ಕೆರೆಗದ್ದೆ(ನರಸಿಂಹರಾಜಪುರ): ತಾಲ್ಲೂಕಿನ ಸೀತೂರು ಗ್ರಾಮದ ಕೆರೆಗದ್ದೆಯ ಪಾಳು ಬಿದ್ದ ಜಮೀನಿಗೆ ಎರಡು ಕಾಡಾನೆಗಳು ಗುರುವಾರ ಬೆಳಗಿನ ಜಾವ ಬಂದು ಸೇರಿಕೊಂಡಿದ್ದು ಸಂಜೆಯವರೆಗೂ ಹೊರ ಬರಲಿಲ್ಲ.
ಕೆರೆಗದ್ದೆಯ ವಿಶ್ವನಾಥ ಆಚಾರ್ ಅವರಿಗೆ ಸೇರಿದ ಜಮೀನಿನಲ್ಲಿ ಬಿದಿರು, ಪೊದೆ ಬೆಳೆದುಕೊಂಡಿದ್ದು ಕಾಡಾನೆಗಳು ಬೆಳಗಿನ ಜಾವವೇ ಬಂದು ಸೇರಿಕೊಂಡಿದೆ. ಕೆಲವು ಗ್ರಾಮಸ್ಥರು ಇದನ್ನು ನೋಡಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಒಂದು ದೊಡ್ಡಾನೆ ಹಾಗೂ ಇನ್ನೊಂದು ಮರಿ ಆನೆಯು ಇದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.
ಕೊಪ್ಪ ಉಪ ಅರಣ್ಯಾಧಿಕಾರಿ ರಘು, ಗಸ್ತು ಅರಣ್ಯಪಾಲಕರಾದ ರವಿಕುಮಾರ್, ದಿನೇಶ್, ಆನೆ ಕಾರ್ಯಾಪಡೆ ತಂಡದವರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಸ್ಥಳೀಯರು ಕಾಡಾನೆಗಳು ಇರುವ ಜಾಗಕ್ಕೆ ಹೋಗದಂತೆ ನಿಗಾ ವಹಿಸಿದ್ದರು. ಆದರೆ, ಸಂಜೆಯವರೆಗೂ ಕಾಡಾನೆಗಳು ಆ ಜಾಗ ಬಿಟ್ಟು ಹೊರಗೆ ಬಂದಿರಲಿಲ್ಲ.
ಕಾಡಾನೆಗಳು ಬಂದಾಗ ಯಾರೂ ಹತ್ತಿರ ಹೋಗಬಾರದು. ಪೋಟೋ ತೆಗೆಯುವ ಪ್ರಯತ್ನ ಮಾಡಬಾರದು. ಮನೆಯಿಂದ ಹೊರಬರಬಾರದು. ಕಾಡಾನೆಗಳು ಕಂಡು ಬಂದರೆ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಬೇಕು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.