ಮೂಡಿಗೆರೆ: ತಾಲ್ಲೂಕಿನಿಂದ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ಸೋಮವಾರ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 3ನೇ ತಿರುವಿನ ಬಳಿ ಮರ ಬಿದ್ದು ಎರಡೂ ಕಡೆಯ ಸಂಪರ್ಕ ಕೆಲಕಾಲ ಕಡಿತವಾಗಿತ್ತು. ಬಸ್ ಸೇರಿದಂತೆ ಯಾವುದೇ ವಾಹನಗಳು ಮೂಡಿಗೆರೆಯತ್ತ ಬರಲು ಸಾಧ್ಯವಾಗದೇ ಇದ್ದಿದ್ದರಿಂದ ಚಿಕ್ಕಮಗಳೂರು ಭಾಗಕ್ಕೆ ತೆರಳುವ ಪ್ರಯಾಣಿಕರು ಪರದಾಡುವಂತಾಗಿತ್ತು. ಕೆಲವು ಬಸ್‌ಗಳನ್ನು ಕೊಟ್ಟಿಗೆಹಾರ ನಿಲ್ದಾಣದಲ್ಲಿಯೇ ಸಂಚಾರ ಪ್ರಾರಂಭವಾಗುವವರೆಗೂ ನಿಲ್ಲಿಸಲಾಗಿತ್ತು.
ಸಂಚಾರ ಸ್ಥಗಿತವಾಗಿದ್ದರಿಂದ ಘಾಟಿಯಲ್ಲಿ ಸುಮಾರು 3 ಕಿ.ಮೀ.ನಷ್ಟು ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಮರವನ್ನು ತೆರವುಗೊಳಿಸಿದರು. ಘಟನೆ ವೇಳೆ ಮಳೆಯೂ ಸುರಿಯುತ್ತಿದ್ದರಿಂದ ವಾಹನ ಚಾಲಕರು, ದ್ವಿಚಕ್ರ ವಾಹನ ಸವಾರರು ಆಶ್ರಯಕ್ಕಾಗಿ ಪರದಾಡಿದರು.
ಚಾರ್ಮಾಡಿ ಘಾಟಿಯಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಇದೇ ರೀತಿಯ ಅಡಚಣೆಗಳು ಸಂಭವಿಸುತ್ತಲೇ ಇವೆ. ರಸ್ತೆ ಬದಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಿದರೆ ಸಮಸ್ಯೆ ಉದ್ಭವಿಸುವುದಿಲ್ಲ. ಸಂಬಂಧಪಟ್ಟ ಇಲಾಖೆಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.