ADVERTISEMENT

ರೈಲು ಟಿಕೆಟ್ ಬುಕಿಂಗ್ ಕೇಂದ್ರ: ₹2 ಲಕ್ಷ ಬಾಡಿಗೆ ಬಾಕಿ

ರೈಲು ನಿಲ್ದಾಣಕ್ಕೆ ಸ್ಥಳಾಂತರಗೊಳಿಸಲು ಸಿದ್ಧತೆ:ಸಾರ್ವಜನಿಕರ ವಿರೋಧ

​ಪ್ರಜಾವಾಣಿ ವಾರ್ತೆ
Published 31 ಮೇ 2019, 10:05 IST
Last Updated 31 ಮೇ 2019, 10:05 IST
ಚಿಕ್ಕಮಗಳೂರಿನ ಸುಭಾಶ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿರುವ ರೈಲ್ವೇ ಟಿಕೆಟ್ ಕಾಯ್ದಿರಿಸುವ ಕೇಂದ್ರ.
ಚಿಕ್ಕಮಗಳೂರಿನ ಸುಭಾಶ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿರುವ ರೈಲ್ವೇ ಟಿಕೆಟ್ ಕಾಯ್ದಿರಿಸುವ ಕೇಂದ್ರ.   

ಚಿಕ್ಕಮಗಳೂರು: ನಗರದ ಸುಭಾಶ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿರುವ

ರೈಲ್ವೇ ಟಿಕೆಟ್ ಕಾದಿರಿಸುವ(ಬುಕಿಂಗ್) ಕೇಂದ್ರ ವನ್ನು ರೈಲ್ವೇ ನಿಲ್ದಾಣಕ್ಕೆ ಸ್ಥಳಾಂತರಿಲು ಇಲಾಖೆ ನಿರ್ಧರಿಸಿದ್ದು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

2007ರಲ್ಲಿ ನಗರದ ಜಿಲ್ಲಾ ಆಟದ ಮೈದಾನದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ರೈಲ್ವೇ ಟಿಕೆಟ್ ಬುಕ್ಕಿಂಗ್ ಕೇಂದ್ರ ಆರಂಭಿಸಲಾಯಿತು. ಈ ಕೇಂದ್ರದ ಬಾಡಿಗೆಯನ್ನು ನಗರಸಭೆ ಭರಿಸುವುದಾಗಿ ಒಪ್ಪಂದ ಮಾಡಿಕೊಂಡಿತ್ತು. 12 ವರ್ಷಗಳಿಂದ ಬಾಡಿಗೆ ಪಾವತಿಸದಿರುವುದರಿಂದ ಜಾಗ ಖಾಲಿ ಮಾಡುವಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಒತ್ತಾಯಿಸಲಾಗಿದೆ. ಅದರಂತೆ ರೈಲ್ವೇ ಇಲಾಖೆಯಿಂದ ಟಿಕೆಟ್ ಬುಕಿಂಗ್ ಕೇಂದ್ರ ತೆರವು ಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ.

ADVERTISEMENT

‘ಶ್ರೀಕಂಠಪ್ಪ ಅವರು ಸಂಸದರಾಗಿದ್ದಾಗ ಅವರ ಆಸಕ್ತಿ ಮೇರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಕಟ್ಟಡದ ಕೊಠಡಿಯನ್ನು ₹1.5 ಸಾವಿರಕ್ಕೆ ರೈಲ್ವೆ ಇಲಾಖೆಗೆ ಬಾಡಿಗೆ ನೀಡಲಾಗಿತ್ತು. ಬಾಡಿಗೆಯನ್ನು ನಗರಸಭೆ ಭರಿಸುವುದಾಗಿ ಕರಾರು ಮಡಿಕೊಂಡಿತ್ತು. ಕೇಂದ್ರ ಆರಂಭವಾದ ಎರಡು ತಿಂಗಳು ಮಾತ್ರ ನಗರಸಭೆ ಬಾಡಿಗೆ ನೀಡಿತು. ನಂತರ ಬಾಡಿಗೆ ನೀಡಲು ಸಾಧ್ಯವಿಲ್ಲ ಎನ್ನುವುದಾಗಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಕಳುಹಿಸಿತು’ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಎ.ಎನ್.ಮಹೇಶ್ ಹೇಳಿದರು.

‘ರೈಲ್ವೇ ಟಿಕೆಟ್ ಬುಕಿಂಗ್‌ ಕೇಂದ್ರದಿಂದ ಈವರೆಗೆ ₹2 ಲಕ್ಷ ಬಾಡಿಗೆ ಬಾಕಿ ಇದೆ. ಈ ಬಗ್ಗೆ ರೈಲ್ವೇ ಇಲಾಖೆ ಪ್ರಾದೇಶಿಕ ಅಧಿಕಾರಿಗಳಿಗೆ ನಾಲ್ಕು ಬಾರಿ ನೋಟೀಸ್ ನೀಡಲಾಗಿದೆ. ಒಂದಕ್ಕೂ ಅವರು ಉತ್ತರಿಸಿಲ್ಲ. ರೈಲ್ವೇ ಸ್ಟೇಷನ್ ಮಾಸ್ಟರ್‌ ಬಳಿ ವಿಚಾರಿಸಿದರೆ, ಅದರ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ’ಎಂದು ಅವರು ದೂರಿದರು.

‘ಕಟ್ಟಡದ ಬಾಡಿಗೆ ಭರಿಸುವುದಾಗಿ ನಗರಸಭೆ ಹೇಳಿದ್ದರಿಂದ ಜಿಲ್ಲಾ ಆಟದ ಮೈದಾನದಲ್ಲಿ ರೈಲ್ವೇ ಟಿಕೆಟ್ ಬುಕಿಂಗ್ ಕೇಂದ್ರ ಆರಂಭಿಸಲಾಯಿತು. ಅವರು ಬಾಡಿಗೆ ಪಾವತಿಸಿಲ್ಲ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು ಪೊಲೀಸ್ ಪ್ರಕರಣ ದಾಖಲಿಸಿರುವುದಾಗಿ ಪರಿಚಿತ ಪೊಲೀಸ್ ಅಧಿಕಾರಿ ತಿಳಿಸಿದರು. ಅದಕ್ಕಾಗಿ ಟಿಕೆಟ್ ಬುಕಿಂಗ್ ಕೇಂದ್ರವನ್ನು ತೆರವುಗೊಳಿಸಲಾಗುತ್ತಿದೆ. ಹದಿನೈದು ದಿನಗಳಲ್ಲಿ ರೈಲ್ವೇ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು ಎಂದು ರೈಲ್ವೇ ಚೀಫ್ ಕಮರ್ಷಿಯನ್ ಇನ್‌ಸ್ಪೆಕ್ಟರ್ ಜಿ.ಎ.ಮಂಜುನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಗರ ಹೊರವಲಯದಲ್ಲಿ ರೈಲು ನಿಲ್ದಾಣ ಇದೆ. ಅಲ್ಲಿಗೆ ಬಸ್ ವ್ಯವಸ್ಥೆ ಇಲ್ಲ. ಟಿಕೆಟ್ ಬುಕಿಂಗ್ ಕೇಂದ್ರವನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಶಿವಮೊಗ್ಗಕ್ಕೆ ರೈಲಿನಲ್ಲಿ ₹25 ದರ ಇದೆ. ಆದರೆ ರೈಲು ನಿಲ್ದಾಣಕ್ಕೆ ಆಟೋದಲ್ಲಿ ಹೋಗಿ ಟಿಕೆಟ್ ಕಾಯ್ದಿರಿಸಿ ಬರಲು ₹100 ತೆರಬೇಕಾಗುತ್ತದೆ’ಎಂದು ರಾಮೇಶ್ವರ ನಗರದ ನಿವಾಸಿ ದಿನೇಶ್ ಪಟವರ್ದನ್ ’ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.