ಚಿಕ್ಕಮಗಳೂರು: ತಾಲ್ಲೂಕಿನ ಗಿರಿಶ್ರೇಣಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಉರುಸ್ ಮೆರವಣಿಗೆ ಶನಿವಾರ ನಡೆಯಿತು.
ಗಂಧವನ್ನು ಅತ್ತಿಗುಂಡಿಯಿಂದ ಮೆರವಣಿಗೆಯಲ್ಲಿ ಬಾಬಾಬುಡನ್‌ಗಿರಿಗೆ ಸಂಜೆ ತರಲಾಯಿತು. ಮೆರವಣಿಗೆಯದ್ದಕ್ಕೂ ಭಕ್ತರು ಗೀತೆಗಳನ್ನು ಹಾಡಿದರು. ವಿವಿಧೆಡೆಯ ಭಕ್ತರು, ಫಕೀರರು ಪಾಲ್ಗೊಂಡಿದ್ದರು.
ಗಂಧವು ದರ್ಗಾದ ಗೇಟಿನ ಮುಂಭಾಗಕ್ಕೆ ತಲುಪುತ್ತಿದ್ದಂತೆ ಭಕ್ತರು ನಾಣ್ಯಗಳನ್ನು ಚಿಮ್ಮಿ ಹರಕೆ ಸಲ್ಲಿಸಿದರು. ಧಪ್, ವಾದ್ಯಗಳ ಠೇಂಕಾರ ಮೊಳಗಿದವು.
ಭಕ್ತರು ದರ್ಗಾ ಗೇಟಿನ ಬಳಿ ನಿಂತು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಮಹಿಳೆಯರು, ಮಕ್ಕಳು, ಯುವಜನರು ಉರುಸ್‌ನಲ್ಲಿ ಭಾಗವಹಿಸಿದ್ದರು. ಕೆಲವರು ಚಿಣ್ಣರನ್ನು ಹೆಗಲ ಮೇಲೆ ಕೂರಿಸಿ ಮೆರವಣಿಗೆ ತೋರಿಸಿದರು. ಮೊಬೈಲ್‌ಫೋನ್ ಕ್ಯಾಮೆರಾಗಳಲ್ಲಿ ವಿಡಿಯೊ ಮಾಡಿಕೊಂಡರು, ಫೋಟೊ ಕ್ಲಿಕ್ಕಿಸಿಕೊಂಡರು.
ಪ್ರವೇಶ ದ್ವಾರದ ಗೇಟಿನ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಂದೋಬಸ್ತ್ ಮಾಡಲಾಗಿತ್ತು. ದರ್ಗಾ ಪ್ರದೇಶ ಸಹಿತ ವಿವಿಧೆಡೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ದರ್ಗಾದ ಒಳಗೆ ಪೂಜೆ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ನೀಡದ ಕಾರಣ ಒಳಗೆ ಹೋಗಲಿಲ್ಲ. ಈ ವೇಳೆ ಕೂಡಲಸಂಗಮದ ಸರ್ವಧರ್ಮ ಪೀಠದ ಸಂಗಮೇಶ್ವರ ಸ್ವಾಮೀಜಿ, ಹಜರತ್ ಟಿಪ್ಪು ಸುಲ್ತಾನ್ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಜಂಶಿದ್ ಖಾನ್, ಶಾಖಾದ್ರಿ ವಂಶಸ್ಥ ಅಜ್ಮತ್, ನಸೀರ್ ಅಹಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.