ತ್ಯಾಜ್ಯ ತುಂಬಿಕೊಂಡು ಮಾರುಕಟ್ಟೆಯ ಒಳಗೆ ಗಬ್ಬು ನಾರುತ್ತಿದೆ.
ದುರಸ್ತಿ ಮಾಡಿಸುವಂತೆ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಮತ್ತು ಮುಖ್ಯಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು ಪ್ರಯೋಜನವಾಗಿಲ್ಲ. ಗೋಡೆಗಳ ಮೇಲೆ ನೀರು ಜಿನುಗುತ್ತಿರುವುದರಿಂದ ವಿದ್ಯುತ್ ಗೋಡೆಗಳಲ್ಲಿ ಪ್ರವಹಿಸುವ ಸಾಧ್ಯತೆಯಿದೆ. ಸೋರುವಿಕೆ ತಡೆಗಟ್ಟಿದರೆ ಅನುಕೂಲವಾಗುತ್ತದೆ ಎಂದು ಮೀನುಮಾರಾಟಗಾರ ಫೈರೋಜ್ ಸಮಸ್ಯೆ ವಿವರಿಸಿದರು.
ಪಟ್ಟಣದ ವ್ಯಾಪ್ತಿಯ ಮೀನುಮಾರುಕಟ್ಟೆ ಸೋರಿಕೆಯಾ ಗುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಮಲೆನಾಡಿನ ಭಾಗಕ್ಕೆ ಆರ್‌ಸಿಸಿ ಕಟ್ಟಡಗಳು ಸೂಕ್ತವಾಗುವುದಿಲ್ಲ. ಕಟ್ಟಡದ ಮೇಲ್ಭಾಗದಲ್ಲಿ ಶೀಟ್ ಅಳವಡಿಕೆಗೆ ಹಾಗೂ ಇತರ ಕಾಮಗಾರಿಗಳಿಗೆ ₹20 ಲಕ್ಷ ಅನುದಾನ ನೀಡುವಂತೆ ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಅನುದಾನ ಬಿಡುಗಡೆಯಾದ ಕೂಡಲೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಮೀನು ಮಾರುಕಟ್ಟೆ ದುರಸ್ತಿಗೆ ನಗರೋತ್ಥಾನದಲ್ಲಿ ಅನುದಾನ ಮೀಸಲಿಡಲಾಗಿದೆ. ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ಅಲ್ಲದೆ, ಈ ಮೀನು ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.