ADVERTISEMENT

ಚಿಕ್ಕಮಗಳೂರು: ನೀರು ಬಿಕ್ಕಟ್ಟು; ಖರೀದಿ ಸಂಕಟ

ಬಿ.ಜೆ.ಧನ್ಯಪ್ರಸಾದ್
Published 12 ಮೇ 2019, 9:30 IST
Last Updated 12 ಮೇ 2019, 9:30 IST
ಖಾಸಗಿ ಟ್ಯಾಂಕರ್‌ನಿಂದ ಮನೆಯ ಸಂಪಿಗೆ ನೀರು ತುಂಬಿಸುತ್ತಿರುವುದು.
ಖಾಸಗಿ ಟ್ಯಾಂಕರ್‌ನಿಂದ ಮನೆಯ ಸಂಪಿಗೆ ನೀರು ತುಂಬಿಸುತ್ತಿರುವುದು.   

ಚಿಕ್ಕಮಗಳೂರು: ನಗರದಲ್ಲಿ ನೀರಿನ ಸಮಸ್ಯೆ ದಿನೇದಿನೇ ಬಿಗಡಾಯಿಸುತ್ತಿದ್ದು, ಕೆಲವು ಕಡೆ ಟ್ಯಾಂಕರ್‌ಗೆ ₹ 250ರಿಂದ 350 ಕೊಟ್ಟು ಖಾಸಗಿಯವರಿಂದ ಖರೀದಿಸುವಂತಾಗಿದೆ.

ನಗರಸಭೆಯಿಂದ ನಾಲ್ಕೈದು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ನೀರು ಒದಗಿಸಲಾಗುತ್ತಿದೆ. ಬಹಳಷ್ಟು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ನೀರಿಗಾಗಿ ಖಾಸಗಿ ಟ್ಯಾಂಕರ್‌ ಆಶ್ರಯಿಸುವಂತಾಗಿದೆ.

ನಗರದಲ್ಲಿ 50ಕ್ಕೂ ಹೆಚ್ಚು ಖಾಸಗಿ ಟ್ರಾಕ್ಟರ್‌ ಟ್ಯಾಂಕರ್‌ (3500 ರಿಂದ 4000 ಲೀಟರ್‌ ಸಾಮರ್ಥ್ಯ) ಇವೆ. ನಗರದ ವಿವಿಧೆಡೆ ಈಗ ಈ ಟ್ಯಾಂಕರ್‌ಗಳದ್ದೇ ಸದ್ದು. ಮನೆ, ಹೋಟೆಲ್‌, ಲಾಡ್ಜ್‌, ಅಂಗಡಿ, ಕಚೇರಿ... ಯಾರಾದರೂ ನೀರು ಬೇಕು ಎಂದು ಫೋನ್‌ ಮಾಡಿ ವಿಳಾಸ ತಿಳಿಸಿದರೆ ಕೆಲವೇ ಗಂಟೆಗಳಲ್ಲಿ ಒದಗಿಸುತ್ತಾರೆ. ಒಂದು ಟ್ರಾಕ್ಟರ್‌ ನಿತ್ಯ 10ರಿಂದ 15 ಟ್ಯಾಂಕರ್‌ ನೀರು ಪೂರೈಸುತ್ತಿವೆ.

ADVERTISEMENT

ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದಾಗಿ ಯಗಚಿ ನೀರು ಪೂರೈಕೆಯಲ್ಲಿ ಏರುಪೇರಾಗುವುದು, ರಾಮನಹಳ್ಳಿಯ ‘ಫಿಲ್ಟರ್‌ ಬೆಡ್‌’ ದುರಸ್ತಿಗಾಗಿ ಹಿರೇಕೊಳಲೆ ಕೆರೆ ನೀರು ಸರಬರಾಜು ಸ್ಥಗಿತಗೊಳಿಸಿರುವುದು, ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿರುವುದು ಸಮಸ್ಯೆಗೆ ಎಡೆಮಾಡಿದೆ. ಜನ ಸಂಕಷ್ಟ ಪಡುವಂತಾಗಿದೆ.

‘ನೀರಿನ ಸಮಸ್ಯೆ ವಿಪರೀತವಾಗಿದೆ. ‘ಫಿಲ್ಟರ್‌ ಬೆಡ್‌’ ರಿಪೇರಿ ಕಾಮಗಾರಿ ಈಗ ಕೈಗೆತ್ತಿಕೊಂಡಿರುವುದರಿಂದ ರಾಮನಹಳ್ಳಿ, ಗೌರಿ ಕಾಲುವೆ, ವಿಜಯಪುರ, ಕಾಳಿದಾಸ ನಗರ ಭಾಗದವರು ಪರದಾಡುವಂತಾಗಿದೆ. ದುಡ್ಡು ಕೊಟ್ಟು ಖಾಸಗಿ ಟ್ಯಾಂಕರ್‌ ನೀರು ಖರೀದಿಸಬೇಕಾಗಿದೆ. ನಗರಸಭೆಯವರು ಸಮಸ್ಯೆ ಪರಿಹಾರಕ್ಕೆ ಗಮನ ಹರಿಸುತ್ತಿಲ್ಲ’ ಎಂದು ರಾಮನಹಳ್ಳಿ ನಿವಾಸಿ ಶಿವಾನಂದಪ್ಪ ದೂಷಿಸಿದರು.

ನಗರಕ್ಕೆ ನಿತ್ಯ 18 ಎಂಎಲ್‌ಡಿ ನೀರು ಅಗತ್ಯ ಇದೆ. ನಗರಸಭೆ ಅಂಕಿಅಂಶ ಪ್ರಕಾರ ಪ್ರಸ್ತುತ ಯಗಚಿ ಮತ್ತು ಕೊಳವೆ ಬಾವಿಗಳಿಂದ 12 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಹಿರೇಕೊಳಲೆ ಕೆರೆಯಿಂದ ನಿತ್ಯ ಎರಡು ಎಂಎಲ್‌ಡಿ ನೀರು ಪೂರೈಕೆಯಾಗುತ್ತಿತ್ತು. ‘ಫಿಲ್ಟರ್‌ ಬೆಡ್‌’ ರಿಪೇರಿ ಕಾಮಗಾರಿ ನಿಮಿತ್ತ ಎರಡು ತಿಂಗಳು ಈ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

‘ಕೊಳವೆ ಬಾವಿಗಳಿಂದ ನೀರು ತರುತ್ತೇವೆ. ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಒಂದು ದಿನಕ್ಕೆ 10ರಿಂದ15 ಟ್ಯಾಂಕರ್‌ ಪೂರೈಸಲು ಸಾಧ್ಯ. ಒಂದು ಟ್ಯಾಂಕರ್‌ಗೆ ₹ 250 ಪಡೆಯುತ್ತವೆ. ನೀರು ತಂದುಕೊಡಿ ಎಂದು ಒಮ್ಮೊಮ್ಮೆ ದಿನಕ್ಕೆ 20ರಿಂದ 30 ಫೋನ್‌ಗಳು ಬರುತ್ತವೆ. ಬಹುತೇಕ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ’ ಎಂದು ಕಾವೇರಿ ವಾಟರ್ ಸಪ್ಲೈನ ದಿನೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ತಿಂಗಳಿನಿಂದ ಪೋನ್‌ ಕರೆಗಳು ಹೆಚ್ಚು ಬರುತ್ತಿವೆ. ಟ್ಯಾಂಕರ್‌ಗೆ ನೀರು ತುಂಬಿಸಿಕೊಳ್ಳಲು ಕೊಳವೆ ಬಾವಿಯವರಿಗೆ ನಾವು ದುಡ್ಡು ಕೊಡಬೇಕು. ಒಂದು ಟ್ಯಾಂಕರ್‌ಗೆ ₹ 250 ರಿಂದ 350ರವರೆಗೆ ಚಾರ್ಜ್‌ ಮಾಡುತ್ತೇವೆ’ ಎಂದು ಶ್ರೀರಾಮ್ ವಾಟರ್‌ ಸಪ್ಲೈನ ಪ್ರಕಾಶ್‌ ತಿಳಿಸಿದರು.

‘ನಗರದ 25 ವಾರ್ಡ್‌ಗಳಿಗೆ ನಾಲ್ಕು ದಿನಕ್ಕೊಮ್ಮೆ, ಉಳಿದ 10 ವಾರ್ಡ್‌ಗಳಿಗೆ ಮೂರು ದಿನಗಳಿಗೊಮ್ಮ ನೀರು ಪೂರೈಸಲಾಗುತ್ತಿದೆ. ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದಾಗಿ ಯಗಚಿ ನೀರು ಪೂರೈಕೆಯಲ್ಲಿ ಕೆಲವೊಮ್ಮೆ ಏರುಪೇರಾಗುತ್ತದೆ. ಈಗ ಪ್ರತಿದಿನ 6 ಎಂಎಲ್‌ಡಿ ನೀರಿನ ಕೊರತೆಯಾಗುತ್ತಿದೆ’ ಎಂದು ನಗರಸಭೆ ಎಂಜಿನಿಯರ್‌ ಎಂ.ವಿ.ಲೋಕೇಶ್‌ ತಿಳಿಸಿದರು.

‘ನಗರದಲ್ಲಿ 238 ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ 10 ಕೊಳವೆ ಬಾವಿ ಕೊರೆಸಲು ಕ್ರಮ ವಹಿಸಲಾಗಿದೆ. ಹಾಲೇನಹಳ್ಳಿ, ಗವನಹಳ್ಳಿ, ಉಂಡೇದಾಸರಹಳ್ಳಿ, ವಿಜಯಪುರ ಮೊದಲಾದ ಕಡೆಗಳಲ್ಲಿ ಕೊಳವೆಬಾವಿ ಕೊರೆಸಲು ಪಾಯಿಂಟ್‌ ಗುರುತಿಸಲಾಗಿದೆ’ ಎಂದು ಅವರು ತಿಳಿಸಿದರು.

* ನಗರಸಭೆಯ ಒಂದು ಟ್ಯಾಂಕರ್‌ ಜತೆಗೆ ನಾಲ್ಕು ಖಾಸಗಿ ಟ್ಯಾಂಕರ್‌ ಬಾಡಿಗೆಗೆ ಪಡೆಯಲಾಗಿದೆ. ತೀವ್ರ ಸಮಸ್ಯೆ ಇರುವ ಕಡೆಗಳಿಗೆ ಟ್ಯಾಂಕರ್‌ನಲ್ಲಿ ಪೂರೈಸಲಾಗುತ್ತಿದೆ. ನಿತ್ಯ ಸುಮಾರು 40 ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ನೀರು ನಿರ್ವಹಣೆಗೆ ಆದ್ಯ ಗಮನ ಹರಿಸಲಾಗಿದೆ.

–ಕೆ.ಪರಮೇಶಿ, ಆಯುಕ್ತರು, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.