ಚಿಕ್ಕಮಗಳೂರು: ಕಾಫಿ ಬೆಳೆಗಾರರು ಸರ್ಫೇಸಿ ಕಾಯ್ದೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯ ಮಟ್ಟದ ಬೆಳೆಗಾರರ ಸಂಘಟನೆಗಳು ಮತ್ತು ಬೆಳೆಗಾರರ ಅಭಿಪ್ರಾಯ ಸಂಗ್ರಹಿಸಿ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಕಾಫಿಯನ್ನು ವಾಣಿಜ್ಯೋದ್ಯಮದಿಂದ ಕೃಷಿ ವ್ಯಾಪ್ತಿಗೆ ತರಲು ಚಿಂತನೆ ನಡೆಸಲಾಗುವುದು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ತಿಳಿಸಿದರು.
ನಗರದ ಕಾಫಿ ಮಂಡಳಿಯಲ್ಲಿ ನಡೆದ ಬೆಳೆಗಾರರು ಮತ್ತು ರೈತ ಸಂಘಟನೆಯ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ‘2047ರ ವೇಳೆ ಕಾಫಿ ಉದ್ಯಮದಲ್ಲಿ ಬದಲಾವಣೆ ತರಲು 17 ಅಂಶದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕಾರ್ಮಿಕರ ಅಭಾವ ಜತೆಗೆ ಬೆಳೆಗಾರರು ಎದುರುಸುತ್ತಿರುವ ಸವಾಲುಗಳ ಕುರಿತು ಚಿಂತನೆ ಮಾಡಿ ಪೂರಕ ಯೋಜನೆಗಳನ್ನು ಹಂತ–ಹಂತವಾಗಿ ಕಾರ್ಯಗತಗೊಳಿಸಲಾಗುವುದು’ ಎಂದರು.
ಭಾರತದಲ್ಲಿ 3.5 ಲಕ್ಷ ಟನ್ ಕಾಫಿ ಉತ್ಪಾದನೆ ಮಾಡಲಾಗುತ್ತಿದೆ. 2047ರ ವೇಳೆಗೆ 9ಲಕ್ಷ ಮೆಟ್ರಿಕ್ ಟನ್ ತಲುಪಿಸುವ ಗುರಿ ಹೊಂದಲಾಗಿದೆ. ಕಾಫಿ ಉದ್ಯಮವನ್ನು ಸಂಕಷ್ಟದಿಂದ ಪಾರು ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಕಾಫಿ ಮಂಡಳಿ ಉಪನಿರ್ದೇಶಕ ವೆಂಕಟರೆಡ್ಡಿ ಮಾತನಾಡಿ, ‘ಕಾಫಿ ಬೆಳೆಗಾರರಿಗೆ ಹಲವು ಸಹಾಯಧನ ಸೌಲಭ್ಯಗಳು ಸಿಗಲಿವೆ. ಈ ವರ್ಷದ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಅನುಮೋದನೆ ದೊರೆಯಲಿದೆ’ ಎಂದರು.
ಸಭೆಯಲ್ಲಿ ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಕೆರೆಮಕ್ಕಿ ಮಹೇಶ್, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಮಹೇಶ್ ಶಶಿಧರ್, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್, ವಸ್ತಾರೆ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ. ಮಲ್ಲೇಶ್, ಕಾರ್ಯದರ್ಶಿ ರತೀಶ್, ಆಲ್ದೂರು ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಸ್.ಸುರೇಶ್, ಮಹೇಂದ್ರ, ರೈತ ಸಂಘದ ದಯಾಕರ್, ಜಯಣ್ಣ, ತೌಫಿಕ್ ಅಹಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.