ADVERTISEMENT

ಭದ್ರಾ ನದಿಯಲ್ಲಿ ಜಲಸ್ತಂಭನ: ವಿದ್ಯಾಗಣಪತಿ ಮಹೋತ್ಸವ ಸಂಪನ್ನ

ಸಂಭ್ರಮಕ್ಕೆ ಸಾಕ್ಷಿಯಾದ ಭಾರಿ ಜನಸ್ತೋಮ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:19 IST
Last Updated 11 ಸೆಪ್ಟೆಂಬರ್ 2025, 5:19 IST
ಬಾಳೆಹೊನ್ನೂರಿನ ಕಲಾರಂಗದಲ್ಲಿ ಪ್ರತಿಷ್ಠಾಪಿಸಿದ್ದ ವಿದ್ಯಾ ಗಣಪತಿ ಜಲಸ್ತಂಭನಕ್ಕೂ ಮೊದಲು ಅದ್ಧೂರಿ ಮೆರವಣಿಗೆ ನಡೆಯಿತು
ಬಾಳೆಹೊನ್ನೂರಿನ ಕಲಾರಂಗದಲ್ಲಿ ಪ್ರತಿಷ್ಠಾಪಿಸಿದ್ದ ವಿದ್ಯಾ ಗಣಪತಿ ಜಲಸ್ತಂಭನಕ್ಕೂ ಮೊದಲು ಅದ್ಧೂರಿ ಮೆರವಣಿಗೆ ನಡೆಯಿತು   

ಬಾಳೆಹೊನ್ನೂರು: ಇಲ್ಲಿನ ಕಲಾರಂಗ ಕ್ರೀಡಾಂಗಣದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ 67ನೇ ವರ್ಷದ ವಿದ್ಯಾಗಣಪತಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಜನರ ಸಂಭ್ರಮದ ನಡುವೆ ಸಂಪನ್ನಗೊಂಡಿತು.

ಗಣಪತಿ ವಿಸರ್ಜನೆಯ ಅಂಗವಾಗಿ ಬೆಳಿಗ್ಗೆ ಕಂಬದ ರಂಗಯ್ಯ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಿತು. ರಾಣೆಬೆನ್ನೂರಿನ ಬಸವರಾಜ್ ಬ್ರಾಸ್ ಬ್ಯಾಂಡ್ ಆರ್ಕೆಸ್ಟ್ರಾದಿಂದ ‘ಚಲಿಸುವ ಆರ್ಕೆಸ್ಟ್ರಾ’ ಇತ್ತು. ಲಾಟರಿ ಡ್ರಾ ಹಾಗೂ ಅನ್ನಸಂತರ್ಪಣೆಯೂ ಇತ್ತು.

ಪೂಜೆಯ ನಂತರ ಹೊರಟ ಮೆರವಣಿಗೆ ರಂಭಾಪುರಿ ಪೆಟ್ರೋಲ್ ಬಂಕ್, ಬಸ್ ನಿಲ್ದಾಣದ ಮೂಲಕ ಜೇಸಿ ವೃತ್ತ ತಲುಪಿತು. ಅಲ್ಲಿ ವಿವಿಧ ಸಂಘಟನೆಗಳಿಂದ ಅಕರ್ಷಕ ಸುಡುಮದ್ದು ಪ್ರದರ್ಶನ ರೋಮಾಂಚನ ಮೂಡಿಸಿತು. ಹಾಡಿಗೆ ಜನರು ಹೆಜ್ಜೆ ಹಾಕಿದರು.

ADVERTISEMENT

ಉಡುಪಿ ಪ್ರಭು ಈವೆಂಟ್ಸ್‌ ತಂಡದಿಂದ ಕೀಲುಕುದುರೆ, ಕೇರಳದ ದೈವಬೊಂಬೆ, ಕೋಳಿಗಳು, ರಾಮಕೃಷ್ಣ ತಂಡದ ಹಲಗೆವಾದ್ಯ, ಸೀಗೋಡಿನ ರಮೇಶ್ ತಂಡದಿಂದ ಬ್ಯಾಂಡ್ ಸೆಟ್ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ರಾಜಬೀದಿಯಲ್ಲಿ ಸಾಗಿದಾಗ ರಸ್ತೆಯ ಎರಡೂ ಬದಿಗಳ ಕಟ್ಟಡಗಳ ಮೇಲೆ ನಿಂತವರು ಕಣ್ತುಂಬಿಕೊಂಡರು.

ರೋಟರಿ ವೃತ್ತದವರೆಗೆ ಸಾಗಿದ ಮೆರೆವಣಿಗೆ ಬಾಲಸುಬ್ರಮಣ್ಯ ದೇವಸ್ಥಾನದ ಬಳಿಗೆ ತೆರಳಿತು. ಗಣಪತಿಯನ್ನು ಭದ್ರಾ ನದಿಯಲ್ಲಿ ಜಲಸ್ತಂಬನಗೊಳಿಸಲಾಯಿತು. ಎಸ್‌ಪಿ ವಿಕ್ರಂ ಅಮಟೆ, ಎಎಸ್ಪಿ ಜಯಕುಮಾರ್, ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿತ್ತು.

ಟ್ರ್ಯಾಕ್ಟರ್ ಚಾಲನೆ ಮಾಡಿದ ಶಾಸಕ

ಗಣಪತಿ ಹೊತ್ತ ಟ್ರ್ಯಾಕ್ಟರ್ ಏರಿದ ಶಾಸಕ ಟಿ.ಡಿ.ರಾಜೇಗೌಡ ಕೇಸರಿ ಶಾಲು ಹಾಕಿಕೊಂಡು ಮೈಸೂರು ಪೇಟ ಧರಿಸಿ ಕಲಾರಂಗ ಕ್ರೀಡಾಂಗಣದಲ್ಲಿ ಚಾಲನೆ ಮಾಡಿದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಜನರೊಂದಿಗೆ ಹೆಜ್ಜೆಹಾಕಿದರು. ಕಲ್ಮಕ್ಕಿ ಉಮೇಶ್ ಗಣಪತಿ ಮುಂದೆ 3000 ತೆಂಗಿನಕಾಯಿ ಒಡೆದರು.

ಆ. 27ರಂದು ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಗೆ ನಿತ್ಯ ಪೂಜೆಗಳನ್ನು ಸಲ್ಲಿಸಲಾಗಿತ್ತು. ಪ್ರತಿದಿನ ಮನರಂಜನಾ ಕಾರ್ಯಕ್ರಮಗಳಿದ್ದವು. ಸಮಾರೋಪ ಸಮಾರಂಭದಲ್ಲಿ ನೆಲಮಂಗಲ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠ ಶಿವಗಂಗಾ ಕ್ಷೇತ್ರದ ಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದ್ದರು.

ಗಣಪತಿ ಮೂರ್ತಿ ಇದ್ದ ಟ್ರ್ಯಾಕ್ಟರ್ ಚಾಲನೆ ಮಾಡಿದ ಶಾಸಕ ಟಿ.ಡಿ ರಾಜೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.