ADVERTISEMENT

ಕೊಪ್ಪ: ಅವೈಜ್ಞಾನಿಕ ಯೋಜನೆ; ರೈತರ ವಿರೋಧ

ಕೆಆರ್‌ಎಸ್‌ ಜಲಾಶಯದಿಂದ ನೀರು ತರದೆ ಕುಡಿಯುವ ನೀರಿನ ಯೋಜನೆ ಜಾರಿ ಬೇಡ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 13:37 IST
Last Updated 9 ಆಗಸ್ಟ್ 2020, 13:37 IST
ಕೊಪ್ಪ ಕೆರೆಯ ಚಿತ್ರಣ
ಕೊಪ್ಪ ಕೆರೆಯ ಚಿತ್ರಣ   

ಕೊಪ್ಪ: ಕೆಆರ್‌ಎಸ್‌ ಜಲಾಶಯದಿಂದ ಕೊಪ್ಪ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳದೆ ಕೆರೆಯಿಂದ 48 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಜಲಧಾರೆ ಯೋಜನೆ ಅನುಷ್ಠಾನಗೊಳಿಸುತ್ತಿರುವುದಕ್ಕೆ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

₹ 27 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಯಾಗುತ್ತಿದ್ದು ಈಗಾಗಲೇ ಶೇ 60ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಯ ಮೂಲ ಉದ್ದೇಶ ಬದಿಗಿಟ್ಟು ಕೆರೆಗೆ ಕೆಆರ್‌ಎಸ್‌ ನೀರು ಬಿಡದೆ ಕೆರೆಯ ನೀರಿನಿಂದ ಕುಡಿಯುವ ನೀರು ಒದಗಿಸುತ್ತಿರುವುದು ರೈತರ ವಿರೋಧಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ಕೆಲಸ ಮಾಡಲು ಬೇರೆಡೆಯಿಂದ ಮಣ್ಣು ತುಂಬುತ್ತಿದ್ದ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಇದು ಕಾಂಗ್ರೆಸ್‌–ಜೆಡಿಎಸ್‌ ಸಮಿಶ್ರ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾಗಿತ್ತು. 527 ಎಕರೆ ಪ್ರದೇಶದಲ್ಲಿರುವ ಕೊಪ್ಪ ಕೆರೆಯ ಅಂದಾಜು 60-70 ಎಕರೆ ಭೂ ಪ್ರದೇಶ ಒತ್ತುವರಿಯಾಗಿದೆ. ಕೆರೆಯ ಒತ್ತುವರಿ ತೆರವುಗೊಳಿಸದೇ, ಕೆರೆಯ ಹೂಳು ತೆಗೆಯದೇ ಹಾಗೂ ಕೆಆರ್‌ಎಸ್‌ ಜಲಾಶಯದಿಂದ ನೀರು ಹರಿಸದೇ ಯೋಜನೆ ಅನುಷ್ಠಾನ ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ADVERTISEMENT

ಜಲಧಾರೆ ಯೋಜನೆ ಅನುಷ್ಠಾನದರೆ ಇತ್ತ ಕುಡಿಯುವುದಕ್ಕೂ ನೀರಿಲ್ಲದೆ, ಅತ್ತ ಕೃಷಿಗೂ ನೀರು ಸಿಗದೆ ರೈತರು ಇಕ್ಕಟ್ಟಿಗೆ ಸಿಲುಕುತ್ತಾರೆ. ಅವೈಜ್ಞಾನಿಕ ರೀತಿಯಲ್ಲಿ ಯೋಜನೆ ತಂದು ಕೊಪ್ಪ ಭಾಗದ ರೈತರಿಗೆ ಜನ ಪ್ರತಿನಿಧಿಗಳು ಮರಣ ಶಾಸನವನ್ನು ಬರೆದಿಟ್ಟಿದ್ದಾರೆ. ಕೊಪ್ಪ ಕೆರೆಯ ನೀರನ್ನು ನಂಬಿಕೊಂಡು 1 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಯೋಜನೆ ಅನುಷ್ಠಾನವಾದರೆ ಕೃಷಿಗೆ, ಜಾನುವಾರುಗಳಿಗೆ ನೀರು ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ರೈತ ಮುಖಂಡರು ಆರೋಪಿಸುತ್ತಾರೆ.

‘ಪ್ರತಿಹಳ್ಳಿಯಲ್ಲೂ ಒಂದೊಂದು ಕೊಳವೆ ಬಾವಿ ಕೊರೆಯಿಸಿ ಕುಡಿಯುವ ನೀರಿ ನೀಡಬಹುದು. ₹ 27 ಕೋಟಿ ಹಣವನ್ನು ವ್ಯರ್ಥ ಮಾಡುವ ಯೋಜನೆ ಜಾರಿ ಮಾಡುವುದು ಬೇಡ’ ಎಂದು ರಾಜ್ಯ ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ, ಹುರುಗಲವಾಡಿ ರಾಮಯ್ಯ ಆಗಹಿಸಿದರು.

‘ಕೊಪ್ಪ ಕೆರೆಯಿಂದ 48 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವುದು ಸರಿಯಲ್ಲ. ಕೌಡ್ಲೆ, ಹೊಸಗಾವಿ ಮತ್ತು ಬೆಕ್ಕಳಲೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಬೋಳಾರೆ ಕೆರೆಯಿಂದ ನೀರು ಒದಗಿಸಬೇಕು. ಆಗ ಕೊಪ್ಪ ಭಾಗದ ರೈತರ ಸಮಸ್ಯೆ ಬಗೆಹರಿಯುತ್ತದೆ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಒತ್ತಾಯಿಸಿದರು.

‘ಕೊಪ್ಪ ಕೆರೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಿದರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ಕಡಿಮೆಯಾಗುತ್ತದೆ. ಕೊಪ್ಪ ಕೆರೆಯನ್ನು ಕುಡಿಯುವ ನೀರಿಗಾಗಿ ಮೀಸಲಿಟ್ಟರೆ ಕೃಷಿಗೆ ಯಾವುದೇ ತೊಂದರೆಯಾಗುವುದಿಲ್ಲ. ಬೇಸಿಗೆಯಲ್ಲೂ ರೈತರಿಗೆ ನೀರು ದೊರೆಯಲಿದೆ. ರೈತರು ವಿನಾಕಾರಣ ಆತಂಕಪಡಬಾರದು’ ಎಂದು ಶಾಸಕ ಸುರೇಶ್‌ಗೌಡ ಹೇಳಿದರು.

ಕೊಪ್ಪದ ಯಂಬಾರ್ಜಿಯರ್ ಮಠದ ಆವರಣದಲ್ಲಿ ಆ. 16 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪ ಕೆರೆಯಿಂದ ಜಲಧಾರೆ ಯೋಜನೆ ಅನುಷ್ಠಾನ ಸಾಧಕ ಭಾದಕಗಳ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದು. ಕೊಪ್ಪ ಭಾಗದ ರೈತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ. ಮುಂದಿನ ಹೋರಾಟದ ಬಗ್ಗೆ ವಿಚಾರ ಸಂಕಿರಣದ ಕೊನೆಯಲ್ಲಿ ನಿರ್ಧರಿಸಲಾಗುವುದು ಎಂದು ಮುಖಂಡ ಚಿಕ್ಕೋನಹಳ್ಳಿ ಚಿಕ್ಕರಾಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.