ADVERTISEMENT

ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 11:17 IST
Last Updated 12 ನವೆಂಬರ್ 2020, 11:17 IST
ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ಮಾತನಾಡಿದರು.    
""

ಚಿಕ್ಕಮಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆಕಾಂಕ್ಷಿಗಳಿಂದ ₹ 2.5 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿದ ಆರೋಪದಡಿ ಬೆಂಗಳೂರಿನ ಇಬ್ಬರನ್ನು ನಗರದಲ್ಲಿ ಬಂಧಿಸಲಾಗಿದೆ. ಆರೋಪಿಗಳಿಂದ ನಗ, ನಗದು, ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ಭೈರವೇಶ್ವರನಗರದ ಪಿ.ಪ್ರಭಾಕರ (34) ಮತ್ತು ಕಾರು ಚಾಲಕ ಶಿವರಾಜ್‌ (33) ಬಂಧಿತರು. ಪ್ರಭಾಕರ ಮನೆಯಲ್ಲಿದ್ದ ₹ 2 ಲಕ್ಷ ನಗದು, ಹೊಸಮನೆ ಖರೀದಿಗಾಗಿ ಮುಂಗಡ ನೀಡಿದ್ದ ₹ 15.25 ಲಕ್ಷ, 36 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು, ನಕಲಿ ಲೆಟರ್‌ ಹೆಡ್‌, ಕಾಗದಪತ್ರಗಳು ಸಹಿತ ಒಟ್ಟು 60 ಲಕ್ಷ ಮೌಲ್ಯದ ನಗ, ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಕೆಲಸ ಕೊಡಿಸುವುದಾಗಿ ₹ 7 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ನಗರದ ಡೆಲಿಕಸಿ ಹೋಟೆಲ್‌ ಸಪ್ಲೈಯರ್‌ ಸಿ.ಉಮೇಶ್‌ ಎಂಬಾತ ದೂರು ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳ ಪತ್ತೆ ಹಚ್ಚಿದಾಗ 35 ಉದ್ಯೋಗಾಂಕ್ಷಿಗಳ ಪಟ್ಟಿ, 48 ಮಾರ್ಕ್ಸ್‌ಕಾರ್ಡ್‌ಗಳು ಸಿಕ್ಕಿವೆ. ₹ 2.5 ಕೋಟಿಗೂ ಹೆಚ್ಚು ವಸೂಲಿ ಮಾಡಿರುವುದು ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಖಸ್ಥರ ಆಪ್ತ ಕಾರ್ಯದರ್ಶಿ ಎಂದು ಪ್ರಭಾಕರ ಆಕಾಂಕ್ಷಿಗಳಿಗೆ ಪರಿಚಯಿಸಿಕೊಂಡಿದ್ದಾನೆ. ನಕಲಿ ಗುರುತಿನ ಚೀಟಿ ತೋರಿಸಿದ್ದಾನೆ. ಅಂಚೆ ಇಲಾಖೆ, ಇಸ್ರೊ, ಸೆಸ್ಕ್‌, ವಿಟಿಯು ಮೊದಲಾದ ಕಡೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ. ಬೆಂಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಜಿಲ್ಲೆಗಳವರೆಗೆ ವಂಚನೆ ಎಸಗಿದ್ದಾನೆ’ ಎಂದರು.

‘ತಿರುಪತಿ: ಹುಂಡಿಗೆ 5ಲಕ್ಷ ಹಾಕಿದ್ದ ಆರೋಪಿ’
ಆರೋಪಿ ಪ್ರಭಾಕರ ವಿಮಾನ ಯಾನ ಮೂಲಕ ಯಾತ್ರಾಸ್ಥಳಗಳಿಗೆ ಭೇಟಿ ನೀಡಿದ್ದಾನೆ. ವೈಷ್ಣೋದೇವಿ, ಹರಿದ್ವಾರ, ಹೃಷಿಕೇಶ, ಶಿರಡಿ, ಮಂತ್ರಾಲಯ, ಕೇದಾರನಾಥ, ಮಧುರೈ, ತಿರುಪತಿ ಮೊದಲಾದ ಕ್ಷೇತ್ರಗಳ ದರ್ಶನ ಮಾಡಿದ್ದಾನೆ. ತಿರುಪತಿಯಲ್ಲಿ ತಪ್ಪೊಪ್ಪಿಗೆ ಎಂದು ಕಾಣಿಕೆ ಹುಂಡಿಗೆ ₹ 5 ಲಕ್ಷ ಹಾಕಿದ್ದಾನೆ ಎಂದು ಅಕ್ಷಯ್‌ ತಿಳಿಸಿದರು.

ಬಂಧಿತ ಆರೋಪಿ ಪ್ರಭಾಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.