ADVERTISEMENT

ಸ್ಪೈಸ್ ಪಾರ್ಕ್ ನಿರ್ಮಾಣ ಜಾಗ ಬೆಟ್ಟದಮನೆಗೆ ಸೇರಿದ್ದು

ಕಿರುಗುಂದ ಗ್ರಾಪಂ ಅಧ್ಯಕ್ಷೆ ಸ್ವಾತೀಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:57 IST
Last Updated 25 ನವೆಂಬರ್ 2025, 3:57 IST
ಸ್ವಾತಿಶ್ರೀ
ಸ್ವಾತಿಶ್ರೀ   

ಮೂಡಿಗೆರೆ: ಸಾಂಬಾರ್‌ ಅಭಿವೃದ್ಧಿ ಮಂಡಳಿಯಿಂದ ₹30 ಕೋಟಿ ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಪೈಸ್ ಪಾರ್ಕ್ ಜಾಗವು ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಮನೆ ಗ್ರಾಮಕ್ಕೆ ಸೇರಿದೆ’ ಎಂದು ಕಿರುಗುಂದ ಗ್ರಾಪಂ ಅಧ್ಯಕ್ಷೆ ಸ್ವಾತೀಶ್ರೀ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬೆಟ್ಟದಮನೆ ಗ್ರಾಮದ
ಜಾಗವನ್ನು ಅಣಜೂರು ಗ್ರಾಮಕ್ಕೆ ಸೇರಿದೆಂದು ಸಾಂಬಾರ್‌ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಪ್ಪು ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ. ಅಧಿಕಾರಿಗಳು ಸರಿಯಾದ ಮಾಹಿತಿ ತಿಳಿದು ಹೇಳಿಕೆ ನೀಡಬೇಕು‌. ಬೆಟ್ಟದಮನೆ ಗ್ರಾಮದ ಹೇಮಾವತಿ ಸೇತುವೆ ಬಳಿ ಸ.ನಂ.114ರಲ್ಲಿ ರೇಷ್ಮೆ ಮಂಡಳಿಗೆ ಸೇರಿದ 10 ಎಕರೆ ಜಾಗವಿದೆ. ಆ ಜಾಗವನ್ನು ಸರ್ಕಾರ ರೇಷ್ಮೆ ಮಂಡಳಿಯಿಂದ ತೋಟಗಾರಿಕಾ ಇಲಾಖೆಗೆ ಹಸ್ತಾಂತರಿಸಿ ಸಾಂಬಾರ್‌ ಅಭಿವೃದ್ಧಿ ಮಂಡಳಿಗೆ ನೀಡಿದೆ. ₹30 ಕೋಟಿ ವೆಚ್ಚದಲ್ಲಿ ಸ್ಪೈಸ್ ಪಾರ್ಕ್ ನಿರ್ಮಿಸಲು ನೀಲಿ ನಕ್ಷೆ ತಯಾರಿಸಿದ್ದಾರೆ. ಅಣಜೂರು ಗ್ರಾಮವು ಚಿನ್ನಿಗ ಗ್ರಾ.ಪಂ ವ್ಯಾಪ್ತಿಗೆ ಸೇರುತ್ತದೆ. ಬೆಟ್ಟದಮನೆ ಗ್ರಾಮದ ಉದ್ದೇಶಿತ ಸ್ಪೈಸ್ ಪಾರ್ಕ್ ಜಾಗಕ್ಕೂ ಅಣಜೂರು ಗ್ರಾಮಕ್ಕೂ ಸಂಬಂಧವಿಲ್ಲ. ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಮನೆ ಹೇಮಾವತಿ ನದಿ ಸೇತುವೆ ಕಳೆದ ಕೂಡಲೆ ಮುಕ್ತಾಯಗೊಳ್ಳುತ್ತದೆ. ನಂತರ ಗೋಣಿಬೀಡು ಗ್ರಾಪಂ ವ್ಯಾಪ್ತಿಯ ಜಿ. ಅಗ್ರಹಾರ ಗ್ರಾಮದ ಅಬ್ದಾರೆ ಎಂಬ ಉಪಗ್ರಾಮ ಆರಂಭವಾಗುತ್ತದೆ. ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಕಿರುಗುಂದ ಗ್ರಾ.ಪಂ ಮಾಜಿ ಅಧ್ಯಕ್ಷ ಯು.ಎಚ್.ರಾಜಶೇಖರ್ ಮಾತನಾಡಿ, ‘ಬೆಟ್ಟದಮನೆ ಗ್ರಾಮದಲ್ಲಿ ರೇಷ್ಮೆ ಮಂಡಳಿಗೆ ಸೇರಿದ 10 ಎಕರೆ ಜಾಗದಲ್ಲಿ ಸ್ಪೈಸ್ ಪಾರ್ಕ್ ನಿರ್ಮಿಸಿದರೆ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಸಾಂಬಾರ ಪದಾರ್ಥ ಬೆಳೆಗಾರರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಏಲಕ್ಕಿ, ಕಾಳುಮೆಣಸು, ಲವಂಗ, ಅರಿಶಿನ, ಮೆಣಸಿನಕಾಯಿ, ಶುಂಠಿ, ಜಾಯಿಕಾಯಿ ಸೇರಿ 26 ಬೆಳೆಗಳು ಉದ್ದೇಶಿತ ಸ್ಪೈಸ್ ಪಾರ್ಕ್‌ನಲ್ಲಿ ಹರಾಜು ಪ್ರಕ್ರಿಯೆ ನಡೆದು ದೈನಂದಿನ ಮಾರುಕಟ್ಟೆ ಧಾರಣೆ ನಿಗದಿ ಆಗಲಿದೆ. ವಾಣಿಜ್ಯ ಬೆಳೆಗಳ ಸಂಸ್ಕರಣೆ ಕೂಡ ನಡೆಯಲಿದೆ. ಲವಂಗ, ಅರಿಶಿನ, ಮೆಣಸಿನಕಾಯಿ, ಜಾಯಿಕಾಯಿ ಬೆಳೆಯಲು ಸ್ಪೈಸ್ ಪಾರ್ಕ್‌ನಿಂದ ರೈತರಿಗೆ ಉತ್ತೇಜನ ಸಿಕ್ಕಂತಾಗುತ್ತದೆ. ಈ ಉದ್ದೇಶಕ್ಕಾಗಿ ಈಗ ಗುರುತಿಸಿರುವ 10 ಎಕರೆ ಜಾಗವು ಬೆಟ್ಟದಮನೆ ಗ್ರಾಮದಲ್ಲಿದೆ ಎಂಬುದನ್ನು ಮಂಡಳಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ತಪ್ಪು ಮಾಹಿತಿ ನೀಡಿದರೆ ಜನರಲ್ಲಿ ಗೊಂದಲ ಉಂಟಾಗುತ್ತದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.