ADVERTISEMENT

ಉದ್ಯಮಿ ಸಿದ್ದಾರ್ಥ್‌ ಕಣ್ಮರೆ; ಕಾಫಿನಾಡಿನಲ್ಲಿ ದುಗುಡ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:00 IST
Last Updated 30 ಜುಲೈ 2019, 20:00 IST
ಚಿಕ್ಕಮಗಳೂರಿನ ಕೆ.ಎಂ ರಸ್ತೆಯ ಕಾಫಿ ಡೇ ಗ್ಲೊಬಲ್‌ ಘಟಕದ ನೌಕರರು ಮಂಗಳವಾರ ಕೆಲಸಕ್ಕೆ ಬಂದು ವಾಪಸಾದರು.
ಚಿಕ್ಕಮಗಳೂರಿನ ಕೆ.ಎಂ ರಸ್ತೆಯ ಕಾಫಿ ಡೇ ಗ್ಲೊಬಲ್‌ ಘಟಕದ ನೌಕರರು ಮಂಗಳವಾರ ಕೆಲಸಕ್ಕೆ ಬಂದು ವಾಪಸಾದರು.   

ಚಿಕ್ಕಮಗಳೂರು: ಉದ್ಯಮಿ ವಿ.ಜಿ.ಸಿದ್ದಾರ್ಥ್‌ ಅವರು ಸೋಮವಾರ ಕಣ್ಮರೆಯಾಗಿದ್ದು, ಕಾಫಿನಾಡಿನ ಜನರಲ್ಲಿ ಆತಂಕ ಆವರಿಸಿದೆ.

ಉದ್ಯಮಿ, ಬೆಳೆಗಾರ ಸಿದ್ದಾರ್ಥ್‌ ಅವರು ಕಾಫಿ ಉದ್ಯಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಒತ್ತಿದ್ದಾರೆ. ಕಾಫಿ ಬೆಳೆ, ಮಾರಾಟ, ಖರೀದಿಯಲ್ಲಿ ತಮ್ಮದೇ ಸೂತ್ರಗಳನ್ನು ಅಳವಡಿಸಿದ್ದಾರೆ. ಕಾಫಿನಾಡಿನಲ್ಲಿ ಅವರ ಹೆಸರು ಕೇಳದವರೇ ವಿರಳ.

ನಗರದಲ್ಲಿನ ಕಾಫಿ ಡೇ ಗ್ಲೊಬಲ್‌ ಲಿಮಿಟೆಡ್‌ ಘಟಕ, ಆಂಬರ್‌ ವ್ಯಾಲಿ ಶಾಲೆ, ಸೆರಾಯ್‌ ಐಷರಾಮಿ ಹೊಟೆಲ್‌ ಹೋಟೆಲ್‌ ಸಹಿತ ಅವರ ಒಡೆತನದ ಸಂಸ್ಥೆಗಳು ಮಂಗಳವಾರ ಕಾರ್ಯನಿರ್ವಹಿಸಿಲ್ಲ. ನೌಕರರಲ್ಲಿ ದುಃಖ ಮಡುಗಟ್ಟಿತ್ತು. ಕೆಲವರು ದುಃಖ ತಾಳಲಾರದೆ ಅತ್ತರು. ಸಂಸ್ಥೆಗಳಲ್ಲಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ADVERTISEMENT

‘ಎರಡು ವರ್ಷದಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಂಸ್ಥೆ ಮಾಲೀಕರು ಒಳ್ಳೆಯವರು, ಕೆಲಸಗಾರರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರು ಕಣ್ಮರೆಯಾಗಿರುವುದು ಬೆಳಿಗ್ಗೆ ಗೊತ್ತಾಯಿತು. ಕೆಲಸಕ್ಕೆ ರಜೆ ನೀಡಿದ್ದಾರೆ’ ಎಂದ ಕಾಫಿ ಡೇ ಗ್ಲೊಬಲ್‌ ಘಟಕದ ನೌಕರ ವರದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಫಿ ಘಮಲು, ಮೌಲ್ಯವರ್ಧನೆ’
ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಸಿದ್ದಾರ್ಥ್‌ ಅವರು ಕೆಫೆ ಕಾಫಿ ಡೇ ಸ್ಥಾಪಿಸಿ ಕಾಫಿ ಘಮಲನ್ನು ವಿಶ್ವದೆಲ್ಲೆಡೆ ಪಸರಿಸಿದ್ದಾರೆ. ಚಿಕೋರಿ ರಹಿತ ಶುದ್ಧ ಕಾಫಿ ಪೇಯವನ್ನು ಈ ಕೆಫೆಗಳಲ್ಲಿ ಸಿಗುವಂತೆ ಮಾಡಿ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದ್ದಾರೆ’ ಎಂದರು.

‘ಕಾಫಿಯ ಮೌಲ್ಯವರ್ಧನೆಗೆ ಒತ್ತು ನೀಡಿದ್ದಾರೆ. ಬೆಳೆಗಾರರಿಗೆ ವಿವಿಧೆಡೆಯ ಹೊಸ ತಳಿಗಳನ್ನು ಪರಿಚಯಿಸಿದ್ದಾರೆ. ನಮ್ಮ ಪದಾರ್ಥವನ್ನು ನಾವೇ ಮಾರಾಟ ಮಾಡಬೇಕು ಎಂಬುದು ಅವರ ಸಿದ್ಧಾಂತ. ಬೆಲೆ ಗಮನಿಸಿ ಮಾರಾಟ ಮಾಡಬೇಕು ಎಂಬುದು ಅವರ ಕಿವಿಮಾತು. ಅವರ ಒಡೆತನ ಕಾಫಿ ಡೇ ಗ್ಲೊಬಲ್‌ ಘಟಕಕ್ಕೆ ಕಾಫಿ ಮಾರಿದರೆ ದುಡ್ಡು ಪಕ್ಕ ಎಂಬುದು ಜನಜನಿತವಾಗಿದೆ. ಅವರೊಬ್ಬ ಕನಸುಗಾರ, ಉದ್ಯಮದಲ್ಲಿ ಬಹಳಷ್ಟು ಬೆಳೆದಿದ್ದಾರೆ. ಬೆಳೆಗಾರರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ’ ಎಂದು ಹೇಳಿದರು.

ರ್ಯಾಲಿ, ಮ್ಯಾರಥಾನ್‌...
ಕಾಫಿ ಡೇ ಗ್ಲೋಬಲ್‌ ಪ್ರಾಯೋಜಕತ್ವದಲ್ಲಿ ಕೆಲ ವರ್ಷಗಳಿಂದ ಕಾಫಿನಾಡಿನಲ್ಲಿ ಅಂತಾರಾಷ್ಟ್ರೀಯಮಟ್ಟದ ಮ್ಯಾರಥಾನ್‌, ಬೈಕು–ಕಾರು ರ್ಯಾಲಿ ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆಗಳಲ್ಲಿ ದೇಶ ವಿದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಾರೆ.

ಮಲೆನಾಡಿನ ಚಟ್ಟನಹಳ್ಳಿ, ಚಂದ್ರಾಪುರ ಹಾಗೂ ಕಮ್ಮರಗೋಡು ತೋಟಗಳ ತಗ್ಗುದಿಣ್ಣೆಗಳ ದುರ್ಗಮ ಹಾದಿಯಲ್ಲಿ ಬೈಕು, ಕಾರುಗಳ ಓಟವನ್ನು ನಗರದ ಮತ್ತು ಸುತ್ತಮುತ್ತಲಿನ ಊರುಗಳ ರ್ಯಾಲಿ ಪ್ರಿಯರು ನೋಡಿ ಆನಂದಿಸುತ್ತಾರೆ. ಮಲೆನಾಡಿನ ಗುಡ್ಡಗಾಡಿನ ರಸ್ತೆಗಳಲ್ಲಿ ಮ್ಯಾರಥಾನ್‌ನಲ್ಲಿ ಸ್ಪರ್ಧಿಗಳು ನೂರಾರು ಕಿ.ಮೀ ಸಾಗುತ್ತಾರೆ.

2017ರಲ್ಲಿ ಐಟಿ ತಲಾಶ್‌
ಆದಾಯ ತೆರಿಗೆ (ಐಟಿ) ಅಧಿಕಾರಿಗಳ ತಂಡವು 2017ರ ಸೆಪ್ಟೆಂಬರ್‌ನಲ್ಲಿ ನಗರದ ಕಾಫಿ ಡೇ ಗ್ಲೊಬಲ್‌ ಲಿಮಿಟೆಡ್‌ ಘಟಕ ಸಹಿತ ವಿವಿಧೆಡೆಗಳಲ್ಲಿ ತಲಾಶ್‌ ನಡೆಸಿದ್ದರು. ದಾಖಲೆ, ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.