ADVERTISEMENT

ಮತಕಳ್ಳತನ | ನ್ಯಾಯಾಂಗ ವ್ಯವಸ್ಥೆ ಹದಗೆಡಿಸಿದ ಬಿಜೆಪಿ: ಶಾಸಕ ಎಚ್.ಡಿ. ತಮ್ಮಯ್ಯ

ಸಹಿ ಸಂಗ್ರಹ ಅಭಿಯಾನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:52 IST
Last Updated 9 ಅಕ್ಟೋಬರ್ 2025, 5:52 IST
ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಸಹಿ ಸಂಗ್ರಹ ಅಭಿಯಾನ.
ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಸಹಿ ಸಂಗ್ರಹ ಅಭಿಯಾನ.   

ಚಿಕ್ಕಮಗಳೂರು: ದೇಶದಲ್ಲಿ ನಡೆಯುತ್ತಿರುವ ಮತಕಳ್ಳತನ ಪ್ರಕರಣ ತಡೆಯುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ಮತ್ತು ಸಹಿ ಸಂಗ್ರಹ ಅಭಿಯಾನ ನಡೆಸಿದರು.

ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಅಭಿಯಾನದ ಅಂಗವಾಗಿ ಆಜಾದ್ ಪಾರ್ಕ್‌ನಲ್ಲಿ ಸಮಾವೇಶಗೊಂಡ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಷ್ಟು ಹಿಂದಿನ ಯಾವ ಸರ್ಕಾರವೂ ಮಾಡಿಲ್ಲ. ಸಿಬಿಐ, ಇ.ಡಿ ಮತ್ತಿತರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ನ್ಯಾಯಾಂಗ ವ್ಯವಸ್ಥೆಯನ್ನೂ ಹದಗೆಡಿಸಿದೆ. ಈಗ ಮತಕಳ್ಳತನಕ್ಕೂ ಇಳಿದುಬಿಟ್ಟಿದೆ ಎಂಬುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಕ್ಷಿ ಸಮೇತ ಸಾಬೀತುಪಡಿಸಿದ್ದಾರೆ. ಮತದಾರರು ಜಾಗೃತರಾಗಬೇಕು’ ಎಂದರು.

ADVERTISEMENT

ಮುಖಂಡ ಎಂ.ಎಲ್. ಮೂರ್ತಿ, ‘ಮತಕಳ್ಳತನದ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ನಿನ್ನೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆಯುವ ಪ್ರಯತ್ನ, ಕೇರಳದಲ್ಲಿ ರಾಹುಲ್‌ಗಾಂಧಿಗೆ ಬೆದರಿಕೆ, ಹೀಗೆ ದೇಶದಲ್ಲಿ ಭಯದ ವಾತಾವರಣ ಕಾಣುತ್ತಿದ್ದೇವೆ’ ಎಂದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್, ಜಿಲ್ಲಾಧ್ಯಕ್ಷ ಅಂಶುಮಂತ್, ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದ ಸ್ವಾಮಿ, ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್, ಮಲ್ಲೇಶಸ್ವಾಮಿ, ಪ್ರವೀಣ್, ಹಿರೇಮಗಳೂರು ರಾಮಚಂದ್ರ ಇದ್ದರು.

ಸಹಿ ಸಂಗ್ರಹ ಅಭಿಯಾನ

ಆಲ್ದೂರು: ಮತಗಳ್ಳತನ ನಿಲ್ಲಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಹಿ ಸಂಗ್ರಹ ಅಭಿಯಾನವನ್ನು ಬುಧವಾರ ಆಯೋಜಿಸಲಾಗಿತ್ತು.

ಗ್ಯಾರಂಟಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಚ್‌.ಎಸ್‌. ಕೃಷ್ಣೇಗೌಡ ಮಾತನಾಡಿ, ‘ಬಿಜೆಪಿಯವರು ದೇಶದಾದ್ಯಂತ ನಡೆಸಿರುವ ಮತಗಳ್ಳತನ ಬಯಲಾಗಿದೆ. ಆರ್‌ಎಸ್‌ಎಸ್ ಮತ್ತು ಬಜರಂಗದಳದ ಮೂಲಕ ಹಿಂದೂ– ಮುಸ್ಲಿಂ ವಿಭಜನೆ ಮಾಡಿ ಆಳುವ ನೀತಿ ಅನುಸರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಲಿಗೆ ಮತಗಳ್ಳತನ ನಡೆದದ್ದೇ ಕಾರಣ’ ಎಂದರು.

ಮತಗಳ್ಳತನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಮತಪತ್ರದ ಮೂಲಕ  ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದರು.

ಮುಖಂಡ ನವರಾಜು ಎಚ್. ಮಾತನಾಡಿದರು. ಹೋಬಳಿ ಕಾರ್ಯದರ್ಶಿ ರವಿಚಂದ್ರ, ಪಂಚಾಯಿತಿ ಸದಸ್ಯೆ ಮಮತಾ ಗುರುಮೂರ್ತಿ, ಮುಖಂಡರಾದ ವಸಂತ್, ಲಕ್ಷ್ಮಣ ಗೌಡ, ಎ.ಯು. ಇಬ್ರಾಹಿಂ, ಈರೇಗೌಡ, ಕೆಂಚೇಗೌಡ, ಅಬ್ದುಲ್ ರೆಹಮಾನ್ ಅಂದ್ರು ಭಾಗವಹಿಸಿದ್ದರು.

‘ಕೇಂದ್ರ ಸರ್ಕಾರಕ್ಕೆ ಜನಪರ ಕಾಳಜಿಯಿಲ್ಲ’

ಶೆಟ್ಟಿಕೊಪ್ಪ (ನರಸಿಂಹರಾಜಪುರ): ‘ಬಿಜೆಪಿ ನೇತೃತ್ವದ ಕೇಂದ್ರದ ಸರ್ಕಾರಕ್ಕೆ ಜನಪರ ಕಾಳಜಿಯಿಲ್ಲ. ಅಭಿವೃದ್ಧಿ ಬಗ್ಗೆ ಚಿಂತೆಯಿಲ್ಲ. ಕೋಮು ಸಾಮರಸ್ಯವನ್ನು ಕದಡಿ ಧರ್ಮವನ್ನು ಒಡೆದು ಆಳುವುದೇ ಇದರ ಮುಖ್ಯ ಉದ್ದೇಶ’ ಎಂದು ಕೊಪ್ಪದ ಎಪಿಎಂಸಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ ಆರೋಪಿಸಿದರು.

ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಕೊಪ್ಪದಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ ಆಯೋಜಿಸಿದ್ದ ಮತಗಳ್ಳತನ ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಮಾತನಾಡಿದರು. ಪ್ರಚಾರ ಸಮಿತಿಯ ಅಧ್ಯಕ್ಷ ಗೇರುಬೈಲು ಎಲ್ದೊ ಮಾತನಾಡಿ ‘ಬಿಜೆಪಿ ಮತಗಳ್ಳತನ ಮಾಡಿರುವುದನ್ನು ರಾಹುಲ್ ಗಾಂಧಿ ಸಾಬೀತು ಮಾಡಿದ್ದಾರೆ. ಈ ವಿಚಾರದಲ್ಲಿ ಚುನಾವಣಾ ಆಯೋಗದ ನಿರ್ಲಕ್ಷ್ಯ ಸರಿಯಲ್ಲ’ ಎಂದರು.

ಗಾಂಧಿ ಗ್ರಾಮ ನಾಗರಾಜು ಜಿಲ್ಲಾ ಎಸ್.ಸಿ/ ಎಸ್.ಟಿ ದೌರ್ಜನ್ಯ ಸಮಿತಿಯ ಸದಸ್ಯ ಶೆಟ್ಟಿಕೊಪ್ಪ ಎಂ.ಮಹೇಶ್ ಮಾತನಾಡಿದರು. ಕಾಂಗ್ರೆಸ್ ಪಂಚಾಯಿತಿ ಘಟಕದ ಅಧ್ಯಕ್ಷ ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ ಉಪಾಧ್ಯಕ್ಷ ಸುನಿಲ್ ಕುಮಾರ್ ಸದಸ್ಯರಾದ ಚಂದ್ರಶೇಖರ್ ರವೀಂದ್ರ ಬೂತ್ ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಜೇಮ್ಸ್ ಪರಮೇಶ್ವರ್ ಕುಟ್ಟಪ್ಪ ಹಮೀದ್ ಇಬ್ರಾಹಿಂ ಸಜಿ ಪತ್ರೋಸ್ ಎ.ಬಿ.ಪ್ರಶಾಂತ್ ಯೋಗೀಶ್ ಸುಲೇಮಾನ್ ಹೂವಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.