ADVERTISEMENT

ಅಜ್ಜಂಪುರಕ್ಕಿಲ್ಲ ಯಶವಂತಪುರ-ವಾಸ್ಕೊ ಎಕ್ಸ್‌ಪ್ರೆಸ್‌ ನಿಲುಗಡೆ: ಹೋರಾಟದ ಎಚ್ಚರಿಕೆ

ಜೆ.ಒ.ಉಮೇಶ್ ಕುಮಾರ್
Published 6 ನವೆಂಬರ್ 2025, 6:11 IST
Last Updated 6 ನವೆಂಬರ್ 2025, 6:11 IST
ಅಜ್ಜಂಪುರ ರೈಲು ನಿಲ್ದಾಣ      
ಅಜ್ಜಂಪುರ ರೈಲು ನಿಲ್ದಾಣ         

ಅಜ್ಜಂಪುರ: ವಾರ್ಷಿಕ ₹1.5 ಕೋಟಿಯಷ್ಟು ಆದಾಯ ಸಂಗ್ರಹವಾಗುವ, ಪಟ್ಟಣದ ರೈಲು ನಿಲ್ದಾಣದಲ್ಲಿ ನಿತ್ಯ ಸಂಚರಿಸುವ ಯಶವಂತಪುರ- ವಾಸ್ಕೊ ಎಕ್ಸ್‌ಪ್ರೆಸ್‌ ರೈಲು ನಿಲುಗಡೆ ಇಲ್ಲ. ಇದರಿಂದ ತೀವ್ರ ತೊಂರೆ ಆಗುತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶ.

ಶಿವನಿ ಆರ್.‌ಎಸ್‌ನಂತೆ ಪಟ್ಟಣದಲ್ಲಿಯೂ ವಾಸ್ಕೊ ರೈಲು ನಿಲುಗಡೆಗೆ ಅನುಮತಿ ನೀಡಬೇಕು ಎಂಬುದು ಅವರ ಬಲವಾದ ಆಗ್ರಹ.

ತಾಲ್ಲೂಕಿನ ಹೋಬಳಿ ಕೇಂದ್ರ ಶಿವನಿ ಆರ್.ಎಸ್.ನಲ್ಲಿ ಯಶವಂತಪುರ-ವಾಸ್ಕೊ ನಡುವೆ ಸಂಚರಿಸುವ ರೈಲು ನಿಲುಗಡೆಗೆ ರೈಲ್ವೆ ಇಲಾಖೆ ನ.2ರಂದು ಅನುಮತಿ ನೀಡಿದೆ. ಆದರೆ, ತಾಲ್ಲೂಕು ಕೇಂದ್ರದಲ್ಲಿ ಈ ರೈಲು ನಿಲುಗಡೆ ಅವಕಾಶ ಕಲ್ಪಿಸಿಲ್ಲ. ತಾಲ್ಲೂಕು ಕೇಂದ್ರದಿಂದ ವಿವಿಧ ಗ್ರಾಮಗಳ ಜನರು ಪ್ರಯಾಣಿಸುತ್ತಾರೆ. ಟಿಕೆಟ್ ಮಾರಾಟದಿಂದ ಹೆಚ್ಚು ಹಣ ಸಂಗ್ರಹವಾಗುತ್ತದೆ. ವಾರದ ಕೊನೆ, ಹಬ್ಬ– ಹರಿದಿನಗಳಲ್ಲಿ ದಿನದ ಆದಾಯ ₹1 ಲಕ್ಷ ದಾಟುತ್ತದೆ. ಇಷ್ಟು ಆದಾಯ ತರುವ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡದಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಾರೆ ಕಾಂಗ್ರೆಸ್‌ ನಗರ ಘಟಕ ಅಧ್ಯಕ್ಷ ತಿಪ್ಪೇಶ್‌ ಮಡಿವಾಳ್‌.

ADVERTISEMENT

ಪಟ್ಟಣದಿಂದ ಬೀರೂರು, ಹೊಸದುರ್ಗ, ತರೀಕೆರೆ, ಚನ್ನಗಿರಿ, ಹೊಳಲ್ಕೆರೆ ಭಾಗದ ಹಳ್ಳಿಗಳನ್ನು ಸಂಪರ್ಕಿಸುವ ಬಸ್ ಮಾರ್ಗ ಉತ್ತಮವಾಗಿದೆ. ಗ್ರಾಮೀಣ ಜನರು ರೈಲು ನಿಲ್ದಾಣ ತಲುಪಲು ಅನುಕೂಲಕರ ವಾತಾವರಣ ಇದೆ. ವಾಸ್ಕೊ ರೈಲು ನಿಲುಗಡೆಗೆ ಅವಕಾಶ ನೀಡಿದರೆ ರೈಲು ಪ್ರಯಾಣ ಅವಲಂಬಿಸಿರುವರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುತ್ತಾರೆ ಮುಖಂಡ ಶಿವಾನಂದ್.

ಪಟ್ಟಣದ ರೈಲು ನಿಲ್ದಾಣದಲ್ಲಿ, ಯಶವಂತಪುರ-ವಾಸ್ಕೊ, ಬೆಂಗಳೂರು-ವಿಜಯಪುರ, ಮೈಸೂರು-ಸೋಲಾಪುರ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಎಂಟು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ. ಮಾಜಿ ಸಂಸದರಾದ ಜಯಪ್ರಕಾಶ ಹೆಗ್ಡೆ, ಶೋಭಾ ಕರಂದ್ಲಾಜೆ, ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಚಿವ ವಿ.ಸೋಮಣ್ಣ ಅವರಿಗೂ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳನ್ನೂ ವಿನಂತಿಸಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ ಎಂದು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಶಿವಮೂರ್ತಿ ಬೇಸರ ವ್ಯಕ್ತಪಡಿಸಿದರು.

4 ಸಾವಿರಕ್ಕೂ ಹೆಚ್ಚು ಮನೆ, 18 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ವಾಸ್ಕೊ ಎಕ್ಸ್‌ ಪ್ರೆಸ್‌ ರೈಲಿಗೆ ನಿಲುಗಡೆ ನೀಡದಿರುವುದು ಬೇಸರ ತರಿಸಿದೆ ಎನ್ನುತ್ತಾರೆ ನಟರಾಜ್.

ಅಜ್ಜಂಪುರದಲ್ಲಿ ವಾಸ್ಕೊ ಎಕ್ಸ್‌ಪ್ರೆಸ್‌ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಇಲ್ಲವಾದರೆ, ಸಂಘ-ಸಂಸ್ಥೆಗಳ ಒಡಗೂಡಿ ಹೋರಾಟ ನಡೆಸಲಾಗುವುದು ಎನ್ನುತ್ತಾರೆ ಸಾರ್ವಜನಿಕರು.

ಅಜ್ಜಂಪುರ ಭಾಗದ ಜನರ ಮನವಿಗೆ ಸ್ಪಂದಿಸುತ್ತೇನೆ. ಈ ಬಗ್ಗೆ ಸಂಸದರೊಂದಿಗೆ ಚರ್ಚಿಸುತ್ತೇನೆ. ಬರುವ ಒಂದೆಡು ತಿಂಗಳುಗಳಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಅವಕಾಶ ಮಾಡಿಕೊಡುತ್ತೇನೆ.
-ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ಶಿವನಿ ಆರ್.ಎಸ್.‌ ನಲ್ಲಿ ರೈಲಿಗೆ ನಿಲುಗಡೆ ನೀಡಿದ್ದು ಒಳ್ಳೆಯದು. ಅದರಂತೆ ಅಜ್ಜಂಪುರ ನಿಲ್ದಾಣದಲ್ಲೂ ನಿಲುಗಡೆಗೆ ಸಚಿವರು ಅನುಮತಿ ದೊರಕಿಸಿಕೊಡಬೇಕು.
-ಜಿ.ಎಚ್.ಶ್ರೀನಿವಾಸ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.