ADVERTISEMENT

ಬಾಳೆಹೊನ್ನೂರು: ಪುಂಡಾನೆ ಸೆರೆಗೆ ಕಾರ್ಯಾಚರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:07 IST
Last Updated 20 ಫೆಬ್ರುವರಿ 2026, 4:07 IST
<div class="paragraphs"><p>ಬಾಳೆಹೊನ್ನೂರು ಸಮೀಪದ ಹ್ಯಾರಂಬಿ ಪುರದ ಬಳಿ ಪುಂಡಾನೆ ಸೆರೆಗೆ ವಿವಿಧ ಕಡೆಗಳಿಂದ ಬಂದ ಸಾಕಾನೆಗಳಿಗೆ ಪೂಜೆ ಸಲ್ಲಿಸಲಾಯಿತು</p></div>

ಬಾಳೆಹೊನ್ನೂರು ಸಮೀಪದ ಹ್ಯಾರಂಬಿ ಪುರದ ಬಳಿ ಪುಂಡಾನೆ ಸೆರೆಗೆ ವಿವಿಧ ಕಡೆಗಳಿಂದ ಬಂದ ಸಾಕಾನೆಗಳಿಗೆ ಪೂಜೆ ಸಲ್ಲಿಸಲಾಯಿತು

   

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಹ್ಯಾರಂಬಿ ಪುರದಲ್ಲಿ ಎರಡು ದಿನಗಳ ಹಿಂದೆ ಕಾರ್ಮಿಕನ ಸಾವಿಗೆ ಕಾರಣವಾಗಿದ್ದ ಪುಂಡಾನೆ ಸೆರೆಗೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆ, ಗುರುವಾರ ಬೆಳಿಗ್ಗೆ ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಯಿತು.

ಬಾಳೆಹೊನ್ನೂರು ವಲಯದ ಹ್ಯಾರಂಬಿ, ಪುರ, ಕಡವಂತಿ, ಬೆರಳಗೋಡು ಗ್ರಾಮದಲ್ಲಿ ಸಂಚರಿಸುತ್ತಿರುವ ಮೂರು ಆನೆಗಳ ಪೈಕಿ ಒಂದು ಆನೆ ಸೆರೆ ಹಿಡಿಯಲು ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶ ನೀಡಿದ ಹಿನ್ನೆಲೆ ಸಕ್ರೆಬೈಲು, ಮತ್ತಿಗೋಡು, ಮಡಿಕೇರಿ ದುಬಾರೆ ಆನೆ ಶಿಬಿರದಿಂದ ಒಟ್ಟು ಏಳು ಆನೆಗಳನ್ನು ಬುಧವಾರ ರಾತ್ರಿ ಲಾರಿ ಮೂಲಕ ಹ್ಯಾರಂಬಿ ಪುರಕ್ಕೆ ತರಲಾಯಿತು. ಬೆಳಿಗ್ಗೆ ಅವುಗಳಿಗೆ ಪೂಜೆ ಸಲ್ಲಿಸಿದ ನಂತರ ಕಾರ್ಯಾಚರಣೆಗೆ ಸುಮಾರು 70ಕ್ಕೂ ಅಧಿಕ ಸಿಬ್ಬಂದಿಗಳೊಂದಿಗೆ ಕಾಡಿಗೆ ತೆರಳಿದವು.

ADVERTISEMENT

ಹ್ಯಾರಂಬಿ ಬಳಿಯ ಕಾಡಿನಲ್ಲಿ ಪುಂಡಾನೆ ಕಾಣಿಸಿಕೊಂಡಿದೆ. ಆದರೆ, ಅದು ಎತ್ತರ ಪ್ರದೇಶದಲ್ಲಿದ್ದ ಕಾರಣ ಅರಿವಳಿಕೆ ಚುಚ್ಚುಮದ್ದು ನೀಡಿದಲ್ಲಿ ಗುಡ್ಡದಿಂದ ಇಳಿಯುವ ವೇಳೆ ಪ್ರಾಣಕ್ಕೆ ಆಪಾಯವಾಗಬಹುದಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಗುಡ್ಡದಿಂದ ಆನೆ ಕೆಳಗಿಳಿದು ಬಂದ ನಂತರ ಕಾರ್ಯಾಚರಣೆ ನಡೆಸಲು ಸಿಬ್ಬಂದಿ ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

‘ಕಾರ್ಯಾಚರಣೆಯಲ್ಲಿ ನಾಗರಹೊಳೆ ಟೈಗರ್ ರಿಸರ್ವ ವಿಭಾಗದ ಡಾ. ರಮೇಶ್, ಮಂಗಳೂರು ವೃತ್ತದ ಡಾ. ಯಶಸ್ವಿ, ಶಾರ್ಪ ಶೂಟರ್ ರಂಜನ್ ಬಂದಿದ್ದು ಆನೆ ಹಿಡಿಯಲು ಸಹಕರಿಸಿದ್ದಾರೆ. ಬಾಳೆಹೊನ್ನೂರಿನ ಎಸಿಎಫ್ ಮೋಹನ್ ಕುಮಾರ್, ಆರ್‌ಎಫ್‌ಒ ಮಂಜುನಾಥ್, ಶೃಂಗೇರಿಯ ಮಧುಕರ್, ಇಟಿಎಸ್ ಸಿಬ್ಬಂದಿ ಸೇರಿದಂತೆ ಒಟ್ಟು 70ಕ್ಕೂ ಅಧಿಕ ಜನ ಭಾಗವಹಿಸಿದ್ದಾರೆ. ಒಂದು ಆನೆ ಸೆರೆಗೆ ಹಾಗೂ ಒಂದು ಆನೆಗೆ ರೇಡಿಯೊ ಕಾಲರ್ ಅಳವಡಿಸಲು ನೀಡಿದ್ದಾರೆ’ ಎಂದು ಕೊಪ್ಪ ಡಿಎಫ್‍ಒ ಶಿವಶಂಕರ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.