ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್ ಹಳಿತಪ್ಪಿದೆ: ಡಿ.ಕೆ.ತಾರಾದೇವಿ

ನಾಯಕರ ಸ್ವ ಹಿತಾಸಕ್ತಿಯಿಂದ ಪಕ್ಷ ಸಂಘಟನೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 14:22 IST
Last Updated 25 ಮೇ 2019, 14:22 IST
ಡಿ.ಕೆ.ತಾರಾದೇವಿ
ಡಿ.ಕೆ.ತಾರಾದೇವಿ   

ಚಿಕ್ಕಮಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಹಳಿತಪ್ಪಿದ್ದು, ನಾಯಕರು ಮುಕ್ತಮನಸ್ಸಿನಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಇಲ್ಲಿ ಶನಿವಾರ ಒತ್ತಾಯಿಸಿದರು.

ಪಕ್ಷದ ರಾಜ್ಯ ನಾಯಕರ ಸ್ವಯಂಕೃತ ಅಪರಾಧದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಾರ್ಯಕರ್ತರು ಮತ್ತು ಮತದಾರರು ಪಕ್ಷದಲ್ಲಿಯೇ ಬಿದ್ದಿರುತ್ತಾರೆ ಎನ್ನುವ ಧೋರಣೆ ಹಾಗೂ ನಾಯಕರ ಸ್ವ ಹಿತಾಸಕ್ತಿಯಿಂದಾಗಿ ಪಕ್ಷ ಚಿಂತಾಜನಕ ಸ್ಥಿತಿಯಲ್ಲಿದೆ. ಉತ್ತಮ ಸಮಾಜಕ್ಕೆ ಕಾಂಗ್ರೆಸ್ ಬೇಕು ಎನ್ನುವ ಉದ್ದೇಶದಿಂದ ನಾಯಕರು ಪಕ್ಷ ಕಟ್ಟುತ್ತಿಲ್ಲ. ಗುಂಪುಗಾರಿಕೆ ನಡೆಸಲು ಬೆಂಬಲಿಗರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.

‘ಕಾಂಗ್ರೆಸ್‌ ಹೋರಾಟ, ಚಿಂತನೆ, ಸಿದ್ಧಾಂತಗಳಿಗೆ ದೇಶದಲ್ಲಿ ಬೆಲೆ ಇದೆ.ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಅದರ ಪರಿಣಾಮವಾಗಿ ಪಕ್ಷದ ಮೇಲೆ ಅವರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ದಿನೆ ದಿನೇ ಪಕ್ಷದ ಅಸ್ಥಿತ್ವ ಕುಂದುತ್ತಿದೆ ಎನ್ನುವ ಭಾವನೆ ಕಾರ್ಯಕರ್ತರಲ್ಲಿ ಮೂಡುತ್ತಿದೆ’ ಎಂದರು.

ADVERTISEMENT

ಸಮ್ಮಿಶ್ರ ಸರ್ಕಾರ ರಚನೆ ಮಾಡುವುದು ತಪ್ಪಲ್ಲ. ದೇಶದ ವಿವಿಧೆಡೆ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿವೆ. ಪರಸ್ಪರ ನಂಬಿಕ, ಹಿತ, ರಾಜ್ಯದ ಅಭಿವೃದ್ಧಿ ಆಧಾರದಲ್ಲಿ ಸರ್ಕಾರ ನಡೆಯಬೇಕು. ಆದರೆ ಈಗಿರುವ ಸಮ್ಮಿಶ್ರ ಸರ್ಕಾರ ಅಧಿಕಾರದ ಫಲ ಉಣಲು ಸೀಮಿತವಾಗಿದೆ. ಎರಡು ಪಕ್ಷಗಳ ನಾಯಕರ ಕಚ್ಚಾಟ, ಆರೋಪಗಳನ್ನು ನೋಡಿ, ಲೋಕಸಭೆ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಿದ್ದಾರೆ ಎಂದರು.

ಪಕ್ಷದ ರಾಜ್ಯ ನಾಯಕರ ಪಿತೂರಿಯಿಂದ ಜಿಲ್ಲೆಯಲ್ಲಿ 15 ವರ್ಷಗಳಿಂದ ಪಕ್ಷಕ್ಕೆ ಸಮರ್ಥ ನಾಯಕತ್ವದ ಕೊರತೆ ಎದುರಾಗಿದೆ. ಪಕ್ಷ ಗೆಲ್ಲದಿದ್ದರೂ ಅವರಿಗೆ ಚಿಂತೆ ಇಲ್ಲ. ಬೆಂಬಲಿಗರನ್ನು ಮಾತ್ರ ಪ್ರೋತ್ಸಾಹಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜೆಡಿಎಸ್‌ನವರಿಗೆ ಉಡುಪಿಯಲ್ಲಿ ಕಾರ್ಯಕರ್ತರಿಲ್ಲ. ಚಿಕ್ಕಮಗಳೂರಿನಲ್ಲಿ ದೊಡ್ಡ ಮಟ್ಟದ ಅಸ್ಥಿತ್ವ ಇಲ್ಲ. ಹೀಗಿರುವಾಗ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಟ್ಟುಕೊಡುವಂತೆ ಜೆಡಿಎಸ್‌ನವರು ಬಹಳ ಆಸಕ್ತಿಯಿಂದ ಕೇಳಿರಲು ಸಾಧ್ಯವಿಲ್ಲ. ಕೆಲವರ ಸ್ವ ಹಿತಾಸಕ್ತಿಯಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಜೆಡಿಎಸ್‌ಗೆ ಕೊಡುಗೆ ನೀಡಿ ಚುನಾವಣೆ ಎದುರಿಸಲಾಗಿದೆ. ಆದರೆ ಜನರು ಅದನ್ನು ಒಪ್ಪಲಿಲ್ಲ ಎಂದರು.

ದೇಶಕ್ಕೆ ಕಾಂಗ್ರೆಸ್ ಅನಿವಾರ್ಯತೆ ಇದೆ. ಪಕ್ಷದಲ್ಲಿ ಸಮಾನತೆ, ಒಳ್ಳೆಯ ಚಿಂತನೆಗಳಿವೆ. ಅದರಿಂದಾಗಿಯೆ ಬಿಜೆಪಿ ಅಧಿಕಾರ ಪಡೆಯಲು ಐವತ್ತು ವರ್ಷ ಬೇಕಾಯಿತು. ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಸಮಸ್ಯೆಗೆ ಉತ್ತರ ಸಿಗುವುದಿಲ್ಲ ಎಂದರು.

ಚುನಾವಣಾ ಫಲಿತಾಂಶದಲ್ಲಿ ಸೋಲುಂಡ ನಂತರ ಹದಿನೈದು ದಿನ ಆತ್ಮಾವಲೋಕನ ಎಂದು ಮಾತನಾಡುತ್ತಾರೆ. ಮತ್ತೆ ಅದೇ ಗುಂಪುಗಾರಿಕೆ ಮಾಡುತ್ತಾರೆ. ಇದು ಹೀಗೆ ಮುಂದುವರೆದರೆ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಪಕ್ಷ ಎದುರಿಸುತ್ತಿರುವ ಸ್ಥಿತಿ ರಾಜ್ಯಕ್ಕೂ ಬರಲಿದೆ. ಪಕ್ಷದ ನಾಯಕರು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ದಿಟ್ಟ ಹೆಜ್ಜೆ ಇಡಬೇಕು. ಪಕ್ಷವನ್ನು ಮತ್ತೆ ಹಳಿಗೆ ತರಬೇಕು ಎಂದರು.
ಗೋಷ್ಠಿಯಲ್ಲಿ ಕಾರ್ಯಕರ್ತ ಡಿ.ಬಿ.ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.