
ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪ, ಕುಸುಬೂರು ಕಾಲೊನಿ, ಸಾತ್ಕೋಳಿ, ಆರಂಬಳ್ಳಿ, ಎಕ್ಕಡ ಬಯಲು ಮುಂತಾದ ಗ್ರಾಮಗಳ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಗ್ರಾಮಸ್ಥರು ಬೆಳಿಗ್ಗೆಯೂ ಸಂಚಾರ ಮಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಹೊಸಕೊಪ್ಪ ಗ್ರಾಮದ ನಿವೃತ್ತ ಯೋಧ ಬಿ.ಟಿ. ಯತಿರಾಜ್ ಅವರು ಭಾನುವಾರ ತಮ್ಮ ತೋಟದಲ್ಲಿ ಕಾಡಾನೆಗಳು ಮುರಿದು ಹಾಕಿದ ಐಬಿಕ್ಸ್ ಬೇಲಿಯನ್ನು ದುರಸ್ತಿಪಡಿಸಲು ಕೆಲಸಗಾರರನ್ನು ಕರೆದುಕೊಂಡು ಹೋಗಿದ್ದರು. ಬೇಲಿ ದುರಸ್ತಿಪಡಿಸುವಾಗ ತೋಟದ ಪಕ್ಕದಲ್ಲಿರುವ ಕೆರೆಗೆ ಕಾಡಂಚಿನಿಂದ ಮರಿ ಆನೆಯೂ ಸೇರಿದಂತೆ 10 ಕಾಡಾನೆಗಳು ನೀರು ಕುಡಿಯಲು ಬಂದಿದ್ದವು. ಇದರ ಜತೆಗೆ ಅರಣ್ಯದಲ್ಲಿ ಬೇರೆ ಐದಾರೂ ಕಾಡಾನೆಗಳ ಹಿಂಡು ಬಿದಿರು ಹಾಗೂ ಮರದ ತೊಗಟೆಗಳನ್ನು ತಿನ್ನುತ್ತಿರುವುದು ಕಂಡು ಬಂದಿದೆ. ಇದರಿಂದ ಭಯ ಭೀತರಾಗಿ ಬೇಲಿ ದುರಸ್ತಿ ಪಡಿಸುವುದನ್ನು ಬಿಟ್ಟು ಹಿಂದಿರುಗಿದ್ದಾರೆ.
ಅರಣ್ಯದಿಂದ ಕಾಡಾನೆಗಳು ಗ್ರಾಮಕ್ಕೆ ಬರದಂತೆ ಕೆಲವು ಕಡೆ 400 ಮೀಟರ್‌ಗೂ ಅಧಿಕ ಆನೆ ಕಂದಕ ನಿರ್ಮಿಸಲಾಗಿದೆ. ಆನೆ ಕಂದಕ ನಿರ್ಮಿಸಿರದ ಸ್ಥಳದಿಂದ ಗ್ರಾಮದ ವ್ಯಾಪ್ತಿಗೆ ಬರುವ ಕಾಡಾನೆಗಳು, ರಸ್ತೆ ಹಾದು ಹೋಗುವ ಪಕ್ಕದ ಅರಣ್ಯದಲ್ಲೇ ಬೀಡು ಬಿಡುತ್ತವೆ. ಶಾಲಾ ಮಕ್ಕಳು, ಗ್ರಾಮಸ್ಥರು, ಕೂಲಿ ಕಾರ್ಮಿಕರನ್ನು ಕೆಲವು ಬಾರಿ ಓಡಿಸಿಕೊಂಡು ಬಂದ ನಿದರ್ಶನಗಳಿವೆ ಎನ್ನುತ್ತಾರೆ ಗ್ರಾಮಸ್ಥರು.
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಹಲವು ಗ್ರಾಮಗಳು, ಆರಂಬಳ್ಳಿ ಮೀಸಲು ಅರಣ್ಯದ ವ್ಯಾಪ್ತಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ತೋಟಕ್ಕೆ ನೀರು ಹಾಯಿಸಲು ಹೋಗಲು ಸಹ ಭಯಪಡುವ ಸ್ಥಿತಿಯಿದೆ. ಕೂಲಿ ಕಾರ್ಮಿಕರು ಕಾಡಾನೆಗಳ ಭಯದಿಂದ ಕೆಲಸಕ್ಕೆ ಬರಲು ಹಿಂಜರಿಯುತ್ತಾರೆ. ಕೆಲಸಕ್ಕೆ ಕರೆದುಕೊಂಡು ಬರಲು ನಮಗೂ ಹೆದರಿಕೆಯಾಗುತ್ತದೆ. ರಾತ್ರಿ ವೇಳೆ ಐಬಿಎಕ್ಸ್ ಚಾಲನೆಯಲ್ಲಿರುವುದರಿಂದ ಕಾಡಾನೆಗಳು ತೋಟಕ್ಕೆ ಬರುವುದಿಲ್ಲ. ಬೆಳಿಗ್ಗೆ ವೇಳೆ ಐಬಿಎಕ್ಸ್ ಚಾಲನೆಯಲ್ಲಿ ಇಲ್ಲದಿರುವುದರಿಂದ ತಂತಿ ಮುರಿದು ಹಾಕುತ್ತವೆ. ಅರಣ್ಯದಲ್ಲಿ ಕಾಡಾನೆಗಳಿಗೆ ಆಹಾರವಿಲ್ಲವಾಗಿದೆ. ಮರದ ತೊಗಟೆಯನ್ನು ಮುರಿದು ತಿನ್ನುತ್ತಿವೆ. ತೋಟಕ್ಕೆ ದಾಳಿ ಮಾಡುವ ಭಯ ಕಾಡುತ್ತಿದೆ ಎಂದು ನಿವೃತ್ತ ಯೋಧ ಬಿ.ಟಿ. ಯತಿರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕಾಡಾನೆಗಳ ಉಪಟಳ ಹೆಚ್ಚಾಗಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ಎಚ್ಚರಿಕೆಯಿಂದ ಇರುವಂತೆ. ರಾತ್ರಿ ವೇಳೆ ಓಡಾಟ ನಡೆಸದಂತೆ ಅರಣ್ಯ ಇಲಾಖೆಯವರು ಧ್ವನಿವರ್ಧಕದ ಮೂಲಕ ಹಾಗೂ ವ್ಯಾಟ್ಸ್ ಆ್ಯಪ್ ಸಂದೇಶವನ್ನು ಸಹ ಗ್ರಾಮಸ್ಥರಿಗೆ ರವಾನಿಸಿದ್ದಾರೆ. ಕಾಡಾನೆಗಳು ಗ್ರಾಮಕ್ಕೆ ಬೆಳಿಗ್ಗೆ ವೇಳೆಯೇ ಬರುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.