ADVERTISEMENT

ಎಲ್ಲದಕ್ಕೂ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ: ಸಿ.ಟಿ.ರವಿ ಆರೋಪ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:45 IST
Last Updated 11 ಅಕ್ಟೋಬರ್ 2025, 6:45 IST
ಸಿ.ಟಿ. ರವಿ
ಸಿ.ಟಿ. ರವಿ   

ಚಿಕ್ಕಮಗಳೂರು: ‘ರಾ‌ಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆಯಾಗಿರುವುದು ನಿಜ. ಎಲ್ಲಾ ವಿಷಯಗಳಲ್ಲೂ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದುನ್ನು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದ್ಯ ಸಿ.ಟಿ.ರವಿ ಆರೋಪಿಸಿದರು.

ಯಾರದ್ದೇ ವರ್ಗಾವಣೆ ಆಗಬೇಕಾದರೂ ಯತೀಂದ್ರ ಸಿದ್ದರಾಮಯ್ಯಗೆ ತೆರಿಗೆ ಕಟ್ಟಬೇಕು ಎಂಬ ಪ್ರತಾಪ ಸಿಂಹ ಹೇಳಿಕೆ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ನಾನು ಈವರೆಗೆ ಮುಖ್ಯಮಂತ್ರಿ ಬಳಿ ಹೋಗಿಲ್ಲ. ಆದ್ದರಿಂದ ಅನುಭವ ಆಗಿಲ್ಲ. ಆದರೆ, ವರ್ಗಾವಣೆ ದಂಧೆ ಎಂಬುದಕ್ಕೆ ನೈತಿಕತೆಯೇ ಇಲ್ಲದಂತಾಗಿದೆ’ ಎಂದು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದರು.

‘ಹೆಚ್ಚು ಹಣ ಕೊಟ್ಟವರಿಗೆ ಹುದ್ದೆಗಳು ಸಿಗುತ್ತಿವೆ. ಹುದ್ದೆ ಸಿಗದಿದ್ದರೂ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಎಂಬ ಮಾತುಗಳು ಬರುತ್ತಿವೆ. ಹಣ ಹೈಕಮಾಂಡ್‌ಗೆ ತಲುಪಿಸ್ತಾರೋ, ಅವರ ಹೆಸರಲ್ಲಿ ಇವರ ಖಜಾನೆ ಭರ್ತಿ ಮಾಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ’ ಎಂದರು.

ADVERTISEMENT

‘ಮಂತ್ರಿಗಳಿಗೆ ಸಿದ್ದರಾಮಯ್ಯ ಔತಣ ಕೂಟ ಏರ್ಪಡಿರುವುದು ಯಾವ ಸಂಭ್ರಮಕ್ಕೋ ಗೊತ್ತಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಶೇ 80 ದಾಟಿದೆ ಎಂದು ಗುತ್ತಿಗೆದಾರರು ಪ್ರೇಮ ಪತ್ರ ಬರೆದಿದ್ದಾರೆ. ಕೊಲೆ, ಸುಲಿಗೆ, ಅತ್ಯಾಚಾರ ಹೆಚ್ಚಾಗಿದೆ. 10 ಜಿಲ್ಲೆಗಳ ಜನ ಅತಿವೃಷ್ಟಿಯಿಂದ ನರಳುತ್ತಿದ್ದಾರೆ. ಇದೆಲ್ಲದರ ಸಂಭ್ರಮಾಚರಣೆ ಆಚರಿಸಲು ಔತಣಕೂಟ ಏರ್ಪಡಿಸಿದ್ದಾರೆಯೇ’ ಎಂದು ಪ್ರಶ್ನಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.