ಆಲ್ದೂರು: ಸಮೀಪದ ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾಚಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆಟದ ಮೈದಾನದ ಜಾಗದಲ್ಲಿ ಅನಧಿಕೃತವಾಗಿ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದ್ದು, ಸ್ಥಳೀಯರು ಮತ್ತು ಶಾಲಾಭಿವೃದ್ಧಿ ಸಮಿತಿಯಿಂದ ಆಕ್ಷೇಪ ವ್ಯಕ್ತವಾಗಿದೆ.
ಮಾಚಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯು 1994ರಲ್ಲಿ ಪ್ರಾರಂಭವಾಗಿದ್ದು, 137 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಕ್ಕದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯೂ ಇದ್ದು, ಅಲ್ಲಿ ಸುಮಾರು 200 ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ.
ಮಾಚಗೊಂಡನಹಳ್ಳಿ ಕ್ಲಸ್ಟರ್ ವಲಯವಾಗಿದ್ದು, ಸುತ್ತಮುತ್ತಲಿನ ಹಿರಿಯ ಮತ್ತು ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ, ಸರ್ಕಾರಿ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಇದೇ ಮೈದಾನವನ್ನು ಆಶ್ರಯಿಸಲಾಗುತ್ತಿದೆ.
ಜೆಜೆಎಂ ಕಾಮಗಾರಿಯ ಗುತ್ತಿಗೆದಾರರು ಶಾಲೆಯ ರಂಗಮಂದಿರದ ಹಿಂಭಾಗದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ಮುಂದಾಗಿದ್ದರು. ಮುಂದಿನ ದಿನಗಳಲ್ಲಿ ಶಾಲೆಯ ಹೆಚ್ಚುವರಿ ಕೊಠಡಿಗಳಿಗೆ ಸ್ಥಳಾವಕಾಶದ ಕೊರತೆ ಉಂಟಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆಟದ ಮೈದಾನದ ಒಂದು ಬದಿಯಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದಾರೆ. ಈಗ ಮತ್ತೊಂದು ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದು, ಪೋಷಕರು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೇರೆ ಕಡೆ ಟ್ಯಾಂಕ್ ನಿರ್ಮಾಣಕ್ಕೆ ಆದೇಶವಾಗಿತ್ತು. ಆದರೆ, ಶಾಲಾ ಪರಿಸರದಲ್ಲಿ ಕಾಮಗಾರಿಗೆ ಮುಂದಾಗಿರುವುದು ಅಸಮಾಧಾನಕ್ಕೆ ಕಾರವಾಗಿದೆ. ಟ್ಯಾಂಕ್ ಕಾಮಗಾರಿಗೆ ಲಾರಿಯಲ್ಲಿ ಸಾಮಗ್ರಿ ತರುವಾಗ ಶಾಲಾ ಕಾಂಪೌಂಡ್‌ನ ಮುಂಭಾಗದ ಕಮಾನನ್ನು ಒಡೆದು ಹಾಕಿದ್ದು, ಅದನ್ನು ಸರಿಪಡಿಸಿ ಕೊಡುವ ಭರವಸೆಯನ್ನೂ ಗುತ್ತಿಗೆದಾರರು ನೀಡಿಲ್ಲ. ಪಂಚಾಯಿತಿ ವತಿಯಿಂದ ನಿರ್ಮಾಣವಾಗಿರುವ ಸಿಂಥೆಟಿಕ್ ಕೋರ್ಟ್ ಪಕ್ಕದಲ್ಲಿ ಜೆಸಿಬಿ ಬಳಸಿ ಕೆಲಸ ಮಾಡುತ್ತಿರುವುದರಿಂದ ಮಧ್ಯೆ ಬಿರುಕು ಉಂಟಾಗಿ ಹಾಳಾಗುತ್ತಿದೆ ಎಂದು ಪಂಚಾಯಿತಿ ಸದಸ್ಯ ಗುರುವಪ್ಪ ಹೇಳಿದರು.
‘ಶಾಲಾ ಅಭಿವೃದ್ಧಿ ಸಮಿತಿ ಮತ್ತು ಮುಖ್ಯ ಶಿಕ್ಷಕರ ಅಭಿಪ್ರಾಯ, ಅನುಮತಿ ಪಡೆಯದೆ ಕಾಮಗಾರಿಯನ್ನು ಮಾಡಲಾಗುತ್ತಿದೆ. ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಮುಖ್ಯಮಂತ್ರಿಗೆ ವಿದ್ಯಾರ್ಥಿಗಳಿಂದ ಪತ್ರ ಚಳವಳಿ ನಡೆಸಲಾಗುವುದು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಹೇಳಿದರು.
ಜನಾಭಿಪ್ರಾಯ ಪಡೆಯದೆ ಶಾಲಾ ಆಟದ ಮೈದಾನದ ಸ್ಥಳದಲ್ಲಿ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಿಸುವ ಸಂದರ್ಭ ಸ್ಥಳಾವಕಾಶದ ಕೊರತೆ ಉಂಟಾಗುತ್ತದೆ. ಈ ಸಮಸ್ಯೆ ಕುರಿತು ಪಂಚಾಯಿತಿ ಸಭೆಯಲ್ಲಿ ಮತ್ತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಸತ್ತಿಹಳ್ಳಿ ಪಂಚಾಯಿತಿ ಅಧ್ಯಕ್ಷ ಧ್ರುವ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.