ADVERTISEMENT

ಚಿಕ್ಕಮಗಳೂರು | 'ವಿಜ್ಞಾನ ಕ್ಷೇತ್ರಕ್ಕೆ ಒತ್ತು ನೀಡಲು ಸಲಹೆ'

ವಿಶ್ವ ಬಾಹ್ಯಕಾಶ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿದ ಎ.ಎನ್.ಮಹೇಶ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 5:56 IST
Last Updated 10 ಅಕ್ಟೋಬರ್ 2025, 5:56 IST
ನಗರದ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮವನ್ನು ಅತಿಥಗಳು ಉದ್ಘಾಟಿಸಿದರು
ನಗರದ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮವನ್ನು ಅತಿಥಗಳು ಉದ್ಘಾಟಿಸಿದರು   

ಚಿಕ್ಕಮಗಳೂರು: ವಿಜ್ಞಾನಿಗಳಿಗೆ ಸಮಾಜದಲ್ಲಿ ಗೌರವದ ಸ್ಥಾನವಿದ್ದು, ಕೆಲವರು ತಮ್ಮ ಜೀವನವನ್ನು ಬಾಹ್ಯಕಾಶದ ಸೇವೆಗೆ ಮೀಸಲಿಟ್ಟು ರಾಷ್ಟ್ರದ ಘನತೆ ಹೆಚ್ಚಿಸಿದ್ದಾರೆ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.

ಭಾರತೀಯ ಬಾಹ್ಯಕಾಶ ಕೇಂದ್ರ, ಟೌನ್ ಮಹಿಳಾ ಸಮಾಜ ಸಮೂಹ ಶಿಕ್ಷಣ ಸಂಸ್ಥೆ, ತಕ್ಷ್ ಅಕಾಡೆಮಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ನಗರದ ರೋಟರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಬಾಹ್ಯಕಾಶ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಜನತೆ ವಿಜ್ಞಾನ ಕ್ಷೇತ್ರಕ್ಕೆ ಒತ್ತು ನೀಡುತ್ತಿಲ್ಲ. ವೈಯಕ್ತಿಕ ಕುಟುಂಬದ ಆಲೋಚನೆಯಲ್ಲಿ ವೇತನಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆ ಸಂಬಂಧ ಇಸ್ರೊದಿಂದ ವಿಜ್ಞಾನದ ಸಮಗ್ರ ಮಾಹಿತಿ ಪರಿಚಯಿಸಲು ಸಪ್ತಾಹ ಆಚರಿಸಿ ಬಾಹ್ಯಕಾಶದ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

1962ರಲ್ಲಿ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರು ಸಂಶೋಧಕರೊಂದಿಗೆ ಚರ್ಚಿಸಿ ಇಸ್ರೋ ಪ್ರಾರಂಭಿಸಿದರು. ಚಂದ್ರಯಾನ, ಮಂಗಳಯಾನ ಹಾಗೂ ರಾಕೆಟ್ ಉಡಾವಣೆಗಳಂಥ ಕಾರ್ಯಕ್ರಮಗಳಿಗೆ ವಿಜ್ಞಾನಿಗಳ ಕಠಿಣ ಪರಿಶ್ರಮ ಹಾಗೂ ತಂತ್ರಜ್ಞಾನವೇ ಕಾರಣವಾಗಿದೆ ಎಂದು ತಿಳಿಸಿದರು.

ಸಾಧಕರ ಬದುಕನ್ನು ಆದರ್ಶವಾಗಿಟ್ಟುಕೊಂಡು ಯುವವಿಜ್ಞಾನಿಗಳು ವಿಜ್ಞಾನ ಜಗತ್ತಿಗೆ ಹೆಜ್ಜೆ ಹಾಕಬೇಕು. ಮಕ್ಕಳಿಗೆ ಪಠ್ಯದ ಚಟುವಟಿಕೆ ಜೊತೆಗೆ ಬಾಹ್ಯಕಾಶದ ಚಟುವಟಿಕೆ ಪರಿಚಯಿಸಲು ಇಸ್ರೊ ಮುಂದಾಗಿದ್ದು, ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ರಸಪ್ರಶ್ನೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಈ ಸಾಧನೆಗೆ ಗುರುಗಳು, ಪಾಲಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಆರ್.ರುದ್ರಪ್ಪ ಮಾತನಾಡಿ, ಸಮಾಜದಲ್ಲಿ ವಿಜ್ಞಾನಿಗಳ ಸಂಖ್ಯೆ ಇಳಿಕೆಯಾಗಿ ವೈದ್ಯ ಹಾಗೂ ಎಂಜಿನಿಯರ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಮಕ್ಕಳಲ್ಲಿ ಬಾಹ್ಯಕಾಶದ ಕುತೂಹಲವನ್ನು ಮೂಡಿಸಿ ಪ್ರೇರೇಪಿಸಬೇಕು. ಮೊಬೈಲ್ ರೀಲ್ಸ್‌ಗಳ ವ್ಯಕ್ತಿಗಳನ್ನು ಅನುಸರಿಸದೆ ವಿಜ್ಞಾನ ಕ್ಷೇತ್ರದ ಸಾಧಕರನ್ನು ನಾಯಕರೆಂದು ಭಾವಿಸಬೇಕು. ಇಂದಿನ ದಿನಗಳಲ್ಲಿ ಯುವಸಮೂಹ ಶೇ 2ರಷ್ಟು ಮಾತ್ರ ಮಿದುಳಿಗೆ ಕೆಲಸ ಕೊಡುತ್ತಿದ್ದು, ಈ ಬಗ್ಗೆ ಅವಲೋಕಿಸಬೇಕು ಎಂದು ಹೇಳಿದರು.

ಭಾರತೀಯ ಬಾಹ್ಯಕಾಶ ಸಂಸ್ಥೆ ವಿಜ್ಞಾನಿ ಸೌಭಾಗ್ಯ ಮಾತನಾಡಿ, ಮಾನವ ಸ್ಥಿತಿಯ ಸುಧಾರಣೆಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಗಳನ್ನು ಆಚರಿಸಲು 1999ರಲ್ಲಿ ವಿಶ್ವ ಬಾಹ್ಯಾಕಾಶ ದಿನ ಘೋಷಿಸಿ ವಿಶ್ವದ ಅತಿದೊಡ್ಡ ಬಾಹ್ಯಾಕಾಶ ಕಾರ್ಯಕ್ರಮ ರೂಪುಗೊಂಡಿತು ಎಂದು ಹೇಳಿದರು.

ಬಾಹ್ಯಕಾಶ ಸಂಶೋಧನೆಯು ನಮ್ಮ ಜೀವನವನ್ನು ಸುಧಾರಿಸಲು ಹಾಗೂ ಅವಕಾಶಗಳನ್ನು ಸೃಷ್ಟಿಸಲು ಸಹಾಯಕವಾಗಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಯುವಕರ ಆಸಕ್ತಿಯನ್ನು ಉತ್ತೇಜಿಸಲು ಸಪ್ತಾಹ ಒಂದು ವೇದಿಕೆಯಾಗಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜು ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದ ಜೊತೆಗೆ ಪರಿಸರ ಪ್ರಜ್ಞೆ ಮೂಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಹೆಚ್ಚಳಗೊಳ್ಳುತ್ತಿರುವ ಪರಿಣಾಮ ಪರಿಸರಕ್ಕೆ ಹಾನಿಯಾಗುತ್ತಿದ್ದು, ಮುಂದಿನ ಯುವಜನತೆಗೆ ಸರಿಪಡಿಸುವ ಮಾರ್ಗ ತಿಳಿಸಬೇಕು ಎಂದರು.

ವಿವಿಧ ಶಾಲೆಗಳಿಂದ ಆಗಮಿಸಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಸಪ್ರಶ್ನೆ, ಆಶುಭಾಷಣ, ಚಿತ್ರಕಲೆ ಹಾಗೂ ಜ್ಞಾಪಕಶಕ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ರೋಟರಿ ಅಧ್ಯಕ್ಷ ಎನ್.ಪಿ.ಲಿಖಿತ್, ಟಿಎಂಎಸ್ ಕಾರ್ಯದರ್ಶಿ ಟಿ.ಈ.ಶುಭದ, ಪ್ರಾಂಶುಪಾಲ ಇಂದ್ರೇಶ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಚೇತನ್‌ಕುಮಾರ್, ಮುಖ್ಯಶಿಕ್ಷಕ ಎಂ.ಎಸ್.ನಟರಾಜ್ ಭಾಗವಹಿಸಿದ್ದರು.

ವಿಜ್ಞಾನ ಕ್ಷೇತ್ರದ ಸಾಧಕರನ್ನು ಆದರ್ಶವಾಗಿರಿಸಿಕೊಳ್ಳಲು ಸಲಹೆ ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಪರಿಸರ ಉಳಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.