ADVERTISEMENT

ಸಸ್ಯಕಾಶಿಯಲ್ಲಿ ವಿವೇಕ ತೇಜಸ್ಸು

ಗಮನ ಸೆಳೆದ ಕಾವಿ ತೊಟ್ಟ ಮಕ್ಕಳು l 211ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 5:46 IST
Last Updated 18 ಜನವರಿ 2020, 5:46 IST
ವಿವೇಕ ಪ್ರಪಂಚ... ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ 211ನೇ ಫಲಪುಷ್ಪ ಪ್ರದರ್ಶನದಲ್ಲಿ ವಿವೇಕ ಪ್ರಪಂಚ ಅನಾವರಣಗೊಂಡಿದೆ. ಗಾಜಿನ ಮನೆಯಲ್ಲಿ ವಿವೇಕಾನಂದರ ಪ್ರತಿಮೆಗಳನ್ನು ಇಡಲಾಗಿದೆ. ಧ್ಯಾನಸ್ಥ ವಿವೇಕಾನಂದರ ಜತೆಗೆ ರಾಮಕೃಷ್ಣ ಪರಮಹಂಸರು ಮತ್ತು ಶಾರದಾದೇವಿ ಅವರ ಪ್ರತಿಮೆಗಳನ್ನೂ ಇಡಲಾಗಿದೆ. ಸ್ವಾಮಿ ವಿವೇಕಾನಂದರ ವೇಷ ಧರಿಸಿದ್ದ ಮಕ್ಕಳು ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು   – ಪ್ರಜಾವಾಣಿ ಚಿತ್ರಗಳು/ರಂಜು ಪಿ.
ವಿವೇಕ ಪ್ರಪಂಚ... ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ 211ನೇ ಫಲಪುಷ್ಪ ಪ್ರದರ್ಶನದಲ್ಲಿ ವಿವೇಕ ಪ್ರಪಂಚ ಅನಾವರಣಗೊಂಡಿದೆ. ಗಾಜಿನ ಮನೆಯಲ್ಲಿ ವಿವೇಕಾನಂದರ ಪ್ರತಿಮೆಗಳನ್ನು ಇಡಲಾಗಿದೆ. ಧ್ಯಾನಸ್ಥ ವಿವೇಕಾನಂದರ ಜತೆಗೆ ರಾಮಕೃಷ್ಣ ಪರಮಹಂಸರು ಮತ್ತು ಶಾರದಾದೇವಿ ಅವರ ಪ್ರತಿಮೆಗಳನ್ನೂ ಇಡಲಾಗಿದೆ. ಸ್ವಾಮಿ ವಿವೇಕಾನಂದರ ವೇಷ ಧರಿಸಿದ್ದ ಮಕ್ಕಳು ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು   – ಪ್ರಜಾವಾಣಿ ಚಿತ್ರಗಳು/ರಂಜು ಪಿ.   

ಬೆಂಗಳೂರು: ಕಾವಿ ತೊಟ್ಟ ಪುಟಾಣಿ ಮಕ್ಕಳು ಸಸ್ಯಕಾಶಿಯಲ್ಲಿ ಕುತೂಹಲದಿಂದ ಬಗೆಬಗೆಯ ಪುಷ್ಪಗಳನ್ನು ವೀಕ್ಷಿಸುತ್ತಿದ್ದರೆ,16 ಅಡಿ ಎತ್ತರದ ವಿವೇಕ ಪ್ರತಿಮೆಯ ತೇಜಸ್ಸು ಎಲ್ಲೆಡೆ ಹರಡಿತ್ತು.

‌ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘವು ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿ
ಕೊಂಡಿರುವ 211ನೇ ಫಲಪುಷ್ಪ ಪ್ರದರ್ಶನಕ್ಕೆ ಲಾಲ್‌ಬಾಗ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಚಾಲನೆ ನೀಡಿದರು.ಸ್ವಾಮಿ ವಿವೇಕಾನಂದರ 157ನೇ ಜನ್ಮದಿನೋತ್ಸವ ಹಾಗೂ ಅವರು ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ 127 ವರ್ಷಗಳು ಸಂದ ಸ್ಮರಣಾರ್ಥಫಲಪುಷ್ಪ ಪ್ರದರ್ಶನವನ್ನು ಅವರಿಗೆ ಅರ್ಪಿಸಲಾಗಿದೆ.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿವೇಕಾನಂದರ ರೀತಿಯಲ್ಲಿಯೇ ವೇಷಭೂಷಣ ಮಾಡಿಕೊಂಡಿದ್ದು ವಿಶೇಷವಾಗಿತ್ತು.ಕನ್ಯಾಕುಮಾರಿಯಲ್ಲಿರುವ ವಿವೇಕಾನಂದರ ಸ್ಮಾರಕದ ಮಾದರಿಯನ್ನುಗಾಜಿನ ಮನೆಯ ಹೃದಯ ಭಾಗದಲ್ಲಿಸಿದ್ಧಪಡಿಸಲಾಗಿದ್ದು, ಇದು 21 ಅಡಿ ಉದ್ದ, 17 ಅಡಿ ಎತ್ತರ ಹಾಗೂ 8 ಅಡಿ ಅಗಲವಿದೆ.36 ಅಡಿ ಉದ್ದದ ಬಂಡೆಯ ಮಾದರಿಯ ಮೇಲೆ ನಿರ್ಮಿಸಲಾಗಿರುವ ಈ ದೇವಾಲಯದ ಮಾದರಿಯುಆಕರ್ಷಣೆಯ ಕೇಂದ್ರಬಿಂದುವಾಗಿದೆ. 75 ಸಾವಿರ ಕೆಂಪು, ಬಿಳಿ, ಹಳದಿ ಗುಲಾಬಿ, 75 ಸಾವಿರ ಸೇವಂತಿಗೆ ಹಾಗೂ 3 ಸಾವಿರ ವಿವಿಧ ಎಲೆಗಳನ್ನು ಬಳಸಿ ನಿರ್ಮಿಸಲಾಗಿರುವ ದೇವಾಲಯದ ಮುಂದೆ ವೀಕ್ಷಕರು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ADVERTISEMENT

ವಿವೇಕ ಪ್ರಪಂಚ:ದೇವಾಲಯದ ಮಾದರಿಯ ಮುಂಭಾಗ ಇಂಡೋ ಅಮೆರಿಕನ್ ಪುಷ್ಪಗಳು ವೀಕ್ಷಣೆಗೆ ಬಂದವರನ್ನು ಸ್ವಾಗತಿಸುತ್ತಿವೆ. ಅವುಗಳ ಮುಂದೆ ಧ್ಯಾನಸ್ಥ ವಿವೇಕಾನಂದರ ಪ್ರತಿಮೆ ಇಡಲಾಗಿದೆ. ಎಡ ಭಾಗದಲ್ಲಿ ವಿವೇಕಾನಂದರ ಪ್ರತಿಮೆ ಸ್ಥಾಪಿಸಿ, ಸುತ್ತಲೂ ವರ್ಟಿಕಲ್ ಉದ್ಯಾನ ನಿರ್ಮಿಸಲಾಗಿದೆ. ಬಲಭಾಗದಲ್ಲಿ ಷಿಕಾಗೊ ವಿವೇಕಾನಂದ ಸ್ಮಾರಕವು 75 ಸಾವಿರ ಹೂವುಗಳಿಂದ ಅರಳಿದೆ.

ಪ್ರತಿವರ್ಷವೂ ಬಳಸುವ 98ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ಹೂವುಗಳ ಜತೆಗೆ ಬ್ರೆಜಿಲ್, ಅರ್ಜೆಂಟಿನಾ ಸೇರಿದಂತೆ 10 ದೇಶಗಳ ಹೂವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೀಟಭಕ್ಷಕ ಗಿಡಗಳೂ ಇದ್ದವು.ಸೇವಂತಿಗೆ, ಬಿಗೋನಿಯಾ, ಡೇಲಿಯಾ, ಪೆಟೂನಿಯಾ, ಆರ್ಕಿಡ್ಸ್, ಪೆಂಟಾಸ್, ಗುಲಾಬಿ, ಜೆರ್‌ಬೆರಾ, ಸೈಕ್ಲೋಮನ್, ಕಾಸ್‌ಮಾಸ್, ಸೆಂಚೂರಿಯಾ ಜತೆಗೆ ಅಪರೂಪದ ಪುಷ್ಪಗಳು ಹಾಗೂ ಎಲೆ ಜಾತಿಯ ಗಿಡಗಳು ಕಣ್ಮನ ಸೂರೆಗೊಳ್ಳುತ್ತಿವೆ.‌

ವಿವೇಕಾನಂದರ ಬಗ್ಗೆ ಓದಿ, ತಿಳಿದುಕೊಂಡಿದ್ದೆವು. ಪ್ರವಾಸ ಬಂದಿದ್ದು, ಪುಷ್ಪಗಳಿಂದ ಆವರಿಸಿಕೊಂಡಿರುವ ಪ್ರತಿಮೆಯನ್ನು ನೋಡಿ ಖಷಿಯಾಯಿತು.

-ಸ್ಯೂ ಕೇವಿನ, ಇಂಗ್ಲೆಂಡ್.

ವಿವೇಕಾನಂದರ ಜೀವನದ ಸಮಗ್ರ ಚಿತ್ರಣ ಆಕರ್ಷಣೀಯವಾಗಿದೆ. ಜನತೆ ಈ ಫಲ ಪುಷ್ಪ ಪ್ರದರ್ಶನ ವೀಕ್ಷಿಸುವ ಮೂಲಕ ಅಪರೂಪದ ಅನುಭವ ಪಡೆದುಕೊಳ್ಳಬೇಕು.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ.

ಹೂವಿನಲ್ಲಿ ನಿರ್ಮಿಸಿರುವ ದೇವಾಲಯ ಮನಮೋಹಕವಾಗಿದೆ. ಮಕ್ಕಳಿಗೆ ವಿವೇಕಾನಂದರ ಬಗ್ಗೆ ತಿಳಿದುಕೊಳ್ಳಲು ಉತ್ತಮ ಅವಕಾಶ. ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ.

- ಸಾತ್ವಿರ ಕೌರ್, ರಾಜಾಜಿನಗರ.

ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಪ್ರತಿಬಾರಿಯೂ ವಿಭಿನ್ನವಾಗಿರುತ್ತದೆ. ಹಾಗಾಗಿ ತಪ್ಪದೆಯೇ ಬರುತ್ತಿರುವೆ. ಹೊಸ ಲೋಕಕ್ಕೆ ಬಂದ ಅನುಭವ ಆಗುತ್ತಿದೆ.

-ಅಶ್ವಿತಾ, ಯಶವಂತಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.