ADVERTISEMENT

ಶೌಚಾಲಯ ಸಮಸ್ಯೆ; ಕಾಯಂ ಬೋಧಕರ ಕೊರತೆ

ಕಡೂರು, ಬೀರೂರು, ಅಜ್ಜಂಫುರ ಸರ್ಕಾರಿ ಪ್ರಥಮದರ್ಜೆ ಕಾಲೇಜು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 7:30 IST
Last Updated 7 ನವೆಂಬರ್ 2022, 7:30 IST
ಕಡೂರಿನ ಕಾಲೇಜಿನ ಶೌಚಾಲಯದಲ್ಲಿ ಬಾಗಿಲು ಇಲ್ಲ.
ಕಡೂರಿನ ಕಾಲೇಜಿನ ಶೌಚಾಲಯದಲ್ಲಿ ಬಾಗಿಲು ಇಲ್ಲ.   

ಕಡೂರು, ಬೀರೂರು, ಅಜ್ಜಂಪುರ: ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಕಟ್ಟಡದಲ್ಲಿ ಎರಡು ಹಂತಸ್ತುಗಳು ಇವೆ. ತರಗತಿ ಕೊಠಡಿಗಳು ಇವೆ. ವಿದ್ಯಾರ್ಥಿನಿಯರ ಶೌಚಾಲಯ ಮೇಲಂತಸ್ತಿನಲ್ಲಿನ ತರಗತಿಗಳ ಕೊಠಡಿ ಪಕ್ಕದಲ್ಲಿ ಇದೆ. ಕಾಲೇಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ, ಅವರಿಗಾಗಿ ಇರುವೊಂದೇ ಶೌಚಾಲಯ.

ಶೌಚಾಲಯ ನಿರ್ವಹಣೆ ಕೊರತೆ ಇದೆ. ಶುಚಿತ್ವ ಕಾಪಾಡಿಲ್ಲ. ಶೌಚಾಲಯ ಪಕ್ಕದ ತರಗತಿ ಕೊಠಡಿಗಳಿಗೆ ಬೀರುತ್ತದೆ.

ADVERTISEMENT

‘ಒಂದೇ ಶೌಚಾಲಯ ಇದೆ. ನಿರ್ವಹಣೆ ಕೊರತೆ ಇದೆ. ಶೌಚಾಲಯ ಸಮಸ್ಯೆಯಿಂದ ತೊಂದರೆಯಾಗಿದೆ. ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಯಾರೂ ಗಮನ ಹರಿಸುತ್ತಿಲ್ಲ’ ಎಂದು ಪದವಿ ತೃತೀಯ ವರ್ಷದ ವಿದ್ಯಾರ್ಥಿನಿಯೊಬ್ಬರು ಅಸಹನೆ ವ್ಯಕ್ತಪಡಿಸಿದರು.

ಮಳೆಗಾಲದಲ್ಲಿ ಕಾಲೇಜು ಆವರಣದಲ್ಲಿ ಜಮಾಯಿಸುವ ನೀರು

ಅಜ್ಜಂಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಬಿಎಂ, ಬಿಕಾಂ, ಬಿಎಸ್ ಡಬ್ಲ್ಯೂ ಕೋರ್ಸ್‌ಗಳಿದ್ದು, 500 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಮಳೆಗಾಲದಲ್ಲಿ ರಸ್ತೆಯ ನೀರು ಕಾಲೇಜು ಆವರಣ ಭಾಗದಲ್ಲಿ ಜಮಾಯಿಸುತ್ತದೆ. ನೀರು ಹರಿಯಲು ಅಗತ್ಯವಿರುವ ಚರಂಡಿ ವ್ಯವಸ್ಥೆ, ಕ್ಯಾಂಟೀನ್, ಸಭಾಂಗಣ, ಸೋಲಾರ್ ಸೌಕರ್ಯ ಕಲ್ಪಿಸಬೇಕು, ಕಾಲೇಜು ಮುಂಭಾಗದಲ್ಲಿ ಹಾದುಹೋಗಿರುವ ಹೆದ್ದಾರಿ ಪಕ್ಕದಲ್ಲಿ ವೇಗ ಮಿತಿ ಅಳವಡಿಸಬೇಕು ಎಂಬ ಬೇಡಿಕೆಗಳು ಇವೆ.

ಮೂಲಸೌಕರ್ಯಗಳ ಕೊರತೆ

ಬೀರೂರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊರತೆಗಳ ನಡುವೆ ನಡೆಯುತ್ತಿದೆ. ಒಳಾಂಗಣ ಕ್ರೀಡಾಂಗಣ, ಶುದ್ಧ ಕುಡಿಯುವ ನೀರು ಘಟಕ, ಕಾಯಂ ಬೋಧಕರ ಕೊರತೆಗಳು ಇವೆ.

ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ. ಸಮೀಪದಲ್ಲಿಯೇ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗಳು ಇರುವುದರಿಂದ ಸ್ವಲ್ಪ ಕಿರಿಕಿರಿ ವಾತಾವರಣ ಇದೆ. ಕಾಲೇಜು ಕಟ್ಟಡಕ್ಕೆ ಕಾಂಪೌಂಡ್‌ ನಿರ್ಮಿಸಿ ಹದ್ದುಬಸ್ತು ಮಾಡಬೇಕು ಎಂಬ ಬೇಡಿಕೆ ಹಾಗೆಯೇ ಉಳಿದಿದೆ.

ಪುರಸಭೆ ವತಿಯಿಂದ ಕಾಲೇಜಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಸಂಗ್ರಹಿಸಿ, ಸಂಸ್ಕರಿಸಿ ಬಳಸಲು ಶುದ್ಧ ಕುಡಿಯುವ ನೀರಿನ ಘಟಕ(ಆರ್‌ಒ) ಇಲ್ಲ. ಹೀಗಾಗಿ ವಿದ್ಯಾರ್ಥಿಗಳು, ಬೋಧಕರು, ಸಿಬ್ಬಂದಿ ಮನೆಯಿಂದ ನೀರು ತರಬೇಕಾದ ಸ್ಥಿತಿ ಇದೆ.

ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಒಳಾಂಗಣ ಕ್ರೀಡಾಂಗಣ ಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆ.

ಬಿಬಿಎ ಕೋರ್ಸ್‌ ವಿದ್ಯಾರ್ಥಿಗಳ ಕೊರತೆಯಿಂದ ಸ್ಥಗಿತವಾಗಿದೆ. ಬಿ.ಎ, ಬಿ.ಕಾಂ, ಬಿ.ಎಸ್‌ಸಿಯಲ್ಲಿ ಸುಮಾರು 300 ವಿದ್ಯಾರ್ಥಿಗಳು ಇದ್ದಾರೆ. ವಾಣಿಜ್ಯ ಕೋರ್ಸ್‌ ಬೇಡಿಕೆ ಜಾಸ್ತಿ ಇದೆ.

ಪ್ರಾಚಾರ್ಯರು ನಿವೃತ್ತರಾಗಿದ್ದು ಸದ್ಯ ಪ್ರಭಾರಿಯಾಗಿ ನಿರ್ವಹಿಸಲಾಗುತ್ತಿದೆ. ರಸಾಯನ ವಿಜ್ಞಾನ, ಗಣಿತ ವಿಷಯ ಬೋಧಿಸುವ ಕಾಯಂ ಬೋಧಕರು ಇಲ್ಲ. ಅತಿಥಿ ಬೋಧಕರೇ ವಿಜ್ಞಾನ ವಿದ್ಯಾರ್ಥಿಗಳ ಪಾಲಿನ ಆಸರೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.