ADVERTISEMENT

ಮರಾಠಾ ಅಭಿವೃದ್ಧಿ ಪ್ರಾಧಿಕಾರ–ಜೇನುಗೂಡಿಗೆ ಕಲ್ಲು ಹೊಡೆದಂತೆ: ವೈ‌.ಎಸ್.ವಿ.ದತ್ತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 2:36 IST
Last Updated 21 ನವೆಂಬರ್ 2020, 2:36 IST
ವೈ.ಎಸ್‌.ವಿ ದತ್ತ
ವೈ.ಎಸ್‌.ವಿ ದತ್ತ   

ಕಡೂರು: ‘ಮರಾಠಾ ಅಭಿವೃದ್ಧಿ ಪ್ರಾಧಿಕಾರದ ರಚನೆ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಇದು ಜೇನುಗೂಡಿಗೆ ಕಲ್ಲು ಹೊಡೆದಂತೆ ಎಂಬುದನ್ನು ಸರ್ಕಾರ ಗಮನಿಸುವ ಅಗತ್ಯವಿದೆ’ ಎಂದು ಮಾಜಿ ಶಾಸಕ ವೈ‌.ಎಸ್.ವಿ.ದತ್ತ ತಿಳಿಸಿದರು.

ಶುಕ್ರವಾರ ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮರಾಠಾ ಸಮುದಾಯದ ಬಗ್ಗೆ ಕನ್ನಡಿಗರಲ್ಲಿ ಯಾವ ದ್ವೇಷವಿಲ್ಲ, ಪ್ರೀತಿಯಿದೆ. ಸಹೋದರ ಭಾವನೆಯಿದೆ. ಆ ಸಮುದಾಯದ ಬಡವರಿಗೆ ಅನುಕೂಲವಾಗುತ್ತದೆ ಎಂದರೆ ಅದಕ್ಕೆ ಯಾವುದೇ ಅಪಸ್ವರ ಇಲ್ಲ. ಆದರೆ, ಈ ವಿಚಾರಕ್ಕೂ ಗಡಿ-ಭಾಷೆಗೂ ನೇರ ಸಂಬಂಧವಿದೆ. ಬೆಳಗಾವಿ ನಮ್ಮದು ಎಂದು ಸದಾ ಪ್ರತಿಪಾದಿಸುವ ಮಹಾರಾಷ್ಟ್ರದ ನಿಲುವನ್ನು ಕನ್ನಡಿಗರು ಒಪ್ಪಲು ಸಾಧ್ಯವಿಲ್ಲ. ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಬೆಳಗಾವಿ ಜೊತೆಗೆ ಕಾರವಾರವೂ ತಮ್ಮದು ಎಂದಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯ ನಡೆ ಉದ್ಧಟತನದ ಪರಮಾವಧಿ. ವಾಸ್ತವವಾಗಿ ಕನ್ನಡಿಗರೇ ಹೆಚ್ಚಿರುವ ಸೊಲ್ಲಾಪುರ ಮುಂತಾದ ಪ್ರದೇಶಗಳು ಕರ್ನಾಟಕಕ್ಕೇ ಸೇರಬೇಕು. ಸಾಮರಸ್ಯ ಕದಡುವ ಇಂತಹ ಹೇಳಿಕೆಗಳನ್ನು ನೀಡುವ ಕಾರ್ಯವನ್ನು ನಿಲ್ಲಿಸಬೇಕು’ ಎಂದರು.

‘ಮಹಾಜನ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದಿದ್ದರೆ ಇಂದು ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಇದರ ಜವಾಬ್ದಾರಿಯನ್ನು ಕೇಂದ್ರವೂ ಹೊರಬೇಕು. ಇಂತಹ ಪ್ರಕ್ಷುಬ್ಧ ಸಮಯದಲ್ಲಿ ಮರಾಠಾ ಪ್ರಾಧಿಕಾರದ ರಚನೆ ಕೇವಲ ರಾಜಕೀಯ ಲಾಭಕ್ಕಾಗಿಯಲ್ಲದೆ ಬೇರೇನೂ ಇಲ್ಲ ಎಂಬುದು ವಾಸ್ತವಿಕ ಸಂಗತಿ’ ಎಂದರು.

‘ಈಗಾಗಲೇ ಕನ್ನಡ ಪರ ಸಂಘಟನೆಗಳು ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸಿವೆ. ವಿಚಾರವಾದಿಗಳು, ಸಾಹಿತಿಗಳೂ ಸರ್ಕಾರದ ಈ ನಡೆಯನ್ನು ವಿರೋಧಿಸಿದ್ದಾರೆ. ರಾಜ್ಯ ಬಂದ್‌ಗೂ ಕರೆ ನೀಡಲಾಗಿದೆ. ಈಗಾಗಲೇ ಗಡಿ ವಿಚಾರದಲ್ಲಿ ತಗಾದೆಯಿರುವುದರಿಂದ ಈ ಸಂದರ್ಭದಲ್ಲಿ ಯಾವುದೇ ಅವಘಡ ನಡೆದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಕನ್ನಡಿಗರ ಹಿತಾಸಕ್ತಿ ಕಾಪಾಡುವ ಯಾವ ಅಂಶವೂ ಈ ಪ್ರಾಧಿಕಾರ ರಚನೆಯಲ್ಲಿಲ್ಲ. ಈ ನಡುವೆ ಇದು ಪ್ರಾಧಿಕಾರವಲ್ಲ- ನಿಗಮ ಎಂಬ ಹೇಳಿಕೆ ಸರ್ಕಾರದ ಕಡೆಯಿಂದ ಹೊರಬಂದಿದೆ. ಅದೇನೇಯಿದ್ದರೂ ಮಹಾರಾಷ್ಟ್ರ ಇದನ್ನೇ ಬೆಳಗಾವಿ ವಿಚಾರದಲ್ಲಿ ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಈ ಪ್ರಸ್ತಾವವನ್ನು ರಾಜ್ಯ ಸರ್ಕಾರ ಕೈಬಿಡಬೇಕೆಂಬುದು ನಮ್ಮ ಆಗ್ರಹ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.