ADVERTISEMENT

ಆಲ್ದೂರು | ಅವೈಜ್ಞಾನಿಕ ರಸ್ತೆ ದುರಸ್ತಿ ಕಾಮಗಾರಿ: ಸವಾರರಿಗೆ ಕಂಟಕ

ಜೋಸೆಫ್ ಎಂ.ಆಲ್ದೂರು
Published 16 ಡಿಸೆಂಬರ್ 2024, 7:01 IST
Last Updated 16 ಡಿಸೆಂಬರ್ 2024, 7:01 IST
ರಸ್ತೆ ಗುಂಡಿಗೆ ಸುರಿದಿರುವ ಜಲ್ಲಿ ಕಲ್ಲುಗಳು ರಸ್ತೆ ತುಂಬೆಲ್ಲ ಹರಡಿರುವುದು
ರಸ್ತೆ ಗುಂಡಿಗೆ ಸುರಿದಿರುವ ಜಲ್ಲಿ ಕಲ್ಲುಗಳು ರಸ್ತೆ ತುಂಬೆಲ್ಲ ಹರಡಿರುವುದು   

ಆಲ್ದೂರು: ಸಮೀಪದ ಹೊಸಳ್ಳಿಯಿಂದ ಹಾಂದಿವರೆಗೆ ಮಳೆಗಾಲದಲ್ಲಿ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಗುಂಡಿಗಳನ್ನು ಮುಚ್ಚಲು 20 ದಿನಗಳ ಹಿಂದಷ್ಟೇ ಹಾಕಿದ್ದ ಜಲ್ಲಿಕಲ್ಲು, ನಿರಂತರ ವಾಹನ ಸಂಚಾರದಿಂದ ಕಿತ್ತು ಬಂದು ಈಗ ರಸ್ತೆ ತುಂಬ ಹರಡಿಕೊಂಡಿದೆ. ವಾಹನ ಸವಾರರನ್ನು ಗುಂಡಿಯಿಂದ ರಕ್ಷಿಸಲು ಕೈಗೊಂಡ ದುರಸ್ತಿ ಕಾಮಗಾರಿ, ಈಗ ಅವರ ಜೀವಕ್ಕೇ ಕಂಟಕವಾಗಿದೆ.

‘ರಸ್ತೆ ದುರಸ್ತಿ ವಿಷಯ ಬಂದಾಗ ಮಳೆಗಾಲ ಮುಗಿಯಲಿ ಎಂದು ಹೇಳುತ್ತಿದ್ದ ಅಧಿಕಾರಿಗಳು ಈಗ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಹೊಸಳ್ಳಿ, ಯಲಗುಡಿಗೆ, ಸತ್ತಿಹಳ್ಳಿ, ಗುಲ್ಲನ್ ಪೇಟೆ, ಹಾಂದಿ ಗ್ರಾಮದವರೆಗೆ ಸೃಷ್ಟಿಯಾಗಿದ್ದ ಗುಂಡಿಗಳಿಗೆ ಕೆಲವೆಡೆ ದಪ್ಪ ಜಲ್ಲಿ ಇನ್ನು ಕೆಲವೆಡೆ ಸಣ್ಣ ಜಲ್ಲಿ ತಂದು ಕಾಟಾಚಾರಕ್ಕೆ ಎಂಬಂತೆ ಸುರಿಯಲಾಗಿತ್ತು. ದುರಸ್ತಿ ಕಾಮಗಾರಿಯನ್ನು ಸಮರ್ಪಕವಾಗಿ ಮಾಡದ ಕಾರಣ, ಸವಾರರು ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ  ಎಂದು ವಾಹನ ಸವಾರ ಕೃಪಾಕ್ಷ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದರು.

ಈಗ ರಸ್ತೆಯಲ್ಲಿ ಮತ್ತೆ ಗುಂಡಿಗಳು ಸೃಷ್ಟಿಯಾಗಿವೆ. ಒಂದೆಡೆ ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತ್ತಿದೆ. ಇನ್ನೊಂದೆಡೆ ಜಲ್ಲಿ ಕಲ್ಲುಗಳ ಮೇಲೆ ಸಾಗುವಾಗ ಸಮತೋಲನ ಸಿಗದೆ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ವೇಗವಾಗಿ ವಾಹನ ಸಾಗುವಾಗ ಸಿಡಿಯುವ ಕಲ್ಲುಗಳು ಎದುರಿನಿಂದ ಬರುವ, ಅಕ್ಕಪಕ್ಕದ ವಾಹನ ಸವಾರರಿಗೆ ಬಡಿಯುತ್ತಿವೆ.

ADVERTISEMENT

‘ವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚದೆ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರರ ವಿರುದ್ಧ ಕ್ರಮ ವಹಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಸ್ಥಳೀಯರಾದ ಯಲಗುಡಿಗೆ ಹರೀಶ್ ಒತ್ತಾಯಿಸಿದರು.

ಸತ್ತಿಹಳ್ಳಿ ಬ್ಯಾಂಕ್‌ಗೆ ಬೈಕ್‌ನಲ್ಲಿ ಈ ಮಾರ್ಗದಲ್ಲಿ ಪ್ರತಿದಿನವೂ ಪ್ರಯಾಣಿಸಬೇಕಿದೆ. ಈಗಾಗಲೇ ಚಿಕ್ಕಮಗಳೂರು ಮುಕ್ತಿ ಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್ ಪೋಸ್ಟ್‌ವರೆಗೆ ರಾಷ್ಟ್ರೀಯ ಹೆದ್ದಾರಿಯು, ₹350 ಕೋಟಿ ಅನುದಾನದಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು, ವಸ್ತಾರೆ ಮಾರ್ಗವಾಗಿ ಕಬ್ಬಿಣ ಸೇತುವೆ ಮೂಲಕ ಹಾದು ಹೋಗುತ್ತದೆ. ಆದರೆ, ಆಲ್ದೂರಿನಿಂದ ಹಾದು ಹೋಗುವ ಈ ಸಂಪರ್ಕ ರಸ್ತೆಗೆ ನೂತನ ರಸ್ತೆ ಭಾಗ್ಯ ಯಾವಾಗ ಎಂಬುದನ್ನು ಜನಪ್ರತಿನಿಧಿಗಳು ತಿಳಿಸಬೇಕು’ ಎಂದು ಕೆ.ಮೂರ್ತಿ ಎಂಬುವರು ಒತ್ತಾಯಿಸಿದರು.

ರಸ್ತೆ ಗುಂಡಿಗೆ ಸುರಿದಿರುವ ಜಲ್ಲಿ ಕಲ್ಲುಗಳು ರಸ್ತೆ ತುಂಬೆಲ್ಲ ಹರಡಿರುವುದು
‘ಶಾಸಕರು ಕ್ರಮ ವಹಿಸಬೇಕು’
ಒಟ್ಟು 6 ಕಿ.ಮೀನಷ್ಟು ರಸ್ತೆ ಕೆಟ್ಟು ಹೋಗಿದ್ದು ಕಾಮಗಾರಿ ಮಾಡುವಾಗ ಗುಂಡಿಗಳಿಗೆ ಜಲ್ಲಿ ತುಂಬಿ ನಂತರ ಟಾರ್ ಹಾಕಿ ದುರಸ್ತಿ ಮಾಡಬೇಕಿತ್ತು. ಆದರೆ ಇಲ್ಲಿ ಗುಂಡಿಗಳಲ್ಲಿ ಕೇವಲ ಜಲ್ಲಿ ಸುರಿದು ಹೋಗಿದ್ದಾರೆ. ವಾಹನ ಸಂಚಾರದಿಂದ ಜಲ್ಲಿ ರಸ್ತೆ ತುಂಬ ಹರಡಿವೆ. ದುರಸ್ತಿ ಕಾಮಗಾರಿ ನಿರ್ವಹಿಸುವರ ವಿರುದ್ಧ ಶಾಸಕರು ಕ್ರಮ ವಹಿಸಬೇಕು. ದುರಂತ ಸಂಭವಿಸಿದ ಮೇಲೆ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ಒದಗಿಸಿದರೆ ಏನು ಪ್ರಯೋಜನ’ ಎಂದು ಕರ್ನಾಟಕ ಬೆಳಗಾರರ ಒಕ್ಕೂಟದ ನಿರ್ದೇಶಕ ಅಶೋಕ್ ಸೂರಪ್ಪನಹಳ್ಳಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.