ADVERTISEMENT

‘ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಿ’

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಐ.ಟಿ.ಐ.ಕಾಲೇಜಿನಲ್ಲಿ ‘ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:16 IST
Last Updated 21 ಡಿಸೆಂಬರ್ 2025, 6:16 IST
ನರಸಿಂಹರಾಜಪುರ ತಾಲ್ಲೂಕು ಬಿ.ಎಚ್. ಕೈಮರ ಗ್ರಾಮದ ಐಟಿಐ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಅತಿಥಿಗಳು ಚಾಲನೆ ನೀಡಿದರು
ನರಸಿಂಹರಾಜಪುರ ತಾಲ್ಲೂಕು ಬಿ.ಎಚ್. ಕೈಮರ ಗ್ರಾಮದ ಐಟಿಐ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಅತಿಥಿಗಳು ಚಾಲನೆ ನೀಡಿದರು   

ಬಿ.ಎಚ್.ಕೈಮರ (ನರಸಿಂಹರಾಜಪುರ): ಇತ್ತೀಚಿನ ದಿನಗಳಲ್ಲಿ ಸಹವಾಸ ದೋಷದಿಂದ ಮಕ್ಕಳಲ್ಲಿ ದುಶ್ಚಟದ ಪ್ರಮಾಣ ಹೆಚ್ಚುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಬಾಲಕೃಷ್ಣ ಭಟ್ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಿ.ಎಚ್.ಕೈಮರದ ಐ.ಟಿ.ಐ ಕಾಲೇಜಿನಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ನಡೆದ ‘ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ದುಶ್ಚಟದ ಪರಿಣಾಮದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಶಾಲಾ–ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳು ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ತಂದೆ, ತಾಯಿ ಹಾಗೂ ಗುರು–ಹಿರಿಯರಿಗೆ ಗೌರವ ನೀಡಬೇಕು. ಪ್ರಾರಂಭದಲ್ಲಿ ಶೋಕಿಗಾಗಿ ದುಶ್ಚಟಗಳನ್ನು ಕಲಿಯುತ್ತಾರೆ. ನಂತರ ದುಶ್ಚಟಗಳೇ ಅವರ ಜೀವನವನ್ನು ಹಾಳು ಮಾಡುತ್ತದೆ. ಆದ್ದರಿಂದ ಶಾಲಾ–ಕಾಲೇಜುಗಳಲ್ಲಿ ಒಳ್ಳೆಯ ಮಿತ್ರರ ಸಹವಾಸ ಮಾಡಬೇಕು ಎಂದರು.

ADVERTISEMENT

ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಮಂಜುನಾಥ್ ಗೌಡ ಮಾತನಾಡಿ, ಮಕ್ಕಳಲ್ಲಿ ಜ್ಞಾನ ಸಂಪಾದನೆ ಅತಿ ಮುಖ್ಯವಾಗಿದೆ. ಜ್ಞಾನ ಸಂಪಾದನೆ ಆಗಬೇಕಾದರೆ ಹೆಚ್ಚು ಪುಸ್ತಕಗಳನ್ನು ಓದಬೇಕು. ಮಹಾತ್ಮರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ಅವರ ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.

ಐ.ಟಿ.ಐ. ಕಾಲೇಜಿನ ತರಬೇತಿ ಅಧಿಕಾರಿ ರವಿರಾಜ್ ಮಾತನಾಡಿ, ನಾನು ಧರ್ಮಸ್ಥಳದ ರತ್ನ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದೆ. ಅಲ್ಲಿನ ಶಿಕ್ಷಣ ನನ್ನ ಬದುಕನ್ನು ರೂಪಿಸಿತು ಎಂದು ನೆನಪಿಸಿಕೊಂಡರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೈಮರ ವಲಯ ಮೇಲ್ವಿಚಾರಕ ತೀರ್ಥರಾಜ್, ಸೇವಾ ಪ್ರತಿನಿಧಿ ಅನ್ನಪೂರ್ಣ, ಕಾಲೇಜಿನ ಕಿರಿಯ ತರಬೇತಿ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.