ADVERTISEMENT

ಆಲ್ದೂರು | ಕಲ್ಲು ಗಣಿಗಾರಿಕೆ: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 13:05 IST
Last Updated 27 ನವೆಂಬರ್ 2023, 13:05 IST
ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಲ್ದೂರು ಸಮೀಪದ ಮಾಗರವಳ್ಳಿ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಕ್ರಷರ್ ಟಿಪ್ಪರ್‌ಗಳನ್ನು ತಡೆದು ಪ್ರತಿಭಟಿಸಿದರು
ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಲ್ದೂರು ಸಮೀಪದ ಮಾಗರವಳ್ಳಿ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಕ್ರಷರ್ ಟಿಪ್ಪರ್‌ಗಳನ್ನು ತಡೆದು ಪ್ರತಿಭಟಿಸಿದರು    

ಆಲ್ದೂರು: ದೊಡ್ಡ ಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿ ಜಲ್ಲಿ ಕ್ರಷರ್ ಉದ್ಯಮ ನಡೆಸುವ ಕಂಪನಿಯೊಂದು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ, ಗ್ರಾಮಸ್ಥರು ಟಿಪ್ಪರ್‌ಗಳನ್ನು ತಡೆದು ಈಚೆಗೆ ಇಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಮದ ಮುಖಂಡ ಭವಿತ್ ಮಾತನಾಡಿ, ‘ಕಳೆದ ಆರು ತಿಂಗಳುಗಳಿಂದ ಸಾರಗೋಡು ಮೀಸಲು ಅರಣ್ಯದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಪ್ರತಿನಿತ್ಯ ದೋಣಗುಡಿಗೆ, ಚಂಡಗೋಡು, ವಗರ್ ರಸ್ತೆ, ಕಂಚಿನ ಕಲ್ ದುರ್ಗ, ಬೆಳಗೋಡು, ಸಾರಳ್ಳಿ, ಗುಡ್ಡದೂರು ಮಾರ್ಗವಾಗಿ 40ರಿಂದ 50 ಟನ್ ಭಾರದ ಜಲ್ಲಿ ಮತ್ತು ಎಂಸ್ಯಾಂಡ್‌ ತುಂಬಿಕೊಂಡ ಟಿಪ್ಪರ್‌ಗಳು ನಿರಂತರವಾಗಿ ಸಂಚರಿಸುತ್ತವೆ. ಇದರಿಂದ ಗ್ರಾಮೀಣ ಭಾಗದ ಕಿರಿದಾದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅಕ್ಕಪಕ್ಕದ ಮನೆಗಳು ದೂಳುಮಯವಾಗಿ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಳೆಯದಾದ ಸಾರಳ್ಳಿ ಹುಲಿಹಳ್ಳ ಸೇತುವೆಗೆ ಅಪಾಯವಾದರೆ, ಅನೇಕ ಗ್ರಾಮಗಳ ನಿವಾಸಿಗಳಿಗೆ ತೊಂದರೆಯಾಗುತ್ತದೆ’ ಎಂದರು.

‘ಶನಿವಾರ ಆಲ್ದೂರು ಹೋಬಳಿಯ ವಾರದ ಸಂತೆ ನಡೆಯುತ್ತದೆ. ಟಿಪ್ಪರ್‌ಗಳ ಚಾಲಕರು ಅತಿವೇಗದ ಚಾಲನೆ ಮಾಡುವುದರಿಂದ ಸಂತೆಗೆ ಬರುವ ಜನರು ಜೀವ ಕೈಯಲ್ಲಿ ಹಿಡಿದು ಬರುವಂತಾಗಿದೆ. ಅಧಿಕಾರಿಗಳು ಶೀಘ್ರ ಈ ಬಗ್ಗೆ ಕ್ರಮವಹಿಸಿ, ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಲು ಆದೇಶ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಊರಿನ ಪ್ರಮುಖರಾದ ಮರಿಸಿದ್ದೇಗೌಡ, ವಿಶ್ವನಾಥ್ ಬಾಬು, ರಾಘವೇಂದ್ರ, ಹರೀಶ್, ಸತ್ಯನಾರಾಯಣ ಸಾರಳ್ಳಿ, ಕವೀಶ್, ಮಧು ದುರ್ಗಾ ಸೇರಿದಂತೆ ದೋಣಗುಡಿಗೆ, ಚೆಂಡಗೋಡು, ವಗಾರ್ ರಸ್ತೆಯ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.